ADVERTISEMENT

ಅಂತರ್ಜಲದ ಅವೈಜ್ಞಾನಿಕ ಬಳಕೆಯಿಂದ ಜಲಕ್ಷಾಮ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 9:22 IST
Last Updated 10 ಫೆಬ್ರುವರಿ 2018, 9:22 IST
ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿಯಲ್ಲಿ ಕೆರೆಹೂಳು ತೆಗೆಯುವ ಉದ್ಘಾಟನಾ ಸಮಾರಂಭದಲ್ಲಿ ಜಲತಜ್ಞ ಎನ್‌. ದೇವರಾಜ್‌ರೆಡ್ಡಿ, ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ ಭಾಗವಹಿಸಿದ್ದರು.
ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿಯಲ್ಲಿ ಕೆರೆಹೂಳು ತೆಗೆಯುವ ಉದ್ಘಾಟನಾ ಸಮಾರಂಭದಲ್ಲಿ ಜಲತಜ್ಞ ಎನ್‌. ದೇವರಾಜ್‌ರೆಡ್ಡಿ, ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ ಭಾಗವಹಿಸಿದ್ದರು.   

ಜಗಳೂರು: ಅಂತರ್ಜಲದ ಬೇಕಾಬಿಟ್ಟಿ ಬಳಕೆಯಿಂದ ಪ್ರಪಂಚದಲ್ಲೇ ಎರಡನೇ ಅತಿಹೆಚ್ಚು ಪ್ರಮಾಣದಲ್ಲಿ ಮಳೆ ಸುರಿಯುವ ಭಾರತದಲ್ಲಿ ಪ್ರಸ್ತುತ ಜಲಕ್ಷಾಮದ ಸಂಕಷ್ಟ ಎದುರಾಗಿದೆ ಎಂದು ಜಲತಜ್ಞ ಎನ್‌. ದೇವರಾಜ್‌ರೆಡ್ಡಿ ಹೇಳಿದರು. ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದ ಕೆರೆಯಲ್ಲಿ ಶುಕ್ರವಾರ ಗ್ರಾಮಸ್ಥರೇ ಕೆರೆಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅವೈಜ್ಞಾನಿಕವಾಗಿ ಅಂತರ್ಜಲವನ್ನು ಮೇಲೆತ್ತುವ ಕಾರ್ಯ ಎಗ್ಗಿಲ್ಲದೇ ಸಾಗಿದೆ. ಹೀಗಾಗಿ ಜಗತ್ತಿನಲ್ಲಿ ನಮ್ಮ ದೇಶದಲ್ಲಿ ಅತಿಹೆಚ್ಚು ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, ಭೂಮಿಯೊಳಗಿನ ನೀರನ್ನು ಮೇಲೆತ್ತುವಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಒಂದು ವರ್ಷಕ್ಕೆ ಅಂದಾಜು 25,000 ಕೋಟಿ ಕ್ಯುಬಿಕ್‌ ಮೀಟರ್‌ ನೀರನ್ನು ಮೇಲೆತ್ತಲಾಗುತ್ತಿದೆ. ಪರಿಸರ ಮತ್ತು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ನಮ್ಮ ಪೂರ್ವಜರು ಭವಿಷ್ಯದ ದೃಷ್ಟಿಯಿಂದ ನಿರ್ಮಿಸಿದ್ದ ಬಹುತೇಕ ಕೆರೆಗಳು ಸೂಕ್ತ ನಿರ್ವಹಣೆ ಇಲ್ಲದೆ ಇಂದು ವಿನಾಶದ ಅಂಚಿಗೆ ಬಂದು ತಲುಪಿವೆ. ಮಳೆಗಾಲದಲ್ಲಿ ಬೀಳುವ ಮಳೆನೀರನ್ನು ಸಮಪರ್ಕವಾಗಿ ಸಂಗ್ರಹಿಸುವಲ್ಲಿ ವಿಫಲರಾಗಿದ್ದೇವೆ. ಕೆರೆಗಳ ಮಹತ್ವ ಜನರಿಗೆ ತಿಳಿದಿಲ್ಲ. ಅಂತರ್ಜಲ ಬರಿದಾಗಿ ಕಳೆದ ವರ್ಷ ಬಿಸ್ತುವಳ್ಳಿ ಗ್ರಾಮದ ಆಸುಪಾಸಿನ ರೈತರು ₹ 1ಕೋಟಿಗೂ ಹೆಚ್ಚು ಹಣವನ್ನು ಕೊಳವೆಬಾವಿ ಕೊರೆಯಲು ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜಿಗೆ ಖರ್ಚು ಮಾಡಿದ್ದಾರೆ. ಫ್ಲೋರೈಡ್‌
ಅಂಶ ಹೆಚ್ಚಾಗಿದ್ದು, ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಶಾಸಕ ಎಚ್‌.ಪಿ.ರಾಜೇಶ್‌ ಮಾತನಾಡಿ, ‘ಗ್ರಾಮಸ್ಥರೇ ಸ್ವ ಇಚ್ಛೆಯಿಂದ ಹೂಳು ತೆಗೆಯಲು ಸಂಘಟಿತರಾಗಿರುವುದು ಮಾದರಿ ಯಾಗಿದೆ. ಸರ್ಕಾರದ ವಿವಿಧ ಯೋಜನೆಗಳಡಿ ಕೆರೆಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಮಾಜಿ ಶಾಸಕ ಎಸ್‌.ವಿ.ರಾಮಚಂದ್ರ ಮಾತನಾಡಿ, ‘ಬರಪೀಡಿತ ತಾಲ್ಲೂಕಿನಲ್ಲಿ ಅಂತರ್ಜಲ ಸಂರಕ್ಷಣೆಗಾಗಿ ಸರ್ಕಾರದ ಅನುದಾನವನ್ನು ನೆಚ್ಚಿಕೊಳ್ಳದೆ ಜನರೇ ಕೆರೆ ಸಂರಕ್ಷಣೆಗೆ ಮುಂದಾಗಿದ್ದಾರೆ ಇದು ಉಳಿದವರಿಗೆ ಸ್ಫೂರ್ತಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇದುವರೆಗೆ ಹಳ್ಳಿಗಳಲ್ಲಿ ಕ್ರೀಡೆ, ನಾಟಕೋತ್ಸವಗಳಿಗೆ ದೇಣಿಗೆ ನೀಡುತ್ತಿದ್ದೆವು. ಹೂಳು ತೆಗೆಯುವ ಕೆಲಸ ಈ ಭಾಗಕ್ಕೆ ತುರ್ತಾಗಿ ಆಗಬೇಕಿದೆ. ಆದ್ದರಿಂದ ತಾಲ್ಲೂಕಿನ ಯಾವುದೇ ಹಳ್ಳಿಯಲ್ಲಿ ಕೆರೆ ಹೂಳು ತೆಗೆಯುವ ಕಾರ್ಯಕ್ಕೆ ₹ 10 ಸಾವಿರ ಕೊಡುತ್ತೇನೆ’ ಎಂದು ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಘೋಷಿಸಿದರು.

ಕೆರೆ ಸಂರಕ್ಷಣಾ ಕಾರ್ಯದ ಹಣಕಾಸು ವಿಷಯದಲ್ಲಿ ಪಾರದರ್ಶಕತೆ ಕಾಪಾಡಿ ಎಂದು ಸಾಮಾಜಿಕ ಕಾರ್ಯಕರ್ತ ಗಣಪತಿ ಹೆಗ್ಗಡೆ ಕಿವಿಮಾತು ಹೇಳಿದರು. ಜೆಡಿಎಸ್‌ ಮುಖಂಡ ಕೆ.ಬಿ.ಕಲ್ಲೇರುದ್ರೇಶ್‌, ಸಂಘಟಕ ಬಿ.ಎನ್.ಎಂ.ಸ್ವಾಮಿ, ದೇಣಿಗೆ ನೀಡಲು ಬಯಸುವವರು ಮೊಬೈಲ್‌: 94488 84309 ಸಂಪರ್ಕಿಸಬಹುದು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾಂತಕುಮಾರಿ, ಎಪಿಎಂಸಿ ಅಧ್ಯಕ್ಷ ಯು.ಜಿ.ಶಿವಕುಮಾರ್‌, ಎನ್‌.ಎಸ್‌.ರಾಜು, ಬಿಸ್ತುವಳ್ಳಿ ಬಾಬು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಸ್ಲಾಂ ಬಾಷಾ ಹಾಜರಿದ್ದರು.

ಕೆರೆ ಸಂರಕ್ಷಣೆಗೆ ಮುಂದಾದ ಗ್ರಾಮಸ್ಥರು

ಜಗಳೂರು: ಹೂಳು ತುಂಬಿಕೊಂಡು ಕಳಾಹೀನವಾಗಿದ್ದ ತಾಲ್ಲೂಕಿನ ಬಿಸ್ತುವಳ್ಳಿ ಕೆರೆಯ ಹೂಳು ತೆಗೆಯುವ ನಿಟ್ಟಿನಲ್ಲಿ ಗ್ರಾಮಸ್ಥರೇ ಸ್ವ ಇಚ್ಛೆಯಿಂದ ಮುಂದಾಗಿದ್ದು, ಶುಕ್ರವಾರ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸರ್ಕಾರದ ಅನುದಾನವನ್ನು ನೆಚ್ಚಿಕೊಳ್ಳದೇ ಗ್ರಾಮದ ಜನರು ಹಣವನ್ನು ಸಂಗ್ರಹಿಸಿ ಹೂಳು ತೆರೆವು ಕಾರ್ಯಕ್ಕೆ ಸಾಮೂಹಿಕವಾಗಿ ಕೈಜೋಡಿಸಿದ್ದಾರೆ. ಕಳೆದ ಎರಡು ವರ್ಷಗಳ ಸತತ ಬರಗಾಲದಿಂದ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಕೊರತೆಯಾಗಿ ತೀವ್ರ ಸಮಸ್ಯೆ ಉಂಟಾಗಿತ್ತು. ಎಲ್ಲಾ ರೈತರು ಸಹಸ್ರಾರು ರೂಪಾಯಿ ತೆತ್ತು ಟ್ಯಾಂಕರ್‌ಗಳ ಮೂಲಕ ನೀರು ಹರಿಸಿ ತೋಟಗಳನ್ನು ಉಳಿಸಕೊಳ್ಳಲು ಹರಸಾಹಸ ಪಟ್ಟಿದ್ದರು.

₹ 1.5 ಲಕ್ಷ ಸಂಗ್ರಹ

ಜಲಕ್ಷಾಮದಿಂದ ಕಂಗೆಟ್ಟ ರೈತರು ಒಗ್ಗೂಡಿ ತಾಲ್ಲೂಕಿನಲ್ಲೇ ಮೊದಲ ಬಾರಿ ಕೆರೆ ಸಂರಕ್ಷಣೆಗೆ ಇಳಿದಿದ್ದಾರೆ. ಜಲ ತಜ್ಞ ಎನ್‌.ದೇವರಾಜ್‌ರೆಡ್ಡಿ ಅವರು ಗ್ರಾಮಸ್ಥರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕೆರೆಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಹಾಜರಿದ್ದ ಬಹುತೇಕರು ದೇಣಿಗೆ ನೀಡಿದರು. ಸ್ಥಳದಲ್ಲೇ ₹ 1.50 ಲಕ್ಷ ಸಂಗ್ರಹವಾಯಿತು.

ಶಾಸಕ ಎಚ್‌.ಪಿ.ರಾಜೇಶ್‌ ₹ 50 ಸಾವಿರ, ಮಾಜಿ ಶಾಸಕ ಎಸ್‌.ವಿ.ರಾಮಚಂದ್ರ ₹ 25 ಸಾವಿರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾಂತಕುಮಾರಿ ₹ 10 ಸಾವಿರ, ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ₹ 10 ಸಾವಿರ, ಪಿಎಲ್‌ಡಿ ಬ್ಯಾಂಕ್‌ ಸದಸ್ಯ ಎನ್‌.ಎಸ್‌. ರಾಜು ₹ 10 ಸಾವಿರ, ಕೆ.ಬಿ. ಕಲ್ಲೇರುದ್ರೇಶ್‌ ₹ 5 ಸಾವಿರ ಹಾಗೂ ಜಲತಜ್ಞ ಎನ್‌. ದೇವರಾಜ್‌ರೆಡ್ಡಿ ₹ 5 ಸಾವಿರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.