ADVERTISEMENT

‘ಸ್ಮಾರ್ಟ್‌ ಸಿಟಿ’ ಮಧ್ಯೆ ಕಸದ ಗುಡ್ಡ

ವಾರ್ಡ್‌ 39ರ ವಿನಾಯಕ ಬಡಾವಣೆ ಈಗ ತ್ಯಾಜ್ಯದ ಆಗರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 9:31 IST
Last Updated 7 ಡಿಸೆಂಬರ್ 2017, 9:31 IST
ವಿನಾಯಕ ಬಡಾವಣೆಯ ಕಸದ ರಾಶಿಯಲ್ಲಿ ಕಂಡುಬಂದ ಹಂದಿಗಳು, ಬೀಡಾಡಿ ದನಗಳು.  ಚಿತ್ರ: ಅನೂಪ್‌ ಆರ್‌.ತಿಪ್ಪೇಸ್ವಾಮಿ
ವಿನಾಯಕ ಬಡಾವಣೆಯ ಕಸದ ರಾಶಿಯಲ್ಲಿ ಕಂಡುಬಂದ ಹಂದಿಗಳು, ಬೀಡಾಡಿ ದನಗಳು. ಚಿತ್ರ: ಅನೂಪ್‌ ಆರ್‌.ತಿಪ್ಪೇಸ್ವಾಮಿ   

ದಾವಣಗೆರೆ: ಎತ್ತ ಕಣ್ಣು ಹಾಯಿಸಿದರೂ ಕಸದ ರಾಶಿ, ಸಾಲು ಸಾಲು ಮಣ್ಣಿನ ಗುಡ್ಡೆಗಳು, ಕಸದ ಕಂಟೇನರ್‌ಗಳ ಬಳಿ ಹಂದಿಗಳ ಹಿಂಡು, ಇವುಗಳ ಮಧ್ಯೆಯೇ ಮೂಗು ಹಿಡಿದು ರಸ್ತೆ ದಾಟುವ ನಾಗರಿಕರು.....

ಈ ದೃಶ್ಯ ಕಂಡುಬರುವುದು ಬೇರೆಲ್ಲೂ ಅಲ್ಲ; ಸ್ಮಾರ್ಟ್‌ ಸಿಟಿಯಾಗುತ್ತಿರುವ ದಾವಣಗೆರೆಯಲ್ಲಿ. ಪಾಲಿಕೆಯ 39ನೇ ವಾರ್ಡ್‌ಗೆ ಸೇರಿದ ವಿನಾಯಕ ಬಡಾವಣೆಯ ಮುಖ್ಯ ರಸ್ತೆಯೊಂದು ಎರಡು ವರ್ಷಗಳಿಂದ ಸಮಸ್ಯೆಯ ಆಗರವಾಗಿದೆ.

ಪಾಲಿಕೆಯಿಂದ ಪ್ರತಿನಿತ್ಯ ಬಡಾವಣೆಯ ಮನೆಗಳಿಗೆ ಹೋಗಿ ಸಂಗ್ರಹಿಸುವ ಕಸವನ್ನೆಲ್ಲಾ ತಂದು ರಸ್ತೆಯ ಅಕ್ಕಪಕ್ಕದ ನಿವೇಶನದಲ್ಲಿಯೇ ಸುರಿಯಲಾಗುತ್ತಿದೆ. ಮೂರು ಕಂಟೇನರ್‌ಗಳು ಇದ್ದರೂ ಅವುಗಳು ತುಂಬಿ ವರ್ಷ ಕಳೆದಿದೆ. ಇನ್ನು ನಗರದ ಸುತ್ತಮುತ್ತ ಕಟ್ಟಡ ತೆರವುಗೊಳಿಸಿದ ತ್ಯಾಜ್ಯವನ್ನೂ ಇಲ್ಲಿಯೇ ತಂದು ಸುರಿದು ಹೋಗುತ್ತಾರೆ. ಜೋರಾಗಿ ಗಾಳಿ ಬೀಸಿದರೆ ಕಸವೆಲ್ಲ ಮನೆಗೆ ಹಾರುತ್ತದೆ ಎನ್ನುತ್ತಾರೆ ಸ್ಥಳೀಯರಾದ ಸೌಮ್ಯಶ್ರೀ ಮನೋಹರ್‌.

ADVERTISEMENT

ಸಾಕಷ್ಟು ಕಸ ಇರುವುದರಿಂದ ಹಂದಿಗಳ ಗುಂಪು ಇಲ್ಲಿಯೇ ಮನೆ ಮಾಡಿದೆ. ಜತೆಗೆ ಬೀಡಾಡಿ ದನಗಳೂ ಸೇರಿಕೊಂಡಿದ್ದು, ಕಸದ ಕಂಟೇನರ್‌ಗಳನ್ನೇ ಆಶ್ರಯತಾಣವನ್ನಾಗಿ ಮಾಡಿಕೊಂಡಿವೆ. ಇದರಿಂದ ಚಿಕ್ಕ ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ ಎನ್ನುತ್ತಾರೆ ಅವರು.

ಕಸದಿಂದ ಸೊಳ್ಳೆ, ನೊಣಗಳ ಕಾಟ ತೀವ್ರವಾಗಿದ್ದು, ಬಡಾವಣೆಯಲ್ಲಿ ಮನೆಗೊಬ್ಬರು ಜ್ವರದಿಂದ ಬಳಲುತ್ತಿ ದ್ದಾರೆ. ಚಿಕೂನ್‌ಗುನ್ಯಾ, ಡೆಂಗಿ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿಷ್ಠಿತ ಬಡಾವಣೆಯಾದರೂ ಈ ಸಮಸ್ಯೆಯಿಂದ ಬೇಸತ್ತು ಕೆಲವರು ಮನೆ ಬದಲಾಯಿಸುತ್ತಿದ್ದಾರೆ ಎಂದು ಗೃಹಿಣಿ ಕುಸುಮಾ ವಿಜಯ್‌ ಹೇಳುತ್ತಾರೆ.

ಬಡಾವಣೆಯಿಂದ ಸರ್ವೀಸ್‌ ರಸ್ತೆಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಕಸದ ವಾಸನೆಯಿಂದ ಮೂಗು ಹಿಡಿದುಕೊಂಡೇ ರಸ್ತೆ ದಾಟ ಬೇಕಿದೆ. ಆಗಾಗ ಪಾಲಿಕೆಯಿಂದ ಕಸ ಸಂಗ್ರಹಿಸುವರು ತಾವು ತಂದು ಹಾಕುವ ಕಸಕ್ಕೆ ಬೆಂಕಿ ಹಚ್ಚಿ ಹೋಗುತ್ತಾರೆ. ಇದರಿಂದ ಸುತ್ತಮುತ್ತಲ ಮನೆಗಳಿಗೂ ಕಲುಷಿತ ಗಾಳಿ ಬಂದು ವಾಸ ಮಾಡುವುದೇ ಕಷ್ಟವಾಗಿದೆ ಎನ್ನುತ್ತಾರೆ ಬಡಾವಣೆಯ ನಿವಾಸಿ ಸಿದ್ದೇಶ್‌ ಬಾಬು.

**

‘ಕಸ ಹಾಕುವವರ ವಿರುದ್ಧ ಕ್ರಮ’
ಸಮಸ್ಯೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾರ್ಡ್‌ನ ಪಾಲಿಕೆ ಸದಸ್ಯೆ ನಾಗರತ್ನಮ್ಮ, ‘ಕಟ್ಟಡ ತೆರವು ವ್ಯಾಜ್ಯವನ್ನು ಸ್ಥಳೀಯ ಗುತ್ತಿಗೆದಾರರು ಎಲ್ಲಿಂದಲೋ ತಂದು ರಾತ್ರೋರಾತ್ರಿ ಇಲ್ಲಿ ಹಾಕಿ ಹೋಗುತ್ತಾರೆ. ಈ ಬಗ್ಗೆ ಎಚ್ಚರಿಕೆ ನೀಡಿದರೂ ನಿಂತಿಲ್ಲ. ಕಸ ತಂದು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

**

–ಜಯಪ್ರಕಾಶ್ ಬಿರಾದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.