ADVERTISEMENT

ಮೋದಿ ಅಲೆಯ ನಂತರದ ದಿನ...

​ಪ್ರಜಾವಾಣಿ ವಾರ್ತೆ
Published 31 ಮೇ 2016, 9:35 IST
Last Updated 31 ಮೇ 2016, 9:35 IST

ದಾವಣಗೆರೆ: ಭಾನುವಾರ ಸಂಜೆ ಸಾವಿರಾರು ಅಭಿಮಾನಿಗಳಿಂದ ‘ಮೋದಿ.. ಮೋದಿ... ಮೋದಿ...’ ಎಂಬ ಹರ್ಷೋದ್ಗಾರಗಳ ಅಲೆಗಳು ಮಾರ್ದನಿಸಿದ ಇಲ್ಲಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲೀಗ ನೀರವ ಮೌನ. ಜನಸಾಗರವೇ ಹರಿದು ಬಂದಿದ್ದ ಮೈದಾನ ಜನರಿಲ್ಲದೇ ಬಿಕೋ ಎನ್ನುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ಎರಡು ವರ್ಷಗಳ ಸಾಧನೆ ಬಿಂಬಿಸಲು ಹಮ್ಮಿಕೊಂಡಿದ್ದ ‘ವಿಕಾಸ ಪರ್ವ’ ಸಮಾವೇಶಕ್ಕೆ ವೇದಿಕೆಯಾಗಿದ್ದ ಮೈದಾನಕ್ಕೆ ಹೊಸ ಕಳೆ ಬಂದಿತ್ತು. ಕಳೆದ ನಾಲ್ಕೈದು ದಿನಗಳಿಂದ ಕೇಂದ್ರ ಸಚಿವರು, ಬಿಜೆಪಿ ಮುಖಂಡರ ದಂಡು ಮೇಲಿಂದ ಮೇಲೆ ಬಂದು ಸಿದ್ಧತೆ ಪರಿಶೀಲಿಸಿ ಹೋಗುತ್ತಿದ್ದರಿಂದ ಮೈದಾನದಲ್ಲಿ ಜನಜಂಗುಳಿ ಇರುತ್ತಿತ್ತು. ಮೈದಾನ ಸುತ್ತ  ‘ಖಾಕಿ’ ಪಡೆಯೇ ಬೀಡು ಬಿಟ್ಟಿತ್ತು. ಇದೀಗ ಮೋದಿ ಸಮಾವೇಶ ಮುಗಿದ ಮರುದಿನದ ಸ್ಥಿತಿಯು ಬಿರುಗಾಳಿ ಬೀಸಿ ಹೋದ ನಂತರ ತಂಗಾಳಿ ತೇಲಿ ಬಂದಂತಿದೆ.

ಸಮಾವೇಶ ಮುಗಿಯುತ್ತಿದ್ದಂತೆ ಶಾಮಿಯಾನ ಗುತ್ತಿಗೆದಾರರು ವೇದಿಕೆ ತೆರವುಗೊಳಿಸಲು ಹಾಗೂ ಕುರ್ಚಿಗಳನ್ನು ತೆಗೆಯಲು ಆರಂಭಿಸಿದ್ದರು. ಸೋಮವಾರ ಬೆಳಿಗ್ಗೆ ಬೆರಳೆಣಿಕೆಯಷ್ಟು ಕಾರ್ಮಿಕರು ಭವ್ಯ ವೇದಿಕೆಯನ್ನು ಬಿಚ್ಚಿ, ಸಾಮಗ್ರಿಗಳನ್ನು ಸಾಗಿಸುತ್ತಿರುವುದು ಕಂಡುಬಂತು.

ಇದರ ನಡುವೆಯೇ ಕೆಲವು ಯುವಕರು ಮೈದಾನದ ಇನ್ನೊಂದು ಮೂಲೆಯಲ್ಲಿ ಕ್ರಿಕೆಟ್‌ ಆಟವಾಡುತ್ತಿದ್ದರು. ಮೈದಾನದಲ್ಲಿ ರಾರಾಜಿಸುತ್ತಿದ್ದ ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರ ಭಾವಚಿತ್ರಗಳಿರುವ ಬೃಹತ್‌ ಫಲಕಗಳನ್ನು ತೆರವುಗೊಳಿಸಲಾಗಿದೆ. ನಗರದ ವಿವಿಧೆಡೆಯೂ ಹಾಕಲಾಗಿದ್ದ ಫಲಕ, ಬಿಜೆಪಿಯ ಧ್ವಜಗಳನ್ನೂ ತೆರವುಗೊಳಿಸಲಾಗಿದೆ.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರಿಗೆ ಪಕ್ಷದ ವತಿಯಿಂದ ನೀರು, ಮಜ್ಜಿಗೆಯ ಪಾಕೆಟ್‌ಗಳನ್ನು ವಿತರಿಸಲಾಗಿತ್ತು. ‘ಸ್ವಚ್ಛ ಭಾರತ ಅಭಿಯಾನ’ದ ಸಂದೇಶ ಸಾರುವ ಕಸದ ಬುಟ್ಟಿಗಳನ್ನು ಅಲ್ಲಲ್ಲಿ ಇಡಲಾಗಿದ್ದರೂ, ಬಹುತೇಕ ಜನರು ಪಾನೀಯವನ್ನು ಸೇವಿಸಿ ಪಾಕೆಟ್‌ಗಳನ್ನು ಎಲ್ಲೆಂದರೆಲ್ಲಿ ಎಸೆದಿದ್ದರು.

ಮೈದಾನದೊಳಗೆ ಪ್ಲಾಸ್ಟಿಕ್‌ ಪಾಕೆಟ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸೋಮವಾರ ಬೆಳಿಗ್ಗೆ ಚಿಂದಿ ಆಯುವವರು  ಅವುಗಳನ್ನು ಆಯ್ದುಕೊಳ್ಳಲು ಪೈಪೋಟಿಗೆ ಇಳಿದಿದ್ದರು. ಪಕ್ಷದ ಕೆಲವು ಕಾರ್ಯಕರ್ತರು ಬೆಳಿಗ್ಗೆ ಮೈದಾನಕ್ಕೆ ಬಂದು ಪ್ಲಾಸ್ಟಿಕ್‌ ಹೆಕ್ಕಿ ಸ್ವಚ್ಛಗೊಳಿಸಿದರು.

ದಾವಣಗೆರೆ:  ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದ್ದ ಇಲ್ಲಿನ ಸರ್ಕಾರಿ ಹೈಸ್ಕೂಲ್‌ನ ಹಳೆಯ ಕೊಠಡಿಗೆ ಒಂದು ದಿನದ ಮಟ್ಟಿಗೆ ತಾತ್ಕಾಲಿಕವಾಗಿ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಎನಿಸಿಕೊಳ್ಳುವ ಭಾಗ್ಯ ಒದಗಿಬಂದಿತ್ತು.

ಒಂದು ದಿನಕ್ಕೆ ಪಿಎಂಒ ಭಾಗ್ಯ!
ಸಮಾವೇಶಕ್ಕೆ ಪ್ರಧಾನಿ ಬಂದಿದ್ದ ಹೈಸ್ಕೂಲ್‌ನ ಹಳೆ ಕಟ್ಟಡದ ಒಂದು ಕೊಠಡಿಯನ್ನು ಪ್ರಧಾನಿ ಕೊಠಡಿಯನ್ನಾಗಿ ಹಾಗೂ ಇನ್ನೊಂದು ಕೊಠಡಿಯನ್ನು ಪ್ರಧಾನಮಂತ್ರಿ ಕಚೇರಿಯನ್ನಾಗಿ ಮಾರ್ಪಡಿಸಿಕೊಳ್ಳಲಾಗಿತ್ತು. ಕೊಠಡಿಯ ಹೊರ ಭಾಗದಲ್ಲಿ ಕಪ್ಪು ಬಣ್ಣದಲ್ಲಿ ಈ ಬಗ್ಗೆ ಬರೆಯಲಾಗಿದೆ. ಕೊಠಡಿಯ ಹೊರ ಹಾಗೂ ಒಳ ಭಾಗಕ್ಕೆ ಬಣ್ಣ ಬಳಿದು ಸುಂದರಗೊಳಿಸಲಾಗಿತ್ತು. ‘ಹಾಟ್‌ಲೈನ್‌’ ದೂರವಾಣಿ ಸಂಪರ್ಕವನ್ನೂ ಕಲ್ಪಿಸಲಾಗಿತ್ತು. ವಿಶೇಷ ಭದ್ರತಾ ಪಡೆಯ (ಎಸ್‌ಪಿಜಿ) ವಶದಲ್ಲಿದ್ದ ಈ ಕೊಠಡಿಯತ್ತ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಮತ್ತೆ ಯಾರಿಗೂ ಇತ್ತ ಸುಳಿಯಲು ಬಿಡುತ್ತಿರಲಿಲ್ಲ.

ಸಮಾವೇಶ ಮುಗಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿಯೂ ಇಲ್ಲಿಂದ ಹೊರಟರು. ಆದರೆ, ಕೊಠಡಿ ದ್ವಾರದ ಮೇಲ್ಭಾಗದಲ್ಲಿ ಇಂಗ್ಲಿಷ್‌ನಲ್ಲಿ ಬರೆದಿರುವ ‘ಪಿಎಂ ರೂಮ್‌’, ‘ಪಿಎಂ ಆಫಿಸ್‌’ ಎಂಬ ಅಕ್ಷರಗಳು ಮಾತ್ರ ಇನ್ನೂ ಎದ್ದು ಕಾಣುತ್ತಿದ್ದವು. ಸೋಮವಾರ ಕೆಲವರು ಈ ಕೊಠಡಿಯ ಎದುರಿಗೆ ಕುಳಿತುಕೊಂಡಿದ್ದ ದೃಶ್ಯ, ಇವರು ಪ್ರಧಾನಿಯಾಗಿಯೇ ಕಾಯುತ್ತಿದ್ದಾರೆಯೇ ಎಂಬಂತೆ ಭಾಸವಾಗುತ್ತಿತ್ತು! ಇನ್ನೂ ಎಷ್ಟು ದಿನ ‘ಪಿಎಂಒ’ ಫಲಕ ರಾರಾಜಿಸಲಿದೆಯೋ ಕಾದು ನೋಡಬೇಕು.

ಹಳೆಯದಾಗಿರುವ ಕಟ್ಟಡದ ಚಾವಣಿಯು ಕೆಲವೆಡೆ ಶಿಥಿಲಾವಸ್ಥೆಗೆ ತಲುಪಿದ್ದು, ಹೆಂಚುಗಳು ಬಿದ್ದಿವೆ. ಇನ್ನು ಕೆಲವೆಡೆ ಈಗಲೊ, ಆಗಲೋ ಬೀಳುವ ಸ್ಥಿತಿಯಲ್ಲಿದೆ. ಹೀಗಿದ್ದರೂ ಈ ಕಟ್ಟಡದ ಕೊಠಡಿಗೆ ‘ಪಿಎಂಒ’ ಎನಿಸಿಕೊಂಡ ‘ಭಾಗ್ಯ’ ಲಭಿಸಿದೆ. ಇದರ ಜೊತೆಗೆ ಕಟ್ಟಡಕ್ಕೆ ಅಭಿವೃದ್ಧಿಯ ಭಾಗ್ಯವೂ ದೊರೆಯಲಿ ಎಂಬುದು ನಾಗರಿಕರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT