ADVERTISEMENT

ಸಂಸ್ಕೃತಿ ಅಂತರಂಗದ ಅರಿವಿನ ಬೆಳಕು

‘ರಜಾ- ಮಜಾ’ ಬೇಸಿಗೆ ಶಿಬಿರದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 8:43 IST
Last Updated 23 ಏಪ್ರಿಲ್ 2018, 8:43 IST

ಸಂತೇಬೆನ್ನೂರು: ಸಂಸ್ಕೃತಿ ಅಂತರಂಗದ ಅರಿವಿನ ಬೆಳಕು. ಮಕ್ಕಳಲ್ಲಿ ಲೋಕ ಶಿಕ್ಷಣದ ಮೂಲಕ ಬೆಳಕನ್ನು ಮೂಡಿಸಲು ಬೇಸಿಗೆ ಶಿಬಿರಗಳು ಪೂರಕ ಎಂದು ಸಾಣೇಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಶನಿವಾರ ‘ರಜಾ-ಮಜಾ’ ಬೇಸಿಗೆ ಶಿಬಿರದ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಸರಿಯಾದ ಶಿಕ್ಷಣ ಹಾಗೂ ಸಂಸ್ಕಾರಗಳನ್ನು ನೀಡಿದರೆ ಉನ್ನತ ಸಾಧನೆ ಮಾಡುವರು. ಮಕ್ಕಳು ಖಾಲಿ ಚೀಲದಂತೆ, ಅದರಲ್ಲಿ ಏನು ತುಂಬಬೇಕು ಎಂದು ಚಿಂತನೆ ನಡೆಸಬೇಕು. ಬೇಸಿಗೆ ಶಿಬಿರದಲ್ಲಿ ಲೋಕ ಶಿಕ್ಷಣ ನೀಡುವುದು ಒಳಿತು. ಹಿಂದೆ ಬೇಸಿಗೆ ಶಿಬಿರಗಳ ಅಗತ್ಯ ಇರಲಿಲ್ಲ. ಅಜ್ಜ-ಅಜ್ಜಿಯರಿಂದ ಕಲಿಯುತ್ತಿದ್ದರು. ಇಂದು ಮಕ್ಕಳು ಇದರಿಂತ ವಂಚಿತರಾಗಿದ್ದಾರೆ ಎಂದು ವಿಷಾದಿಸಿದರು.

ADVERTISEMENT

ಶಿಕ್ಷಕನಿಗೆ ರಂಗಭೂಮಿ ತರಬೇತಿ ಇರಬೇಕು. ರಂಗಕಲೆ ಕಲೆಯಿಂದ ವೈವಿಧ್ಯಮಯವಾಗಿ ಪಾಠ ಕಲಿಸಲು ಸಾಧ್ಯ. ಗುರುಕುಲ ಸಂಸ್ಥೆ ಸುಮಾರು 200 ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ನಡೆಸಿರುವುದು ಶ್ಲಾಘನೀಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ‘ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪರಿಸರ ಆರೋಗ್ಯಪೂರ್ಣ. ಇಂದು ಮಕ್ಕಳಿಗೆ ಮನೆಗಳಲ್ಲಿ ದೈಹಿಕ ಕೆಲಸಗಳಿಲ್ಲ. ಪೋಷಕರು ಮಕ್ಕಳಿಗೆ ಮನೆಗೆಲಸದಲ್ಲಿ ಸಹಕರಿಸಲು ಹೇಳಬೇಕು. ಇದರಿಂದ ಹೊಣೆಗಾರಿಕೆ ಹೆಚ್ಚುತ್ತದೆ ಎಂದರು.

ಶಿಕ್ಷಕ ಎಂ.ಆರ್. ಲೋಕೇಶಯ್ಯ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ್, ಆರಾಧ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.