ADVERTISEMENT

ಸೂಳೆಕೆರೆ: ದೋಣಿಯೇ ಇಲ್ಲದ ದೋಣಿವಿಹಾರ ಕೇಂದ್ರ!

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:01 IST
Last Updated 22 ಮೇ 2017, 5:01 IST

ಚನ್ನಗಿರಿ: ಏಷ್ಯಾ ಖಂಡದ ಮಾನವ ನಿರ್ಮಿತ ಎರಡನೇ ಅತಿ ದೊಡ್ಡ ಕೆರೆ ಸೂಳೆಕೆರೆಯು ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಪ್ರವಾಸಿಗರನ್ನು ಸೆಳೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ತಾಲ್ಲೂಕಿನ ಬಸವರಾಜಪುರ ಗ್ರಾಮದ ಬಳಿ ಕೆರೆಯ ಹಿನ್ನೀರಿನ ದಡದಲ್ಲಿ ಪ್ರವಾಸೋದ್ಯಮ ಇಲಾಖೆಯು ಸುಸಜ್ಜಿತ ದೋಣಿ ವಿಹಾರ ಕೇಂದ್ರ ನಿರ್ಮಿಸಿದೆ. ಐದು ವರ್ಷಗಳ ಹಿಂದೆ ಇದಕ್ಕೆ ₹ 5 ಕೋಟಿ ವೆಚ್ಚ ಮಾಡಲಾಗಿದೆ. ದೋಣಿವಿಹಾರ ಕೇಂದ್ರವನ್ನು ನೋಡಲು ಪ್ರತಿದಿನ ರಾಜ್ಯದವಿವಿಧ ಜಿಲ್ಲೆಗಳಿಂದ ನೂರಾರು ಪ್ರವಾಸಿಗರು ಬರುತ್ತಾರೆ. ಆದರೆ, ಸೌಲಭ್ಯಗಳಿಲ್ಲದ ಕಾರಣ ಬೇಸರದಿಂದ ವಾಪಸಾಗುತ್ತಾರೆ.

ಇಲ್ಲಿ ಐದು ವರ್ಷಗಳ ಹಿಂದೆ ಎರಡು ಯಾಂತ್ರೀಕೃತ ದೋಣಿಗಳನ್ನು ಬಾಡಿಗೆಗೆ ತೆಗೆದುಕೊಂಡು ದೋಣಿವಿಹಾರ ಮಾಡಿಸಲಾಗುತ್ತಿತ್ತು. ಆಗಿನ್ನೂ ದೋಣಿವಿಹಾರ ಕೇಂದ್ರ ನಿರ್ಮಾಣದ ಹಂತದಲ್ಲಿತ್ತು. ದೋಣಿವಿಹಾರ ಇದ್ದಾಗ ನಿತ್ಯ ಕನಿಷ್ಠವೆಂದರೂ 500 ಪ್ರವಾಸಿಗರು ಬರುತ್ತಿದ್ದರು. ಆದರೆ, ನಂತರ ಇದ್ದಕ್ಕಿದ್ದಂತೆ ದೋಣಿಗಳು ಮಾಯವಾದವು. ಅಂದಿನಿಂದ ಇಂದಿನವರೆಗೆ ದೋಣಿಗಳ ವ್ಯವಸ್ಥೆ ಮಾಡಿಲ್ಲ.

ADVERTISEMENT

ಸೂಳೆಕೆರೆಯು ಚನ್ನಗಿರಿ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರಿದೆ. ಇಬ್ಬರು ಶಾಸಕರು ಇದ್ದರೂ ಪ್ರಸಿದ್ಧ ಪ್ರವಾಸಿ ಸ್ಥಳವನ್ನಾಗಿ ಮಾಡುವ ಇಚ್ಛಾಶಕ್ತಿಯ ಕೊರತೆಯಿದೆ.‘ಮುಂದಿನ ದಿನಗಳಲ್ಲಾದರೂ ಇಬ್ಬರೂ ಶಾಸಕರು ಎರಡು ಯಾಂತ್ರೀಕೃತ ದೋಣಿಗಳನ್ನು ದೋಣಿ ವಿಹಾರ ಕೇಂದ್ರಕ್ಕೆ ನೀಡಬೇಕು. ಈ ಮೂಲಕ ಪ್ರವಾಸಿಗರಿಗೆ ಸಂತಸ ತರಬೇಕು’ ಎನ್ನುತ್ತಾರೆ ಪ್ರವಾಸಿಗರಾದ ಶಿವಮೊಗ್ಗದ ರಾಜಣ್ಣ, ಯಶೋದಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.