ADVERTISEMENT

ರಾಜ್ಯದ ಅನುದಾನ ₹ 2 ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 9:02 IST
Last Updated 10 ಸೆಪ್ಟೆಂಬರ್ 2017, 9:02 IST
ದಾವಣಗೆರೆ ವಿದ್ಯಾರ್ಥಿಭವನದಿಂದ ಲಕ್ಷ್ಮಿ ಪ್ಲೋರ್‌ ಮಿಲ್‌ ವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಶನಿವಾರ ಚಾಲನೆ ನೀಡಿದರು.
ದಾವಣಗೆರೆ ವಿದ್ಯಾರ್ಥಿಭವನದಿಂದ ಲಕ್ಷ್ಮಿ ಪ್ಲೋರ್‌ ಮಿಲ್‌ ವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಶನಿವಾರ ಚಾಲನೆ ನೀಡಿದರು.   

ದಾವಣಗೆರೆ: ದಾವಣಗೆರೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದ ₹ 2 ಸಾವಿರ ಕೋಟಿ ಅನುದಾನ ಬಳಕೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ತಿಳಿಸಿದರು. ದಾವಣಗೆರೆ ತಾಲ್ಲೂಕು ಬೇತೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈಗ ₹ 36 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ₹ 4.85 ಕೋಟಿ ಮೊತ್ತದಲ್ಲಿ ದಾವಣಗೆರೆ ಬೂದಿಹಾಳ–ಅರಸಾಪುರ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, ₹ 4 ಕೋಟಿ ವೆಚ್ಚದಲ್ಲಿ ದಾವಣಗೆರೆ ಕೊಂಡಜ್ಜಿ ಕುರುಬರಹಳ್ಳಿರಸ್ತೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ (ಆವರಗೊಳ್ಳ). ₹ 4 ಕೋಟಿ ಮೊತ್ತದಲ್ಲಿ ದಾವಣಗೆರೆ ಮಲೇಬೆನ್ನೂರು ರಸ್ತೆಯ ಅಂದಾಜು ₹ 3 ಕೋಟಿ ಸೇರಿದಂತೆ ಜಿಲ್ಲೆಯಲ್ಲಿ ನೂರಾರು ಕಿ.ಮೀಗಳ ಕಾಂಕ್ರೀಟ್ ರಸ್ತೆಯಾಗಿವೆ ಎಂದು ಮಾಹಿತಿ ನೀಡಿದರು.

ತಾಲ್ಲೂಕಿನ ಬೇತೂರು, ಬೂದಾಳ್, ಮಾಗನಹಳ್ಳಿ, ಕೊಂಡಜ್ಜಿ, ಲೋಕಿಕೆರೆ, ಮಲೇಬೆನ್ನೂರು ಸೇರಿದಂತೆ ಹಲವು ರಸ್ತೆಗಳ ಕಾಂಕ್ರೀಟಿಕರಣ ಕಾರ್ಯ ನಡೆಯುತ್ತಿದೆ. ಹಾಗಾಗಿ, ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ. ಮುಖ್ಯ ರಸ್ತೆಗಳ ಕಾಮಗಾರಿಗಳು ಶೇ 90ರಷ್ಟು ಮುಗಿದಿದ್ದು, ಉಳಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಲಾಗುವುದು ಎಂದು ಹೇಳಿದರು.

ADVERTISEMENT

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿಯಿಂದ ತನಿಖೆ ಮಾಡಿಸುತ್ತಿದೆ. ಒಂದು ವೇಳೆ ಕುಟುಂಬಸ್ಥರು ಸಿಐಡಿಗೆ ವಹಿಸಲು ಕೇಳಿದರೆ ಅದನ್ನೂ ಮಾಡಲಿದೆ. ಒಟ್ಟಾರೆ ಸತ್ಯ ಹೊರಬರಲಿ’ ಎಂದರು. ಇದೇ ವೇಳೆ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ನೀಡಲಾಗಿರುವ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್‌ ಅನ್ನು ಫಲಾನುಭವಿಗಳಿಗೆ ವಿತರಿಸಿದರು.

ಫಲಾನುಭವಿ ಮಹಾದೇವಪ್ಪ ಮತ್ತು ಪರಶುರಾಮ್ ಮಾತನಾಡಿ, ಸರ್ಕಾರದ ಸಹಾಯಧನದಿಂದ ಟ್ರ್ಯಾಕ್ಟರ್ ದೊರೆತಿರುವುದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ರೇಣುಕಮ್ಮ ಕರಿಬಸಪ್ಪ, ಮಹಾನಗರ ಪಾಲಿಕೆ ಉಪಾಧ್ಯಕ್ಷೆ ಮಂಜಮ್ಮ, ದಾವಣಗೆರೆ ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸಂಗಪ್ಪ, ನಗರಪಾಲಿಕೆ ಸದಸ್ಯ ಬಸಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.