ADVERTISEMENT

ಯಾತ್ರಿಕರಿಗೆ ಸಿಗದ ಯಾತ್ರಿ ನಿವಾಸ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 5:13 IST
Last Updated 21 ಏಪ್ರಿಲ್ 2017, 5:13 IST
ಚನ್ನಗಿರಿ ತಾಲ್ಲೂಕು ಸೂಳೆಕೆರೆಯ ಗುಡ್ಡದ ಬುಡದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿರುವುದು.
ಚನ್ನಗಿರಿ ತಾಲ್ಲೂಕು ಸೂಳೆಕೆರೆಯ ಗುಡ್ಡದ ಬುಡದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿರುವುದು.   

ಚನ್ನಗಿರಿ: ಏಷ್ಯಾದಲ್ಲಿಯೇ ಎರಡನೆಯ ಅತಿ ದೊಡ್ಡ ಕೆರೆ ಎನಿಸಿಕೊಂಡಿರುವ ಸೂಳೆಕೆರೆಯ ಗುಡ್ಡದ ತಪ್ಪಲಲ್ಲಿ ಏಳು ವರ್ಷಗಳ ಹಿಂದೆ ನಿರ್ಮಿಸಿದ್ದ ಯಾತ್ರಿ ನಿವಾಸ ಶಿಥಿಲವಾಸ್ಥೆ ತಲುಪಿದೆ.ಸೂಳೆಕೆರೆಯನ್ನು ಪ್ರಸಿದ್ಧ ಪ್ರವಾಸಿ ಸ್ಥಳವನ್ನಾಗಿ ಮಾಡುವ ಉದ್ದೇಶದಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ₹ 2 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸವನ್ನು ಇಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿತ್ತು. ಹೆಸರಿಗಷ್ಟೇ ಯಾತ್ರಿ ನಿವಾಸ ಇದ್ದು, ಅಲ್ಲಿ ಪ್ರವಾಸಿಗರಿಗೆ ಸೂಕ್ತ ಸೌಕರ್ಯಗಳನ್ನೇ ಕಲ್ಪಿಸಲಿಲ್ಲ. ಊಟೋಪಚಾರದ ವ್ಯವಸ್ಥೆಯನ್ನೂ ಮಾಡಲಿಲ್ಲ.

ನಿರ್ಮಾಣವಾಗಿ ಏಳು ವರ್ಷಗಳು ಕಳೆದಿದ್ದು, ಇದುವರೆಗೆ ಕೇವಲ ಸರ್ಕಾರಿ ಆಯೋಜಿತ ಕಾರ್ಯಕ್ರಮಗಳನ್ನು ಮಾತ್ರ ಇಲ್ಲಿ ನಡೆಸಲಾಗಿದೆ. ಸೂಳೆಕೆರೆಯನ್ನು ನೋಡಲು ಬಂದ ಪ್ರವಾಸಿಗರು ಮೋಜು ಮಸ್ತಿ ಮಾಡುವ ಕೇಂದ್ರವಾಗಿ ಇದು ಮಾರ್ಪಟ್ಟಿದೆ. ಕೊಠಡಿಗಳನ್ನು ನಿರ್ವಹಣೆ ಮಾಡದೇ ಇರುವುದರಿಂದ ಗೋಡೆಗಳು ಬಿರುಕುಬಿಟ್ಟಿವೆ. ಕಿಟಕಿಗಳ ಗಾಜುಗಳು ಒಡೆದು ಹಾಳಾಗಿವೆ. ಬಾಗಿಲುಗಳು ಮುರಿದುಹೋಗಿವೆ. ದಿನೇ ದಿನೇ ಶಿಥಿಲಾವಸ್ಥೆ ತಲುಪಿ ಸರ್ಕಾರದ ಅಮೂಲ್ಯವಾದ ಆಸ್ತಿ ಗೆದ್ದಿಲು ಹಿಡಿದು ಹಾಳಾಗುವ ಹಂತ ಮುಟ್ಟಿದೆ.

ಸೂಳೆಕೆರೆಯಲ್ಲಿ ದೋಣಿವಿಹಾರ ಕೇಂದ್ರ ಹಾಗೂ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಆದರೆ ಇದುವರೆಗೆ ಪ್ರವಾಸಿಗರಿಗೆ ಮಾತ್ರ ಯಾವುದೇ ರೀತಿಯ ಅನುಕೂಲ ಆಗಿಲ್ಲ.
ನಿವಾಸದ ಸುತ್ತಮುತ್ತ ಯಥೇಚ್ಛ ವಾಗಿ ಗಿಡಗಂಟಿಗಳು ಬೆಳೆದಿದ್ದು, ಭೂತ ಬಂಗಲೆಯಂತೆ ಕಾಣುತ್ತಿದೆ. ಇದರಿಂದ ಸೂಳೆಕೆರೆಗೆ ಬರುವ ಪ್ರವಾಸಿಗರ ಸಂಖ್ಯೆಯೇ ಕಡಿಮಯಾಗುತ್ತಿದೆ. ಮುಂದಿನ ದಿನಗಳಲ್ಲಿಯಾದರೂ ಪ್ರವಾ ಸೋದ್ಯಮ ಇಲಾಖೆ ಅಧಿಕಾರಿಗಳು ಈ ಯಾತ್ರಿ ನಿವಾಸವನ್ನು ಪ್ರವಾಸಿಗರಿಗೆ ಕಲ್ಪಿಸಿಕೊಡಲು ಮುಂದಾಗುವುದು ಅಗತ್ಯ ಎನ್ನುತ್ತಾರೆ ಪ್ರವಾಸಿಗರಾದ ಶಿವಮೊಗ್ಗದ ರಾಜಶೇಖರಪ್ಪ, ಚಿತ್ರದುರ್ಗದ ರವೀಂದ್ರ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.