ADVERTISEMENT

‘ಪ್ರಧಾನಿಗೆ ಸ್ಪರ್ಧೆ ನೀಡುವ ಶಕ್ತಿ ಸಿದ್ದರಾಮಯ್ಯಗೆ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 9:11 IST
Last Updated 10 ಫೆಬ್ರುವರಿ 2018, 9:11 IST

ಹರಿಹರ: ‘ಪ್ರಧಾನ ಮಂತ್ರಿಗೆ ದೇಶದಲ್ಲಿ ಪ್ರತಿ ಸ್ಪರ್ಧೆ ನೀಡಬಲ್ಲ ಶಕ್ತಿ ಹೊಂದಿರುವ ಏಕಮಾತ್ರ ನಾಯಕ ಸಿದ್ದರಾಮಯ್ಯ’ ಎಂದು ಕಾಗಿನೆಲೆ ಪೀಠದ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಕನಕ ಗುರುಪೀಠದ ಶಾಖಾ ಮಠದಲ್ಲಿ ರಜತ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ವಿದ್ಯಮಾನಗಳನ್ನು ಗಮನಿಸದರೆ ಮುಂಬರುವ ವಿಧಾನಸಭೆ ಚುನಾವಣೆ ಅನೇಕ ಕಾರಣಗಳಿಂದ ರಾಷ್ಟ್ರದ ಚಿತ್ತವನ್ನು ಸೆಳೆದಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ ಅವರಿಗೆ ನೇರ ಪೈಪೋಟಿ ನೀಡಬಲ್ಲ ನಾಯಕ ಸಿದ್ದರಾಮಯ್ಯ ಅವರಿಗೆ ಚುನಾವಣೆಯ ಸಾರಥ್ಯ ನೀಡಲಾಗಿದೆ ಎಂದರು.

ADVERTISEMENT

ಕನಕ ಗುರುಪೀಠ ಸ್ಥಾಪನೆಯಾದ ದಶಮಾನೋತ್ಸವದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕಾಗಿನೆಲೆ ಟ್ರಸ್ಟ್ ಸ್ಥಾಪಿಸಿದರು. ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದಾಗ, ಕಾಗಿನೆಲೆ ಪ್ರಾಧಿಕಾರ ಸ್ಥಾಪನೆಯಾಗಿ ನಿರಂತರವಾಗಿ ಸರ್ಕಾರದ ಅನುದಾನ ಪಡೆಯಲು ಸಾಧ್ಯವಾಯಿತು. ಇಂದು, ಕಾಗಿನೆಲೆ ಕುರುಬ ಸಮಾಜದ ಕಾಶಿಯಾಗಿ ರಾರಾಜಿಸುತ್ತಿದೆ ಎಂದು ಹೇಳಿದರು.

ಐಎಎಸ್ ಹಾಗೂ ಕೆಎಎಸ್ ತರಬೇತಿ ಕೇಂದ್ರಕ್ಕೆ ವಸತಿನಿಲಯದ ಅಗತ್ಯವಿದ್ದು, ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಬೇಕು. ಸಮಾಜ ಒಗ್ಗಟ್ಟಾಗಿದ್ದರೆ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜು ಆರಂಭಿಸುವುದು ಕಷ್ಟವಲ್ಲ ಎಂದರು.

ಬೇಡಿಕೆಗಳ ಪಟ್ಟಿ ಸಲ್ಲಿಸಿದ ರೇವಣ್ಣ: ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಕುರುಬರು ಈ ರಾಜ್ಯದ ಮೂಲ ನಿವಾಸಿಗಳು, ಬೀರೇಶ್ವರ ದೇವಸ್ಥಾನಗಳಿರುವ ಪ್ರದೇಶಗಳಲ್ಲಿ ದೇವಸ್ಥಾನ ಜಮೀನಿದ್ದು ಒತ್ತುವರಿಯಾಗಿದೆ. ಈ ಬಗ್ಗೆ ವಿಶೇಷ ಕಾನೂನು ರಚಿಸಿ, ಆಸ್ತಿ ಉಳಿಸಲು ಪ್ರಾಧಿಕಾರ ರಚಿಸಬೇಕು. ಕಾಡಿನಲ್ಲಿರುವ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅಲೆಮಾರಿ ಕುರುಬ ಸಮಾಜದವರಿಗೆ ವಸತಿ ಶಾಲೆಗಳನ್ನು ಆರಂಭಿಸಬೇಕು. ರಾಜ್ಯಸಭೆಯಲ್ಲಿ ಕುರುಬ ಸಮಾಜವರಿಗೆ ಪ್ರಾತಿನಿಧ್ಯ ನೀಡಬೇಕು. ಶೈಕ್ಷಣಿಕ ಸಂಸ್ಥೆ ಸ್ಥಾಪನೆಗೆ ಜಮೀನು, ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು. ಹೈಕೋರ್ಟ್ ನ್ಯಾಯಾಧೀಶರ ಸ್ಥಾನಕ್ಕೆ ಕುರುಬ ಸಮಾಜದವರಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಕೆಲ್ಲೋಡ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಕೆ.ಆರ್. ನಗರದ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಹಾಗೂ ತಿಂಥಣಿ ಶಾಖಾ ಮಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಕೆ. ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಸಚಿವ ರುದ್ರಪ್ಪ ಲಮಾಣಿ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಲೀಂ ಅಹಮದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.