ADVERTISEMENT

ದೈವಬಲ, ಜನಬಲದ ಮುಂದೆ ಹಣಬಲದ ಆಟ ನಡೆಯದು

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 9:37 IST
Last Updated 3 ಜನವರಿ 2018, 9:37 IST
ಚನ್ನಗಿರಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಬಿಜೆಪಿಯ 149ನೇ ಪರಿವರ್ತನಾ ಯಾತ್ರೆ ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ, ಮುಖಂಡರಾದ ಕುಮಾರ್ ಬಂಗಾರಪ್ಪ, ಮಾಡಾಳ್ ವಿರೂಪಾಕ್ಷಪ್ಪ, ಯಶವಂತರಾವ್‌ ಜಾಧವ್‌ ಇದ್ದರು.
ಚನ್ನಗಿರಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಬಿಜೆಪಿಯ 149ನೇ ಪರಿವರ್ತನಾ ಯಾತ್ರೆ ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ, ಮುಖಂಡರಾದ ಕುಮಾರ್ ಬಂಗಾರಪ್ಪ, ಮಾಡಾಳ್ ವಿರೂಪಾಕ್ಷಪ್ಪ, ಯಶವಂತರಾವ್‌ ಜಾಧವ್‌ ಇದ್ದರು.   

ಚನ್ನಗಿರಿ: ‘ಹಣ, ಹೆಂಡ, ಅಧಿಕಾರ ಬಲ, ತೋಳ್ಬಲದಿಂದ ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಹಗಲುಗನಸನ್ನು ಕಾಣುತ್ತಿದ್ದಾರೆ. ಆದರೆ, ನನಗೆ ದೇವರ ಬಲ ಹಾಗೂ ಜನಬಲ ಇದೆ. ಕಾಂಗ್ರೆಸ್‌ಮುಕ್ತ ರಾಜ್ಯವನ್ನಾಗಿ ಮಾಡುವ ಶಪಥವನ್ನು ಈ ರಾಜ್ಯದ ಜನರು ತೊಟ್ಟಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 149ನೇ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಕಾರ್ಯವೈಖರಿ ಹೆತ್ತ ತಾಯಿಯೇ ತನ್ನ ಮಗುವಿಗೆ ವಿಷ ಉಣಿಸುವಂತೆ ಇದೆ. ಕೊಳೆತುಹೋದ ಗೋಧಿಯನ್ನು ವಿತರಣೆ ಮಾಡುತ್ತಿದೆ. 40 ಸಾವಿರ ಅಕ್ಕಿ, ಗೋಧಿ ಅಕ್ರಮವಾಗಿ ಮಾರಾಟವಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಬೇಕಾಗಿದೆ. ₹ 2 ಲಕ್ಷ ಕೋಟಿ ಸಾಲ ಮಾಡಿರುವುದು ಈ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ.
ಬಜೆಟ್‌ನಲ್ಲಿ ಮಂಡನೆ ಮಾಡಿದ ₹ 1.84 ಲಕ್ಷ ಕೋಟಿ ಹಣ ಎಲ್ಲಿ ಹೋಯಿತು ಎಂದು ಅವರು ಹೇಳಬೇಕಾಗಿದೆ. ಜನಹಿತವನ್ನು ಸಂಪೂರ್ಣವಾಗಿ ಮರೆತ ಈ ಸರ್ಕಾರ ದಿವಾಳಿಯಾಗಿದೆ. ಜಾತಿ, ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತುವ ಕಾರ್ಯ ಇನ್ನು ಮುಂದೆ ನಡೆಯುವುದಿಲ್ಲ. ತುಘಲಕ್ ದರ್ಬಾರ್‌ ಅನ್ನು ಕಾಂಗ್ರೆಸ್ ನಡೆಸಿದೆ ಎಂದು ದೂರಿದರು.

‘ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಆರು ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿ ಇತ್ತು. ಆದರೆ ಈಗ 20 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. 130 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಇಂದು ಕೇವಲ 5 ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದೆ. ಇದಕ್ಕೆ ನರೇಂದ್ರ ಮೋದಿ ಅವರ ಸ್ವಚ್ಛ ಆಡಳಿತವೇ ಕಾರಣವಾಗಿದೆ. ಈಗಾಗಲೇ 149 ಪರಿವರ್ತನಾ ಯಾತ್ರೆ ಕಾರ್ಯಕ್ರಮಗಳು ನಡೆದಿವೆ. ರಾಜ್ಯದಲ್ಲಿ 4.60 ಕೋಟಿ ಮತದಾರರು ಇದ್ದು, ಈಗಾಗಲೇ 1.75 ಕೋಟಿ ಮತದಾರರನ್ನು ಕಾರ್ಯಕ್ರಮದ ಮೂಲಕ ಭೇಟಿಯಾಗಿದ್ದೇನೆ. ಎಲ್ಲಾ ಕಡೆಯೂ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಲು ಜನರು ಬಯಸಿದ್ದಾರೆ. ಲೋಕಾಯುಕ್ತದ ಅಧಿಕಾರವನ್ನು ಮೊಟಕುಗೊಳಿಸಿ ಎಸಿಬಿಯನ್ನು ಹುಟ್ಟು ಹಾಕಿ, ಹಗರಣಗಳೇ ನಡೆದಿಲ್ಲ ಎಂದು ಕ್ಲೀನ್ ಚಿಟ್ ಪಡೆದುಕೊಂಡು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದೀರಿ. ನನ್ನ ಮೇಲಿನ ಯಾವ ಆರೋಪಗಳೂ ಇದುವರೆಗೆ ಸಾಬೀತು ಆಗಿಲ್ಲ’ ಎಂದು ಹೇಳಿದರು.

ADVERTISEMENT

ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಮುಖಂಡರಾದ ಆಯನೂರು ಮಂಜುನಾಥ್, ಕುಮಾರ್ ಬಂಗಾರಪ್ಪ, ಎಂ.ಪಿ.ರೇಣುಕಾ ಚಾರ್ಯ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತ್‌ರಾವ್ ಜಾಧವ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಾಡಾಳ್ ವಿರೂಪಾಕ್ಷಪ್ಪ, ಬಿ.ಪಿ. ಹರೀಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಟಿ.ರಾಜು ಉಪಸ್ಥಿತರಿದ್ದರು.

‘ಮೋದಿ ಬಗ್ಗೆ ಮಾತಾಡುವ ಅರ್ಹತೆ ನಿಮಗಿಲ್ಲ’

‘ಹಗರಣಮುಕ್ತ ಕಾಂಗ್ರೆಸ್ ಸರ್ಕಾರ ಎಂದು ಸಿದ್ದರಾಮಯ್ಯ ಎಲ್ಲ ಕಡೆ ಭಾಷಣ ಮಾಡಿಕೊಂಡು ಹೋಗುತ್ತಿದ್ದಾರೆ. ನಿಮ್ಮ ಸರ್ಕಾರದಲ್ಲಿ ನೀವೂ ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರ ಹಗರಣಗಳನ್ನು ಇಷ್ಟರಲ್ಲಿಯೇ ಜನರ ಮುಂದೆ ಇಡಲಿದ್ದೇವೆ. ಈ ಸರ್ಕಾರದಲ್ಲಿ ಬರೀ ಕಮಿಷನ್ ರಾಜಕೀಯ ನಡೆಯುತ್ತಿದೆ. ಜಾರ್ಜ್‌ಶೀಟ್‌ನ್ನು ಬಿಡುಗಡೆ ಮಾಡುತ್ತೇವೆ. ಅಚ್ಛೇ ದಿನ್ ಇನ್ನು ಮೂರು ತಿಂಗಳಲ್ಲಿ ಅಧಿಕಾರದಿಂದ ಕೆಳಗಿಳಿದ ಮೇಲೆ ನಿಮಗೆ ಬರಲಿದೆ.

ನರೇಂದ್ರ ಮೋದಿ ಅವರ ಬಗ್ಗೆ ತುಚ್ಛವಾಗಿ ಮಾತನಾಡುವ ನಿಮಗೆ ನಾಚಿಕೆ ಆಗೋದಿಲ್ವೇ? ಇಡೀ ಪ್ರಪಂಚವೇ ಮೋದಿ ಅವರನ್ನು ಮೆಚ್ಚಿಕೊಂಡು ಹೊಗಳುತ್ತಿರುವಾಗ ಅವರ ಬಗ್ಗೆ ಮಾತನಾಡುವ ಅರ್ಹತೆ ನಿಮಗೆ ಇದೆಯೇ ಎಂಬುದನ್ನು ಚುನಾವಣೆಯಲ್ಲಿ ರಾಜ್ಯದ ಜನರು ನಿರ್ಧಾರ ಮಾಡಲಿದ್ದಾರೆ’ ಎಂದು ಯಡಿಯೂರಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

‘ಮಾಡಾಳ್ ವಿರೂಪಾಕ್ಷಪ್ಪ ಅಭ್ಯರ್ಥಿ’

‘ಈ ಚನ್ನಗಿರಿ ವಿಧಾನಸಭಾ ಕೇತ್ರದ ಅಭ್ಯರ್ಥಿಯಾಗಿ ಮಾಡಾಳ್ ವಿರೂಪಾಕ್ಷಪ್ಪ ಸ್ಪರ್ಧಿಸಲಿದ್ದು, ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರನ್ನು ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಿ ಕಳುಹಿಸುವ ಹೊಣೆ ನಿಮ್ಮ ಮೇಲಿದೆ. ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ಈ ತಾಲ್ಲೂಕಿನ ರೈತರ ಬದುಕನ್ನು ಹಸನು ಮಾಡಲಾಗುವುದು’ ಎಂದು ಭರವಸೆ ನೀಡಿದರು. ಯಾತ್ರೆ ವೇಳೆ ಅಭ್ಯರ್ಥಿಯನ್ನು ಘೋಷಿಸಬಾರದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಭಾನುವಾರವಷ್ಟೇ ಸೂಚನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.