ADVERTISEMENT

ನಿಲ್ಲದ ನಿಷೇಧಿತ ಪ್ಲಾಸ್ಟಿಕ್‌ ಬಳಕೆ

ನಾಗರಾಜ ಎನ್‌
Published 22 ಜನವರಿ 2018, 9:47 IST
Last Updated 22 ಜನವರಿ 2018, 9:47 IST
ಪಾಲಿಕೆ ಅಧಿಕಾರಿಗಳು ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳು
ಪಾಲಿಕೆ ಅಧಿಕಾರಿಗಳು ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳು   

ದಾವಣಗೆರೆ: ದಂಡ, ಅಧಿಕಾರಿಗಳ ಕಟು ಎಚ್ಚರಿಕೆಗೂ ಬಗ್ಗದ ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆಯನ್ನು ಮುಂದುವರಿಸಿದ್ದಾರೆ. ಪಾಲಿಕೆ ಅಧಿಕಾರಿಗಳು ಅಂಗಡಿಗಳು, ವ್ಯಾಪಾರ ಕೇಂದ್ರಗಳ ಮೇಲೆ ಕಾರ್ಯಾಚರಣೆ ನಡೆಸಿ, ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ನಿರಂತರವಾಗಿ ವಶಕ್ಕೆ ಪಡೆಯುತ್ತಲೇ ಇದ್ದಾರೆ. ತಪ್ಪಿತಸ್ಥರಿಗೆ ದಂಡ ವಿಧಿಸಿದ್ದಾರೆ. ಇಷ್ಟಾದರೂ ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆ ಸಂಪೂರ್ಣ ನಿಂತಿಲ್ಲ.

2016–17ನೇ ಸಾಲಿನಲ್ಲಿ 5 ಟನ್‌ಗೂ ಹೆಚ್ಚು ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿತ್ತು. ವಶಕ್ಕೆ ಪಡೆದ ಉತ್ಪನ್ನಗಳನ್ನು ಹರಾಜು ಹಾಕಿ, ಮರು ಬಳಕೆ ಮಾಡುವವರಿಗೆ ಮಾರಾಟ ಮಾಡಲಾಗಿದೆ. 2017–18ನೇ ಸಾಲಿನಲ್ಲಿ ಸುಮಾರು 7 ಟನ್‌ನಷ್ಟು ಪ್ಲಾಸ್ಟಿಕ್‌ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರತಿ ಬಾರಿ ದಾಳಿ ನಡೆಸಿದಾಗಲೂ ಪ್ಲಾಸ್ಟಿಕ್‌ ಉತ್ಪನ್ನಗಳು ಸಿಗುತ್ತಲೇ ಇವೆ ಎಂದು ಹೇಳುತ್ತಾರೆ ನಗರಪಾಲಿಕೆ ಆರೋಗ್ಯ ಶಾಖೆ ಸಹಾಯಕ ನಿರ್ದೇಶಕ ಡಾ.ಚಂದ್ರಶೇಖರ್‌ ಸುಂಕದ್‌.

‘ವರ್ಜಿನ್‌’ ದರ್ಜೆಯ ಪ್ಲಾಸ್ಟಿಕ್‌ನಿಂದ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಆಹಾರ ವಸ್ತುಗಳ ಸಂಗ್ರಹಕ್ಕೆ ಬಳಸಬೇಕು. ಆದರೆ, ಮರುಬಳಕೆ ಮಾಡಿದ, ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡ ಪ್ಲಾಸ್ಟಿಕ್‌ಗಳ ಬಳಕೆ ಇನ್ನೂ ಮುಂದುವರಿದಿದೆ. ಇದರಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸುತ್ತಾರೆ ಅವರು.

ADVERTISEMENT

ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳ ಕಾರ್ಖಾನೆಗಳಿಲ್ಲ. ಆದರೆ, ಬೆಂಗಳೂರಿನಂಥ ನಗರಗಳಿಂದ ಪ್ಲಾಸ್ಟಿಕ್‌ ಉತ್ಪನ್ನಗಳು ದಾವಣಗೆರೆಗೆ ಎಗ್ಗಿಲ್ಲದೇ ಬರುತ್ತಿವೆ. ಹೀಗಾಗಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಹಚ್ಚಿಸಬೇಕು. ಅಕ್ರಮ ಸಾಗಣೆದಾರರ ಮೇಲೆ ಹದ್ದಿನ ಕಣ್ಣಿಡಬೇಕಿದೆ. ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ನಗರದೊಳಕ್ಕೆ ತರದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಆಗ್ರಹಿಸುತ್ತಾರೆ ಆಂಜನೇಯ ಬಡಾವಣೆಯ ನಿವಾಸಿ ಅಶೋಕ್‌.

ಬಟ್ಟೆ ಶೋರೂಂಗಳು, ಔಷಧ ಅಂಗಡಿಗಳು, ಸೂಪರ್‌ ಮಾರ್ಕೆಟ್‌ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆಗೆ ಬಹುತೇಕ ಕಡಿವಾಣ ಬಿದ್ದಿದೆ. ಆದರೆ, ಹಣ್ಣು, ತರಕಾರಿ, ದಿನಸಿ ಅಂಗಡಿಗಳಲ್ಲಿ 40 ಮೈಕ್ರಾನ್‌ ಗಾತ್ರಕ್ಕಿಂತ ಕಡಿಮೆ ದಪ್ಪನೆಯ ಪ್ಲಾಸ್ಟಿಕ್‌ ಕವರ್‌ಗಳ ಬಳಕೆ ಮುಂದುವರಿದಿದೆ. ಪ್ಲಾಸ್ಟಿಕ್ ಲೋಟ, ತಟ್ಟೆಗಳ ಬಳಕೆಯೂ ಅಲ್ಲಲ್ಲಿ ನಡೆಯುತ್ತಿದೆ. ಇವುಗಳ ಬಳಕೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ಅವರು.

ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆಯನ್ನು ಶೇ 20ರಷ್ಟು ತಡೆಯಲಷ್ಟೇ ಪಾಲಿಕೆಗೆ ಸಾಧ್ಯವಾಗಿದೆ. ಅಧಿಕಾರಿಗಳು ಇನ್ನಷ್ಟು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸುತ್ತಾರೆ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ದೇವರಮನಿ ಗಿರೀಶ್‌.

ನಿಷೇಧಿತ ಪ್ಲಾಸ್ಟಿಕ್‌ಗಳ ಬಳಕೆಯನ್ನು ತಡೆಯಲು ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕು ಎಂಬ ನಿಯಮವಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಡಳಿತದ ಪ್ರತಿನಿಧಿ, ಪೊಲೀಸ್‌ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು. ಆದರೆ, ದಾವಣಗೆರೆಯಲ್ಲಿ ಸಮಿತಿ ರಚನೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಜಿಲ್ಲಾಧಿಕಾರಿ ತಕ್ಷಣ ಸಮಿತಿ ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಅವರು.

ನಿಷೇಧಿತ ಉತ್ಪನ್ನಗಳು

ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ತಟ್ಟೆ, ಲೋಟ, ಚಮಚ, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್‌ ಹಾಳೆ, ಥರ್ಮಕೋಲ್‌ನಿಂದ ತಯಾರಿಸಿದ ಉತ್ಪನ್ನಗಳು, ಪೋಸ್ಟರ್‌, ತೋರಣ, ಫ್ಲೆಕ್ಸ್‌ ಹಾಳೆ, ಮೈಕ್ರೊ ಬೀಡ್ಸ್‌ನಿಂದ ತಯಾರಾದ ವಸ್ತುಗಳು, ಪ್ಲಾಸ್ಟಿಕ್‌ ಬಾವುಟ ಒಳಗೊಂಡಂತೆ ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಕಾರಕ ಉತ್ಪನ್ನಗಳನ್ನು ನಿಷೇಧಿಸಲಾಗಿದೆ.

ಕೆಲ ಪ್ಲಾಸ್ಟಿಕ್‌ ವಸ್ತುಗಳಿಗೆ ವಿನಾಯಿತಿ

ನಿತ್ಯ ಜೀವನಕ್ಕೆ ಅವಶ್ಯವಾದ ಪ್ಲಾಸ್ಟಿಕ್‌ ವಸ್ತುಗಳ ಬಳಕೆಗೆ ವಿನಾಯಿತಿ ನೀಡಲಾಗಿದೆ. ಸಾಮಗ್ರಿಗಳನ್ನು ಪೊಟ್ಟಣ ಕಟ್ಟಿ ಸೀಲ್‌ ಮಾಡುವುದಕ್ಕೆ ಬಳಸುವ ಪ್ಲಾಸ್ಟಿಕ್‌, ಸರ್ಕಾರದ ಇಲಾಖೆಗಳಿಗೆ ಅವಶ್ಯವಿರುವ ಪ್ಲಾಸ್ಟಿಕ್‌, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪ್ಯಾಕ್‌ ಮಾಡುವುದಕ್ಕೆ ಪ್ಲಾಸ್ಟಿಕ್ ಬಳಸಲು ಅವಕಾಶವಿದೆ. ಅರಣ್ಯ ಮತ್ತು ತೋಟಗಾರಿಕೆ ಇಲಾಖೆಗಳ ನರ್ಸರಿಗಳಲ್ಲಿ ಸಸ್ಯಪೋಷಣೆಗೆ ಪ್ಲಾಸ್ಟಿಕ್‌ ಬಳಸಬಹುದು. ಇವುಗಳ ಜತೆಗೆ ಕೆಲ ವಸ್ತುಗಳನ್ನು ಅವಿಭಾಜ್ಯವಾಗಿ ಪ್ಯಾಕ್‌ ಮಾಡಲು ಪ್ಲಾಸ್ಟಿಕ್‌ ಬಳಕೆಗೆ ವಿನಾಯಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.