ADVERTISEMENT

‘ಮೋದಿ ಅವರಂಥ ಸುಳ್ಳುಗಾರನ ಕಂಡಿಲ್ಲ’

ಕಾಂಗ್ರೆಸ್‌ ಜನಾಶೀರ್ವಾದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 12:04 IST
Last Updated 4 ಏಪ್ರಿಲ್ 2018, 12:04 IST

ದಾವಣಗೆರೆ: ‘ದೇಶ ಹಲವು ಪ್ರಧಾನಮಂತ್ರಿಗಳನ್ನು ಕಂಡಿದೆ. ಆದರೆ, ನರೇಂದ್ರ ಮೋದಿ ಅವರಂಥ ಸುಳ್ಳುಗಾರ ಪ್ರಧಾನಿಯನ್ನು ನಾನು ಇದುವರೆಗೂ ನೋಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.ನಗರದ ಹೈಸ್ಕೂಲ್‌ ಮೈದಾನದಲ್ಲಿ ಮಂಗಳವಾರ ಕಾಂಗ್ರೆಸ್‌ ಜನಾಶೀರ್ವಾದ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ 5 ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಮೋದಿ ಮಹದಾಯಿ ವಿವಾದ ಬಗೆಹರಿಸುತ್ತಾರೆ, ರೈತರ ಸಾಲ ಮನ್ನಾ ಮಾಡುತ್ತಾರೆ ಎಂಬ ನಿರೀಕ್ಷೆಗಳನ್ನು ಜನರು ಇಟ್ಟುಕೊಂಡಿದ್ದರು. ಆದರೆ ಅದ್ಯಾವುದರ ಬಗ್ಗೆಯೂ ಮೋದಿ ಚಕಾರ ಎತ್ತದೆ ರಾಜ್ಯದ ಜನರನ್ನು ವಂಚಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಆತಂಕದಿಂದ ಬದುಕುತ್ತಿದ್ದಾರೆ. ಸತ್ತ ಪ್ರಾಣಿಯ ಚರ್ಮ ಸುಲಿದರೆ, ಗೋಮಾಂಸ ತಿಂದರೆ, ಹೀಗೆ ಕ್ಷುಲ್ಲಕ ಕಾರಣಕ್ಕೆ ದಲಿತರ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.ರೈತರ ಸಾಲಮನ್ನಾ ಮಾಡಲು ಸರ್ಕಾರದ ಬಳಿ ನೋಟ್‌ ಪ್ರಿಂಟ್‌ ಮಾಡುವ ಮೆಷಿನ್‌ ಇಲ್ಲ ಎಂದು ಹೇಳಿದ್ದ ಯಡಿಯೂರಪ್ಪ, ರೈತ ಬಂಧು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ರಸಗೊಬ್ಬರ, ಬಿತ್ತನೆಬೀಜ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿದ ಯಡಿಯೂರಪ್ಪಗೆ ರೈತರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.ಉದ್ಯಮಿಗಳ ₹ 2 ಲಕ್ಷ ಕೋಟಿ ಸಾಲಮನ್ನಾ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ₹ 70 ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದ್ದರು ಎಂದು ಸ್ಮರಿಸಿದರು.

‘ಅನ್ನಭಾಗ್ಯ’ ಯೋಜನೆ ಜಾರಿಯಾದಾಗ ಜನರು ಸೋಮಾರಿಗಳಾಗುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಟೀಕಿಸಿದರು. ದಶಕಗಳಿಂದ ಕಷ್ಟಪಟ್ಟು ದುಡಿದಿರುವ ಬಡವರು 2 ಹೊತ್ತು ಹೊಟ್ಟೆತುಂಬ ಊಟ ಮಾಡಿದರೆ ನಿಮಗೆ ಸಹಿಸಲು ಸಾಧ್ಯವಿಲ್ಲವೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.ಅನ್ನಭಾಗ್ಯ, ಕ್ಷೀರಭಾಗ್ಯ, ದಲಿತರಿಗೆ ಸರ್ಕಾರದ ಟೆಂಡರ್‌ಗಳಲ್ಲಿ ಮೀಸಲಾತಿ, ದೇಶದಲ್ಲೇ ಮೊದಲ ಬಾರಿಗೆ ಎಪಿಎಂಸಿಯಲ್ಲಿ ಆನ್‌ಲೈನ್‌ ವ್ಯವಸ್ಥೆ ಜಾರಿ, ಹಾಡಿ, ಹಟ್ಟಿ, ಮಜರೆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ‘ವಾಸಿಸುವನೇ ಮನೆಯೊಡೆಯ’ ಕಾನೂನು ಜಾರಿಗೆ ತಂದಿರುವುದು ಕಾಂಗ್ರೆಸ್‌ ಎಂದರು. ಮುಂದಿನ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಹಾಗೂ ಅವಕಾಶವಾದಿ ರಾಜಕಾರಣ ಮಾಡುವ ಜೆಡಿಎಸ್‌ ಪಕ್ಷವನ್ನು ಸೋಲಿಸಬೇಕು ಎಂದು ಮನವಿ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿದರು.

ADVERTISEMENT

ಮೈಸೂರಿನಲ್ಲಿ ಈಚೆಗೆ ನಡೆದ ಸಂವಾದದಲ್ಲಿ ದಲಿತ ಮುಖಂಡರೊಬ್ಬರು ಅನಂತಕುಮಾರ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ಬಗ್ಗೆ ಅಮಿತ್‌ ಶಾಗೆ ಪ್ರಶ್ನೆ ಕೇಳಿದ್ದರು. ಹೆಗಡೆ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಶಾ ಸಮರ್ಥಿಸಿಕೊಂಡರು. ಈಗ ಹಿಂದುಳಿದ ವರ್ಗಗಳ ಸಮಾವೇಶ ಮಾಡಲು ಬಿಜೆಪಿ ಹೊರಟಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಮಾಜೋಯಿಸ್‌ ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ದಲಿತರ ಬಗ್ಗೆ ನಿಜವಾದ ಕಾಳಜಿ ಇರುವ ಬಿಜೆಪಿಯು ರಾಮಾ ಜೋಯಿಸ್‌ ಅವರನ್ನು ನ್ಯಾಯಾಲಯದ ಮೆಟ್ಟಿಲೇರದಂತೆ ತಡೆಯಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ದಲಿತ ವಿರೋಧಿ ನೀತಿ ಬಿಜೆಪಿಯ ಹಿಡನ್‌ ಅಜೆಂಡಾ ಎಂದು ಸಿ.ಎಂ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.