ADVERTISEMENT

ವಿದ್ಯುತ್‌ ಪರಿವರ್ತಕ ಅಳವಡಿಸಲು ಆಗ್ರಹ

ಬೆಸ್ಕಾಂ ವಿರುದ್ಧ ರೈತರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:04 IST
Last Updated 8 ಫೆಬ್ರುವರಿ 2017, 6:04 IST

ದಾವಣಗೆರೆ: ತತ್ಕಾಲ್‌ ಯೋಜನೆಯಡಿ ಶುಲ್ಕ ಪಾವತಿಸಿರುವ ರೈತರಿಗೆ ವಿದ್ಯುತ್‌ ಅಳವಡಿಸಲು ಬೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ್ ನಾಯ್ಕ ಒತ್ತಾಯಿಸಿದರು.

ಪ್ರತಿ ರೈತರು 25 ಕೆ.ವಿ ವಿದ್ಯುತ್‌ ಪರಿವರ್ತಕಕ್ಕಾಗಿ ₹ 17,730 ಶುಲ್ಕ ಪಾವತಿಸಿದ್ದಾರೆ. ಅಲ್ಲದೇ ವಿದ್ಯುತ್‌ ಜಾಲವನ್ನೂ ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಂಡಿದ್ದಾರೆ. ಹೀಗಿದ್ದರೂ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿ ಸಲು ಬೆಸ್ಕಾಂ ಮುಂದಾಗಿಲ್ಲ. ಇದರಿಂದ ರೈತರು ಬೆಳೆದ ಎರಡರಿಂದ ಮೂರು ಬೆಳೆಗಳು ಹಾಳಾಗಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಲ್ಲೆಯಲ್ಲಿ 5ಸಾವಿರಕ್ಕೂ ಹೆಚ್ಚು ರೈತರು ವಿದ್ಯುತ್‌ ಪರಿವರ್ತಕಕ್ಕಾಗಿ ಹಣ ತುಂಬಿದ್ದಾರೆ. ಆದರೆ, ಕೇವಲ 1,563 ರೈತರಿಗೆ ಮಾತ್ರ ವಿದ್ಯುತ್ ಪರಿವರ್ತಕ ನೀಡುವುದಾಗಿ ಬೆಸ್ಕಾಂ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಇದುವರೆಗೆ ವಿದ್ಯುತ್‌ ಪರಿವರ್ತಕ ಅಳವಡಿಸುವ ಶೇ 25ರಷ್ಟೂ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿಲ್ಲ ಎಂದು ಆರೋಪಿಸಿದರು.

ವಿದ್ಯುತ್‌ ಪರಿವರ್ತಕ ಅಳವಡಿಸಲು ಬೆಸ್ಕಾಂಗೆ ಸೂಚಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಲಾಗಿತ್ತು. ರೈತ ಸಂಘದ ಮನವಿ ಆಲಿಸಿದ ಆಯೋಗ ವಿದ್ಯುತ್‌ ಪರಿವರ್ತಕ ಅಳವಡಿಸಲು ಬೆಸ್ಕಾಂಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ. ಕಾಲಮಿತಿಯಲ್ಲಿ ಪರಿವರ್ತಕ ಅಳವಡಿ ಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿ ಎಕರೆಗೆ ₹ 2 ಲಕ್ಷ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಶೇಖರ್‌ ನಾಯ್ಕ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಾದ ಚಿಕ್ಕನಹಳ್ಳಿ ಮಲ್ಲೇಶಪ್ಪ, ಮಲ್ಲೇನಹಳ್ಳಿ ಅಜ್ಜಯ್ಯ, ಜಗ್ಲಿ ನಾಗರಾಜ್, ಸಂತೋಷ್ ನಾಯ್ಕ, ಮಲ್ಲಶೆಟ್ಟಿಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.