ADVERTISEMENT

ನೀರು ಪಡೆದವರೇ ಪುಣ್ಯವಂತರು!

ಎಚ್.ವಿ.ನಟರಾಜ್
Published 2 ಫೆಬ್ರುವರಿ 2018, 9:48 IST
Last Updated 2 ಫೆಬ್ರುವರಿ 2018, 9:48 IST
ಚನ್ನಗಿರಿ ತಾಲ್ಲೂಕಿನ ರಾಜಗೊಂಡನಹಳ್ಳಿ ಗ್ರಾಮದ ತೋಟವೊಂದರಲ್ಲಿ ಕೊಳವೆಬಾವಿ ಕೊರೆಸುತ್ತಿರುವುದು.
ಚನ್ನಗಿರಿ ತಾಲ್ಲೂಕಿನ ರಾಜಗೊಂಡನಹಳ್ಳಿ ಗ್ರಾಮದ ತೋಟವೊಂದರಲ್ಲಿ ಕೊಳವೆಬಾವಿ ಕೊರೆಸುತ್ತಿರುವುದು.   

ಚನ್ನಗಿರಿ: ತಾಲ್ಲೂಕಿನಾದ್ಯಂತ ಕಳೆದ ಒಂದು ತಿಂಗಳಿಂದ ನೀರಿಗಾಗಿ ಕೊಳವೆಬಾವಿಗಳನ್ನು ನಿರಂತರವಾಗಿ ಕೊರೆಸುವ ಕಾರ್ಯ ನಡೆದಿದೆ. ಕೊಳವೆಬಾವಿಗಳಲ್ಲಿ ನೀರು ಬಿದ್ದವರೇ ಪುಣ್ಯವಂತರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿ ತಾಲ್ಲೂಕಿನ ಸಂತೇಬೆನ್ನೂರು 1 ಮತ್ತು 2ನೇ ಹೋಬಳಿ, ಕಸಬಾ ಹೋಬಳಿಗಳಲ್ಲಿ ತೀವ್ರವಾದ ನೀರಿನ ಸಮಸ್ಯೆ ಉಂಟಾಗಿತ್ತು. ಅಡಿಕೆ ತೋಟ ಉಳಿಸಿಕೊಳ್ಳಲು ಗಳಿಸಿ, ಉಳಿಸಿದ್ದ ಹಣವನ್ನು ಕೊಳವೆಬಾವಿ ಕೊರೆಸುವುದಕ್ಕೇ ಖರ್ಚು ಮಾಡಿದ್ದರು.

ಉಬ್ರಾಣಿ ಹೋಬಳಿಯಲ್ಲಿ ಭದ್ರಾನದಿಯ ನೀರನ್ನು ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ಕೆರೆಗಳಿಗೆ ಪ್ರತಿ ವರ್ಷ ತುಂಬಿಸಲಾಗುತ್ತಿದೆ. ಕಳೆದ ವರ್ಷ ಭದ್ರಾ ಅಣೆಕಟ್ಟು ಪೂರ್ಣ ಪ್ರಮಾಣದಲ್ಲಿ ತುಂಬದೇ ಇರುವುದರಿಂದ ಕೇವಲ ಒಂದು ಕೆರೆಗೆ ಅರ್ಧ ಭಾಗದಷ್ಟು ನೀರನ್ನು ತುಂಬಿಸಲಾಗಿತ್ತು. ಇದರಿಂದ ಈ ಹೋಬಳಿಯಲ್ಲೂ ಈ ಬಾರಿ ಅಂತರ್ಜಲ ಮಟ್ಟ ಕುಸಿದಿದೆ. ಕಳೆದ ಎರಡು ವರ್ಷಗಳಿಂದ ಮಳೆ ಕೊರತೆ ಕಾರಣದಿಂದ ಸಂತೇಬೆನ್ನೂರು, ಕಸಬಾ ಹೋಬಳಿ ಹಾಗೂ ಉಬ್ರಾಣಿ ಹೋಬಳಿಯ ಗ್ರಾಮಗಳಲ್ಲೂ ಕೂಡಾ ಈ ಬಾರಿ ತೀವ್ರ ನೀರಿನ ಕೊರತೆಯನ್ನು ರೈತರು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಕನೂರು, ದೇವರಹಳ್ಳಿ, ಬಿಲ್ಲಹಳ್ಳಿ, ಗುಳ್ಳೇಹಳ್ಳಿ, ಕೊಂಡದಹಳ್ಳಿ, ದೊಡ್ಡೇರಿಕಟ್ಟೆ, ಅರಳಿಕಟ್ಟೆ, ಹೊದಿಗೆರೆ, ಕೊರಟಿಕೆರೆ, ಶೆಟ್ಟಿಹಳ್ಳಿ, ಮಾದಾಪುರ, ದೋಣಿಹಳ್ಳಿ, ಮುದಿಗೆರೆ, ಚಿಕ್ಕೂಲಿಕೆರೆ, ದೊಡ್ಡಬ್ಬಿಗೆರೆ, ಸಿದ್ದನಮಠ, ಶಿವ ಕುಳೇನೂರು, ಕುಳೇನೂರು, ಚಿಕ್ಕ ಬೆನ್ನೂರು, ಚನ್ನಾಪುರ, ನುಗ್ಗಿಹಳ್ಳಿ, ನೀತಿಗೆರೆ,ಹಿರೇಗಂಗೂರು, ಚಿಕ್ಕ ಗಂಗೂರು, ಲಕ್ಷ್ಮೀಸಾಗರ, ಹೊನ್ನೇಮರದಹಳ್ಳಿ, ಹೊದಿಗೆರೆ, ಯರಗಟ್ಟಹಳ್ಳಿ, ನಾರಶೆಟ್ಟಿಹಳ್ಳಿ, ಅಜ್ಜಿಹಳ್ಳಿ, ಸುಣಿಗೆರೆ. ಹಟ್ಟಿ, ಬುಳುಸಾಗರ, ಮಾದಾಪುರ, ಹಿರೇಉಡ ತಾಂಡ, ಅಣಪುರ, ನಲ್ಲೂರು, ಕಗತೂರು, ಅಕಳಕಟ್ಟೆ, ಬುಸ್ಸೇನಹಳ್ಳಿ, ಉಬ್ರಾಣಿ ಹೋಬಳಿಯ ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ರಾಜಗೊಂಡನಹಳ್ಳಿ, ಮಾವಿನಹೊಳೆ, ಗಂಡಗನಹಂಕಲು ಮುಂತಾದ ಗ್ರಾಮಗಳಲ್ಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಹೊಸದಾಗಿ 500ರಿಂದ 600 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ ಒಂದಿಂಚು, ಒಂದೂವರೆ ಇಂಚು ಮಾತ್ರ ನೀರು ಬೀಳುತ್ತಿದೆ. ಹೀಗಾಗಿ ರೈತರು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಮತ್ತೆ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಭದ್ರಾ ನಾಲೆಯಲ್ಲಿ ನೀರು ಹರಿಯುತ್ತಿದ್ದು, ಆ ನೀರನ್ನು ಟ್ಯಾಂಕರ್‌ಗಳಲ್ಲಿ ತಂದು ತೋಟಗಳಿಗೆ ಹಾಯಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ADVERTISEMENT

‘ಎರಡು ಎಕರೆ ಅಡಿಕೆ ತೋಟವಿದ್ದು, ಎರಡು ಬೋರ್‌ವೆಲ್‌ಗಳಿದ್ದವು. ಇಷ್ಟು ದಿನ ತೋಟಗಳಿಗೆ ಹನಿ ನೀರಾವರಿ ಮೂಲಕ ಅದರ ನೀರನ್ನು ಪೂರೈಸಿಕೊಳ್ಳುತ್ತಿದ್ದೇವೆ. ಆದರೆ, ಈ ಬಾರಿ ಉಬ್ರಾಣಿ ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸದೇ ಇರುವುದರಿಂದ ಈಗ ಈ ಹೋಬಳಿಯ ಗ್ರಾಮಗಳ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದೆ. ಬೇಸಿಗೆಯಲ್ಲಿ ಇನ್ನೂ ತೀವ್ರ ಸಮಸ್ಯೆಯನ್ನು ರೈತರು ಎದುರಿಸಬೇಕಾಗುತ್ತದೆ’ ಎಂದು ರಾಜಗೊಂಡನಹಳ್ಳಿ ಗ್ರಾಮದ ಅಡಿಕೆ ಬೆಳೆಗಾರರಾದ ಜಗದೀಶ್, ರಾಜಾನಾಯ್ಕ ಆತಂಕಪಟ್ಟರು.

ಸದ್ಯದ ಪರಿಸ್ಥಿತಿಯಲ್ಲಿ ಟ್ಯಾಂಕರ್‌ ಮೂಲಕ ನೀರನ್ನು ತಂದು ತೋಟಗಳನ್ನು ಉಳಿಸಿಕೊಳ್ಳಲು ಮುಂದಾಗಿದ್ದೇವೆ. ಜತೆಗೆ ಹೊಸದಾಗಿ ಕೊಳವೆಬಾವಿಗಳನ್ನೂ ಕೊರೆಸಲು ಮುಂದಾಗಿದ್ದೇವೆ. 600 ಅಡಿ ಕೊರೆಸಿದರೂ ಕೇವಲ ಒಂದೂವರೆ ಇಂಚು ನೀರು ಲಭ್ಯವಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

* * 

ಮುಂದಿನ ಮಳೆಗಾಲ ಬರುವವರೆಗೆ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ‌
ಜಗದೀಶ್, ರಾಜಗೊಂಡನಹಳ್ಳಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.