ADVERTISEMENT

ಸಂಸದ ಅನಂತಕುಮಾರ ಹೆಗಡೆ ವಿರುದ್ಧ ವೈದ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 4:56 IST
Last Updated 9 ಜನವರಿ 2017, 4:56 IST

ಹೊನ್ನಾಳಿ: ವೈದ್ಯ ಡಾ.ಮಧುಕೇಶವ ಮತ್ತು ಅವರ ಸಿಬ್ಬಂದಿ ಮೇಲೆ ಸಂಸದ ಅನಂತಕುಮಾರ ಹೆಗಡೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ವೈದ್ಯಕೀಯ ಸಂಘದ ರಾಜ್ಯ ಘಟಕದ ಸದಸ್ಯ ಡಾ. ಈಶ್ವರನಾಯ್ಕ ಹೇಳಿದರು.

ಶನಿವಾರ ಪಟ್ಟಣದಲ್ಲಿ ತಾಲ್ಲೂಕು ಸರ್ಕಾರಿ ವೈದ್ಯರ ಸಂಘ, ಖಾಸಗಿ ವೈದ್ಯರ ಸಂಘ, ಆಯುಷ್‌ ವೈದ್ಯರು ಮತ್ತು ತಾಲ್ಲೂಕು ಔಷಧ ಮಾರಾಟ ಹಾಗೂ ವಿತರಕರ ಸಂಘದಡಿಯಲ್ಲಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಯಲ್ಲಿ ಅವರು ಮಾತನಾಡಿದರು.

ತಮ್ಮ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿ ಹೆಗಡೆಯವರು ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಹೇಯ ಕೃತ್ಯ. ಅವರು ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಾಗಿದ್ದು, ತಮ್ಮ ಸ್ಥಾನಮಾನದ ಕುರಿತು ಯೋಚಿಸದೆ ಒಬ್ಬ ಅನಾಗರಿಕನಂತೆ ವರ್ತಿಸಿದ್ದಾರೆ. ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಅಮಾನುಷ. ಇದನ್ನು ತಾಲ್ಲೂಕಿನ ಎಲ್ಲಾ ವೈದ್ಯರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ ಎಂದು ಹೇಳಿದರು.

ಸಂಸದರು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಪಕ್ಷದ ರಾಜ್ಯಾಧ್ಯಕ್ಷರು ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ. ಕೆಂಚಪ್ಪ ಮಾತನಾಡಿ, ದೇಶದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಆದ್ದರಿಂದ ಸರ್ಕಾರಗಳು ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ವೈದ್ಯರು ನಿರ್ಭೀತಿಯಿಂದ ಸೇವೆ ಸಲ್ಲಿಸುವುದು ಕಷ್ಟವಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ವೈದ್ಯರ ಸಂಘದ ಪದಾಧಿಕಾರಿಗಳಾದ ಡಾ.ರಾಜಕುಮಾರ್, ಡಾ.ಪ್ರಕಾಶ್, ಡಾ.ಚಿಕ್ಕೇರಿ, ಡಾ.ಜಗತ್‌ಪಾಲ್‌ಶೆಟ್ಟಿ, ಡಾ.ರಾಜನಾಯ್ಕ, ಡಾ. ಲಿಂಗರಾಜ, ಡಾ. ಜಗದೀಶ್, ಡಾ. ನರೇಂದ್ರ, ಡಾ. ಮಂಜುನಾಥ ನಾಯ್ಕ, ಸರ್ಕಾರಿ ವೈದ್ಯಾಧಿಕಾರಿ ಡಾ. ಚಂದ್ರಪ್ಪ, ಹಾಗೂ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.