ADVERTISEMENT

ರೈತರಿಗೆ ಸಕಾಲದಲ್ಲಿ ಕೃಷಿ ಪರಿಕರ ಒದಗಿಸಿ

ಕೃಷಿ ಸಂಬಂಧಿಸಿದ ಇಲಾಖೆಗಳ ಸಭೆಯಲ್ಲಿ ಜಿಲ್ಲಾಧಿಕಾರಿ ರಮೇಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 10:20 IST
Last Updated 26 ಮೇ 2018, 10:20 IST

ದಾವಣಗೆರೆ: ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳನ್ನು ಸಕಾಲದಲ್ಲಿ ಪೂರೈಸಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರಸಗೊಬ್ಬರ ಮಾರಾಟಗಾರರು, ರಸಗೊಬ್ಬರ ಉತ್ಪಾದಕರು, ಸಹಕಾರ ಸಂಘಗಳ ನಿಬಂಧಕರು, ಸಾಗಾಣಿಕೆದಾರರು ಹಾಗೂ ರಾಜ್ಯ ಸಹಕಾರ ಮಹಾ ಮಂಡಳಿ ನಿಗಮ ಹಾಗೂ ಕೃಷಿ ಇಲಾಖೆ ಸಭೆಯಲ್ಲಿ ಅವರು ಮಾತನಾಡಿದರು.

ರಸಗೊಬ್ಬರದ ಕೊರತೆ ಕಂಡು ಬಂದರೆ ಹೆಚ್ಚಿನ ಸರಬರಾಜು ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಈ ಬಾರಿ ರಸಗೊಬ್ಬರವನ್ನು ಪಿಒಎಸ್‌ ಉಪಕರಣದ ಮೂಲಕ ವಿತರಿಸುತ್ತಿದ್ದು, ಈಗಾಗಲೇ ಜಿಲ್ಲೆಯ ಎಲ್ಲಾ ರಸಗೊಬ್ಬರ ಮಾರಾಟಗಾರರಿಗೆ ಪಿಒಎಸ್‌ ಉಪಕರಣಗಳನ್ನು ವಿತರಿಸಲಾಗಿದೆ. ರೈತರು ಆಧಾರ್ ಸಂಖ್ಯೆ ನೀಡಿ, ರಸಗೊಬ್ಬರ ಖರೀದಿಸಬೇಕು ಎಂದು ತಿಳಿಸಿದರು.

ADVERTISEMENT

ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್ ಮಾತನಾಡಿ, ‘ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಜಿಲ್ಲೆಯಲ್ಲಿ ಇದುವರೆಗೂ ವಾಡಿಕೆಗಿಂತ (92 ಮಿ.ಮಿ) ಅಧಿಕ (159 ಮಿ.ಮಿ) ಮಳೆಯಾಗಿದೆ. ಬಿತ್ತನೆಗೆ ಪೂರಕವಾದ ವಾತಾವರಣ ಇದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಗೆ ಮುಂಗಾರಿಗಾಗಿ 1,45,637 ಟನ್ ರಸಗೊಬ್ಬರ ಬೇಕು. ಮೇ ತಿಂಗಳಿಗೆ  22,650 ಟನ್ ರಸಗೊಬ್ಬರ ಬೇಡಿಕೆಯಿದ್ದು, ಈಗಾಗಲೇ ಜಿಲ್ಲೆಯ ಖಾಸಗಿ ಮಾರಾಟಗಾರರಲ್ಲಿ 26,000 ಟನ್ ಹಾಗೂ ರಾಜ್ಯ ಸಹಕಾರ ಮಹಾ ಮಂಡಳಿ ನಿಗಮದಲ್ಲಿ 18,598 ಟನ್ ದಾಸ್ತಾನು ಇರಿಸಲಾಗಿದೆ. ರಸಗೊಬ್ಬರದ ಕೊರತೆ ಇಲ್ಲ ಎಂದು ತಿಳಿಸಿದರು.

ಮುಂಗಾರಿಗೆ 49,103 ಕ್ವಿಂಟಲ್‌ ಬಿತ್ತನೆ ಬೀಜದ ಅವಶ್ಯಕತೆಯಿದ್ದು, ಕೆಎಸ್ಎಸ್‌ಸಿ, ಕೆಒಎಫ್, ಎನ್‌ಎಸ್‌ಸಿ ಹಾಗೂ ಖಾಸಗಿ ಮಾರಾಟಗಾರರಲ್ಲಿ ಎಲ್ಲಾ ರೀತಿಯ ಬಿತ್ತನೆ ಬೀಜಗಳು ಲಭ್ಯ ಇವೆ. 24 ರೈತ ಸಂಪರ್ಕ ಕೇಂದ್ರಗಳು, 13 ಸಹಕಾರ ಸಂಘಗಳು ಮತ್ತು 9 ಹೆಚ್ಚುವರಿ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಆರ್. ಹಂಸವೇಣಿ, ವಿವಿಧ ಇಲಾಖೆಗಳ ಮುಖ್ಯಸ್ಥರು, ಎಲ್ಲಾ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಭಾಗವಹಿಸಿದ್ದರು.

ಅಂಕಿ ಅಂಶಗಳು

1.45 ಲಕ್ಷ ಟನ್: ಈ ಹಂಗಾಮಿಗೆ ಬೇಕಿರುವ ರಸಗೊಬ್ಬರ

22,650 ಟನ್‌: ಮೇ ತಿಂಗಳಿಗೆ ಬೇಕಾಗುವ ರಸಗೊಬ್ಬರ

44,598 ಟನ್: ಜಿಲ್ಲೆಯಲ್ಲಿರುವ ಗೊಬ್ಬರ ದಾಸ್ತಾನು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.