ADVERTISEMENT

ಮೊದಲ ಹಾಲು 60 ವರ್ಷದ ಆರೋಗ್ಯಕ್ಕೆ ಪೂರಕ

‘ನನ್ನ ಮಗು ಮತ್ತು ನಾನು’ ಕಾರ್ಯಕ್ರಮದಲ್ಲಿ ವೈದ್ಯೆ ಡಾ.ಸುಧಾ ಪಾಟೀಲ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:52 IST
Last Updated 24 ಮಾರ್ಚ್ 2017, 5:52 IST

ದಾವಣಗೆರೆ: ಮಗು ಹುಟ್ಟಿದ ಮೊದಲ ಅರ್ಧ ಗಂಟೆಯೊಳಗೆ ನೀಡುವ ಎದೆಹಾಲು 60 ವರ್ಷದವರೆಗಿನ ಆರೋಗ್ಯಕ್ಕೆ ಪೂರಕವಾಗಬಲ್ಲದು ಎಂದು ವೈದ್ಯೆ ಡಾ.ಸುಧಾ ಪಾಟೀಲ್ ಹೇಳಿದರು.

ನಗರದ ಸಾಯಿ ಇಂಟರ್‌ ನ್ಯಾಷನಲ್‌ ಹೋಟೆಲ್‌ನಲ್ಲಿ ಗುರುವಾರ ಹಿಮಾಲಯ ಬೇಬಿಕೇರ್‌ ಕಂಪೆನಿ ಏರ್ಪಡಿಸಿದ್ದ ‘ನನ್ನ ಮಗು ಮತ್ತು ನಾನು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆರಿಗೆ ಸಮಯದಲ್ಲಿ ಮಗುವಿನ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿರುತ್ತದೆ. ಹೀಗಾಗಿ ಮಗು ಹುಟ್ಟಿದ ತಕ್ಷಣ ಎದೆಹಾಲು ಕುಡಿಸಬೇಕು. ಮೊದಲ ಹಾಲು ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಮಗುವಿನ ಮಿದುಳು ಬೆಳವಣಿಗೆ ಎರಡು ವರ್ಷದವರೆಗೂ ಆಗುತ್ತದೆ. ಹೀಗಾಗಿ ಕಡ್ಡಾಯವಾಗಿ ಎರಡು ವರ್ಷದವರೆಗೆ ಮಗುವಿಗೆ ಎದೆಹಾಲು ಕುಡಿಸಬೇಕು ಎಂದು ಹೇಳಿದರು.

ತಂಪಿನ ವಾತಾವರಣದಿಂದಾಗಿ ಮಗುವಿನ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಹೀಗಾಗಿ ಮಗುವನ್ನು ಬೆಚ್ಚಗೆ ಇಡಬೇಕು. ಆಗಾಗ ಹಾಲು ಕುಡಿಸಬೇಕು. ಆರು ತಿಂಗಳವರೆಗೆ ಎದೆಹಾಲು ಬಿಟ್ಟು ಏನನ್ನೂ ನೀಡಬಾರದು. ನೀರು ಸಹ ಕುಡಿಸಬಾರದು ಎಂದು ಸಲಹೆ ನೀಡಿದರು.

ಬಾಟಲಿ ಮೂಲಕ ಹಾಲು ಕುಡಿಸುವುದರಿಂದ ಮಗುವಿನಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸ್ಟೀಲ್‌ ಸಾಮಗ್ರಿಗಳಿಂದಲೇ ಹಾಲು, ಆಹಾರ ನೀಡಬೇಕು. ಶುದ್ಧ ಎಣ್ಣೆ ಬಳಸಿ ನಾಜೂಕಾಗಿ ಮಗುವಿನ ದೇಹದ ಮಸಾಜ್ ಮಾಡಬೇಕು. ಇದರಿಂದ ದೇಹದ ಬೆಳವಣಿಗೆ ಉತ್ತಮವಾಗುತ್ತದೆ. ಎಲುಬುಗಳು ಗಟ್ಟಿಯಾಗುತ್ತವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಹಿಮಾಲಯ ಬೇಬಿ ಕೇರ್‌ನ ಪ್ರಧಾನ ವ್ಯವಸ್ಥಾಪಕ ಚಕ್ರವರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.