ADVERTISEMENT

ರೈತರ ಬದುಕಿಗೆ ಎರವಾದ ಜಾಕ್ವೆಲ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 4:59 IST
Last Updated 12 ಜುಲೈ 2017, 4:59 IST

ಹರಿಹರ: ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು’ ಎಂಬ ನಾಣ್ನುಡಿ ಯಂತೆ ನದಿ ತುಂಬಿ ಹರಿಯುವಾಗ ಕೆರೆಗಳಿಗೆ ನೀರು ತುಂಬಿಸದೇ, ಜಾಕ್ವೆಲ್‌ ಬಳಿ ಕಾಮಗಾರಿ ಹಮ್ಮಿಕೊಂಡಿರುವ ಜಿಲ್ಲಾಡಳಿತದ ಕ್ರಮ ಕೆರೆ ಅವಲಂಬಿತ ಗ್ರಾಮಸ್ಥರ ಹಾಗೂ ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಪೂರಕವಾಗಿ ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ಬಳಿ ಜಾಕವೆಲ್‌ ನಿರ್ಮಾಣವಾಗಿತ್ತು.
ಆದರೆ, ನದಿ ತುಂಬಿ ಹರಿಯುವ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಬದಲು ಕಾಲುವೆ ನಿರ್ಮಾಣ ಕಾಮಗಾರಿ ನಡೆಸುವ ಮೂಲಕ ಜಿಲ್ಲಾಡಳಿತ ಯೋಜನೆಯ ಆಶಯಕ್ಕೆ ಕೊಡಲಿಪೆಟ್ಟು ನೀಡಿದೆ.

‘ಬೇಸಿಗೆಯಲ್ಲಿ ನದಿಗೆ ಪಂಪ್‌ಸೆಟ್‌ ಅಳವಡಿಸಿ 22 ಕೆರೆಗೆ ನೀರು ತುಂಬಿಸುಲು ಆಡಳಿತ ಪ್ರಯತ್ನಿಸಿತ್ತು. ಮಳೆಗಾಲದಲ್ಲಿ ನದಿಯಲ್ಲಿ ಸ್ವಾಭಾವಿಕ ಹರಿವಿದ್ದರೂ, ಅದನ್ನು ಬಳಸಿಕೊಳ್ಳದೇ ಕಾಮಗಾರಿಗೆ ಆದ್ಯತೆ ನೀಡಿದ್ದಾರೆ. ಅಧಿಕಾರಿಗಳ ಈ ದ್ವಂದ್ವ ನೀತಿ ರೈತರ ಮಧ್ಯ ಮನಸ್ತಾಪ ಹಾಗೂ ಜಗಳಕ್ಕೆ ಕಾರಣವಾಗುತ್ತದೆ. ಜಿಲ್ಲಾಡಳಿತ ದ್ವಂದ್ವ ನೀತಿಯನ್ನು ಕೈಬಿಟ್ಟು, ಹರಿಯುತ್ತಿರುವ ನೀರನ್ನು ಸದ್ಬಳಕೆ ಮಾಡಕೊಳ್ಳಬೇಕು’ ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ. 

ADVERTISEMENT

‘ರಾಜ್ಯದಲ್ಲಿ ಮುಂಗಾರು ವಿಫಲ ವಾಗುವ ಲಕ್ಷಣಗಳು ಗೋಚರಿಸುತ್ತಿವೆ. ನದಿಯಲ್ಲಿ ಹರಿಯುತ್ತಿರುವ ನೀರನ್ನು 22 ಕೆರೆಗೆ ತುಂಬಿಸಬಹುದಾಗಿತ್ತು. ಮಳೆ ಗಾಲದಲ್ಲಿ ತಡೆಗೋಡೆ ಕಾಮಗಾರಿ ಹಮ್ಮಿಕೊಳ್ಳುವ ಮೂಲಕ ಜಿಲ್ಲಾಡಳಿತ ರೈತರ ಜೀವನದೊಂದಿಗೆ ಚೆಲ್ಲಾಟ ವಾಡುತ್ತದೆ’ ಎಂದು 22 ಕೆರೆಗಳ ಫಲಾನುಭವಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಬಳಸಿದ ಕಬ್ಬಿಣ ಸಲಾಕೆಗಳ ಸಾಮರ್ಥ್ಯ ಹಾಗೂ ನೀಲನಕ್ಷೆಯ ತಾಂತ್ರಿಕ ದೋಷಗಳೇ ಈ ಅವಘಡಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಅವೈಜ್ಞಾನಿಕ ನೀತಿ ರೈತರ ಬದುಕನ್ನು ಹಸನುಗೊಳಿಸುವ ಯೋಜನೆ ನನೆಗುದಿಗೆ ಬಿದ್ದಿದೆ ಎಂಬುದು ಸ್ಥಳಿಯರ ಆರೋಪ.

ಬೇಸಿಗೆಯಲ್ಲೇ ತಡೆಗೋಡೆ ನಿರ್ಮಿಸುವ ಕಾರ್ಯ ನಡೆದಿದ್ದರೆ, ನದಿ ತುಂಬಿರುವ ಪ್ರಸ್ತುತ ಸಂದರ್ಭದಲ್ಲಿ 22ಕೆರೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಬಹುದಾಗಿತ್ತು.  ಈ ಘಟನೆ ಯಿಂದ 22 ಕೆರೆಗೆ ನೀರು ತುಂಬಿಸುವ ಕಾರ್ಯ ಮತ್ತಷ್ಟು ವಿಳಂಬ ವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಂಕ್ರೀಟ್‌ ತಡೆಗೋಡೆ ಕುಸಿತ
ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ನದಿ ತೀರದಲ್ಲಿರುವ 22ಕೆರೆಗೆ ನೀರು ತುಂಬಿಸುವ ಜಾಕ್ವೆಲ್‌ ಬಳಿ ನಿರ್ಮಾಣಗೊಳ್ಳುತ್ತಿದ್ದ 14 ಅಡಿ ಎತ್ತರ ಹಾಗೂ 60ಅಡಿ ಉದ್ದದ ಕಾಂಕ್ರೀಟ್ ತಡೆಗೋಡೆ ಸೋಮವಾರ ಕುಸಿದಿದ್ದು, ಕಾಮಗಾರಿ ನಿರತ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನದಿಯಿಂದ ಜಾಕ್ವೆಲ್‌ ನೀರು ಸರಬರಾಜು ಮಾಡುವ ಕಾಲುವೆಗೆ ಸಂಪರ್ಕ ಕಲ್ಪಿಸುವ ಹೆಚ್ಚುವರಿ ಕಾಲುವೆ ಕಾಮಗಾರಿ ಪ್ರಗತಿಯಲ್ಲಿತ್ತು. ಜಾಕ್ವೆಲ್‌ ಬಲಭಾಗದ 60 ಅಡಿ ಉದ್ದದ ಕಾಂಕ್ರೀಟ್ ತಡೆಗೋಡೆಗೆ ಮಣ್ಣು ಭರ್ತಿ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ, ಇದ್ದಕ್ಕಿಂದ್ದಂತೆ ಗೋಡೆಯೊಳಗಿದ್ದ ಕಬ್ಬಿಣದ ಸಲಾಕೆಗಳು ಮುರಿಯುವ ಶಬ್ಧ ಕೇಳಿದ ಕಾರ್ಮಿಕರು ಅಲ್ಲಿಂದ ಓಡಿ ಹೋಗಿದ್ದಾರೆ. ಕಾರ್ಮಿಕರು ನಿರ್ಗಮಿಸಿದ ಕೆಲವೇ ಕ್ಷಣಗಳಲ್ಲಿ ಗೋಡೆ, ಅಡಿಪಾಯ ಸಮೇತ ಮಗುಚಿಕೊಂಡಿದೆ. ಕಾರ್ಮಿಕರು ಭಾರಿ ಅನಾಹುತದಿಂದ ಪಾರಾಗಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್ ಸಚಿನ್, ತಡೆಗೋಡೆ ನಿರ್ಮಾಣಗೊಂಡು ಕೇವಲ ವಾರವಾಗಿತ್ತು. ಕಾಂಕ್ರೀಟ್ ಗೋಡೆ ಸಂಪೂರ್ಣವಾಗಿ ಘನೀಕೃತಗೊಳ್ಳಲು ಕನಿಷ್ಠ 25ದಿನಗಳ ಕಾಲಾವಕಾಶ ಅಗತ್ಯ.

ರೈತರ ಒತ್ತಡಕ್ಕೆ ಮಣಿದ ಮೇಲ್ವಿಚಾರಕ ಮಣ್ಣು ಭರ್ತಿ ಮಾಡಲು ಕಾರ್ಮಿಕರಿಗೆ ನಿರ್ದೇಶನ ನೀಡಿದ್ದರು. ಮಣ್ಣಿನ ಒತ್ತಡ ತಡೆಯಲಾರದೇ ಗೋಡೆ ಒಂದೆಡೆ ವಾಲಿದೆ. ಈ ಕಾಮಗಾರಿಗೆ ಸಂಸ್ಥೆ ಯಾವುದೇ ಸರ್ಕಾರಿ ಅನುದಾನ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.