ADVERTISEMENT

ರಾಜ್ಯಪಾಲರ ಅಂಕಿತಕ್ಕೆ ಆಗ್ರಹ

ಭೂ ಸುಧಾರಣಾ ತಿದ್ದುಪಡಿ ಮಸೂದೆ

​ಪ್ರಜಾವಾಣಿ ವಾರ್ತೆ
Published 15 ಮೇ 2017, 3:56 IST
Last Updated 15 ಮೇ 2017, 3:56 IST
ದಾವಣಗೆರೆ:  ‘ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆ ಎರಡೂ ಸದನಗಳಲ್ಲಿ ಮಂಡನೆಯಾಗಿ, ಸದಸ್ಯರು ಬೆಂಬಲ ಸೂಚಿಸಿ ಎರಡು ತಿಂಗಳಾದರೂ ರಾಜ್ಯ ಸರ್ಕಾರವು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ’ ಎಂದು ಶಾಸಕ ಕೆ.ಶಿವಮೂರ್ತಿ ದೂರಿದರು.
 
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಮಸೂದೆಯು ಸದನದಲ್ಲಿ ಮಂಡನೆಯಾಗಿ ಸದಸ್ಯರು ಬೆಂಬಲ ಸೂಚಿಸಿದ ಎಂಟು ದಿನದೊಳಗೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಬೇಕು ಎಂಬ ನಿಯಮವಿದೆ. ಆದರೆ, ಸರ್ಕಾರವು ಈ ಮಸೂದೆಯನ್ನು ರಾಜ್ಯಪಾಲರ ಗಮನಕ್ಕೆ ತಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
 
ಅಲೆಮಾರಿ, ಆದಿವಾಸಿ, ಅರಣ್ಯವಾಸಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಾಂತ್ರಿಕಾರಕವಾದ ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಮಂಡನೆ ಮಾಡಲಾಗಿತ್ತು. ಈ ಮಸೂದೆಗೆ ಎರಡೂ ಸದನಗಳ ಸದಸ್ಯರೂ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.
 
ಸುಮಾರು 58 ಸಾವಿರ ದಾಖಲೆ ರಹಿತ ಗ್ರಾಮಗಳಿದ್ದು, ಕಂದಾಯ ಗ್ರಾಮಗಳ ಸ್ಥಾನಮಾನ ನೀಡಬೇಕಾದ ತುರ್ತು ಇದೆ. ಕೂಡಲೇ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ಕೊಡಬೇಕು ಎಂದು ಅವರು ಆಗ್ರಹಿಸಿದರು.
 
ಶೀಘ್ರದಲ್ಲಿಯೇ ಶಾಸಕರ ನಿಯೋಗದೊಂದಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ, ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಹನುಮಂತಪ್ಪ, ಮಂಜುನಾಥ, ಶಮಿವುಲ್ಲಾ, ಹನುಮಂತನಾಯ್ಕ, ಪೀರ್‌ಸಾಬ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.