ADVERTISEMENT

ಅಂತರ್ಜಾಲದಿಂದ ಓದುವವರ ಸಂಖ್ಯೆ ಕ್ಷೀಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2014, 5:56 IST
Last Updated 26 ಸೆಪ್ಟೆಂಬರ್ 2014, 5:56 IST
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಸಾರಾ ಅಬೂಬಕ್ಕರ್‌ ಅವರನ್ನು ಸನ್ಮಾನಿಸಲಾಯಿತು. ಚಿತ್ರದಲ್ಲಿ ಶಂಕರ ಹಲಗತ್ತಿ, ಡಾ.ಶಾಂತಾ ಇಮ್ರಾಪುರ, ಜಿ.ಜಿ.ದೊಡ್ಡವಾಡ, ಡಾ.ಪಾಟೀಲ ಪುಟ್ಟಪ್ಪ, ಡಾ.ಮಾಲತಿ ಪಟ್ಟಣಶೆಟ್ಟಿ, ಮಂಜುಳಾ ಹಾರೋಗೊಪ್ಪ ಹಾಗೂ ಡಾ.ಡಿ.ಎಂ.ಹಿರೇಮಠ ಇದ್ದಾರೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಸಾರಾ ಅಬೂಬಕ್ಕರ್‌ ಅವರನ್ನು ಸನ್ಮಾನಿಸಲಾಯಿತು. ಚಿತ್ರದಲ್ಲಿ ಶಂಕರ ಹಲಗತ್ತಿ, ಡಾ.ಶಾಂತಾ ಇಮ್ರಾಪುರ, ಜಿ.ಜಿ.ದೊಡ್ಡವಾಡ, ಡಾ.ಪಾಟೀಲ ಪುಟ್ಟಪ್ಪ, ಡಾ.ಮಾಲತಿ ಪಟ್ಟಣಶೆಟ್ಟಿ, ಮಂಜುಳಾ ಹಾರೋಗೊಪ್ಪ ಹಾಗೂ ಡಾ.ಡಿ.ಎಂ.ಹಿರೇಮಠ ಇದ್ದಾರೆ.   

ಧಾರವಾಡ: ‘ಅಂತರಜಾಲ ಹಾಗೂ ಮೊಬೈಲ್‌ನಿಂದಾಗಿ ಇಂದಿನ ಮಕ್ಕಳಲ್ಲಿ ಓದುವ ಅಭ್ಯಾಸವೇ ಇಲ್ಲದಾಗಿದೆ. ಹೀಗಾದಲ್ಲಿ ನಾವು ಯಾರಿಗಾಗಿ ಬರೆಯಬೇಕು’ ಎಂದು ಹಿರಿಯ ಸಾಹಿತಿ ಡಾ.ಸಾರಾ ಅಬೂಬಕ್ಕರ್‌ ಆತಂಕ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು. ಡಾ.ಪಾಟೀಲ ಪುಟ್ಟಪ್ಪ ಅವರ ಮಗಳಾದ ದಿವಂಗತ ಶಾಂತಲಾ ಪಾಟೀಲ ಅವರ ಹೆಸರಿನಲ್ಲಿ ಕಳೆದ ಮೂರು ವರ್ಷ­ಗಳಿಂದ ನೀಡುತ್ತಿರುವ ಈ ಪ್ರಶಸ್ತಿಯ ರೂ25ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

‘ತಂತ್ರಜ್ಞಾನದ ಬಳಕೆಯಿಂದಾಗಿ ಕೋಮು­ಸೌಹಾ­ರ್ದಕ್ಕೆ ಧಕ್ಕೆಯಾಗಿದೆ. ಜತೆಗೆ ನೈತಿಕ ಪೊಲೀಸ್‌­ಗಿರಿಯಿಂದ ಯುವತಿಯರು ಸ್ವಾತಂತ್ರ್ಯ ಹರಣ­ವಾಗಿದೆ’ ಎಂದು ಡಾ.ಸಾರಾ ಅಬೂಬಕ್ಕರ್‌ ಹೇಳಿದರು. ‘ಗಡಿ ಹಾಗೂ ಭಾಷೆಯ ಕುರಿತಂತೆ ಬೆಳಗಾವಿಯಲ್ಲಿ ಎಷ್ಟೊಂದು ಗಲಾಟೆ ನಡೆಯುತ್ತಿದೆ. ಆದರೆ ಕೇರಳದಲ್ಲಿ ಕನ್ನಡ ಸಾಹಿತ್ಯ ಕುರಿತ ಕಾರ್ಯಕ್ರಮಗಳಿಗೆ ಮಳೆಯಾಳಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಅದೇ ರೀತಿಯ ಪ್ರತಿಕ್ರಿಯೆಯನ್ನು ಕನ್ನಡಿಗರಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಇತ್ತೀಚಿನ ಬೆಳವಣಿಗೆ. ಇದು ಏಕೆ ಹೀಗಾಗಿದೆ ಎಂದು ಅರ್ಥವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೇರಳದಲ್ಲಿ ಧರ್ಮಕ್ಕೆ ಸೀಮಿತವಾಗದೆ ಓಣಂ ಆಚರಿಸಲಾಗುತ್ತದೆ. ಆದರೆ ಅಂಥದ್ದೊಂದು ಎಲ್ಲಾ ಧರ್ಮವನ್ನೊಳಗೊಂಡ ಹಬ್ಬ ನಮ್ಮ ನಾಡಿನಲ್ಲಿ ಇಲ್ಲದಿರುವುದೇ ವಿಪರ್ಯಾಸ. ಜತೆಗೆ ಆಗಿನ ಕಾಲದಲ್ಲಿ ಇಲ್ಲದ ಹಾಗೂ ಪವಿತ್ರ ಕುರಾನ್‌ನಲ್ಲೂ ಹೇಳದ ಬುರ್ಕಾ ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳನ್ನೂ ಆವರಿಸಿರುವುದು ಬೇಸರದ ಸಂಗತಿ. ಬುರ್ಕಾ ಹಾಗೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿರು­ವುದರಿಂದ ಮುಸ್ಲಿಂ ಮಹಿಳೆಯರ ಬೆಳವಣಿಗೆಗೆ ಮಾರಕವಾಗಿದೆ’ ಎಂದು ಅವರು ಹೇಳಿದರು.

ಡಾ.ಸಾರಾ ಅಬೂಬಕ್ಕರ್ ಅವರನ್ನು ಸನ್ಮಾನಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಮಾಲತಿ ಪಟ್ಟಣಶೆಟ್ಟಿ, ‘ಲೇಖಕಿಗೆ ಬೇಕಾದ ಜಾಗೃತ ಮನಸ್ಸು ಹಾಗು ಸಂವೇದನಾಶೀಲ ಹೃದಯ ಸಾರಾ ಅವರಿಗೆ ಇದೆ. ಹೀಗಾಗಿ ಅವರು ತಮ್ಮ ಬರಹ ಹಾಗೂ ಬದುಕಿನಲ್ಲಿ ದಿಟ್ಟತನದ ಹೋರಾಟ ನಡೆಸಿದವರು’ ಎಂದು ಹೇಳಿದರು.

‘ಸಾರಾ ಅಬೂಬಕ್ಕರ್ ಅವರ ಬರಹಗಳಿಂದ ಅವೈಜ್ಞಾನಿ ಪದ್ಧತಿಯಿಂದ ಶೋಷಣೆಗೆ ಒಳಗಾದ ಮುಸ್ಲಿಂ ಮಹಿಯರಿಗೆ ಹೊಸ ಚೈತನ್ಯ ನೀಡಿದೆ’ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಡಾ.ಶಾಂತಲಾ ಇಮ್ರಾಪುರ, ಜಿ.ಜಿ.ದೊಡ್ಡವಾಡ, ಡಾ.ಪಾಟೀಲ ಪುಟ್ಟಪ್ಪ, ಡಾ.ಡಿ.ಎಂ.ಹಿರೇಮಠ, ಮಂಜುಳಾ ಹಾರೊಗೊಪ್ಪ, ಶಂಕರ ಹಲಗತ್ತಿ ಹಾಗೂ ಕೃಷ್ಣಾ ಜೋಶಿ ಉಪಸ್ಥಿತರಿದ್ದರು.

ರಿಯಾಯಿತಿ ದರದಲ್ಲಿ ಬಸ್‌ ಸಂಚಾರ
ಹುಬ್ಬಳ್ಳಿ:
ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗ ಹುಬ್ಬಳ್ಳಿಯಿಂದ ಮಿಶ್ರಿಕೋಟಿ ಮತ್ತು ತಡಸಕ್ಕೆ ತೆರಳುವ ಬಸ್‌ ಪ್ರಯಾಣಿಕರಿಗೆ ದರದಲ್ಲಿ ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಿದ್ದು ಈ ಸೌಲಭ್ಯ ಇದೇ 26ರಿಂದ ಸಿಗಲಿದೆ.

ಹುಬ್ಬಳ್ಳಿ–ಮಿಶ್ರಿಕೋಟಿ ಮಧ್ಯೆ ಬೆಳಿಗ್ಗೆ 6.45ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ಪ್ರತಿ 15 ನಿಮಿಷಕ್ಕೆ ಒಂದರಂತೆ ಒಟ್ಟು 48 ಬಾರಿ ಬಸ್‌ಗಳು ಸಂಚರಿಸಲಿವೆ. ಹುಬ್ಬಳ್ಳಿಯಿಂದ ಮಿಶ್ರಿಕೋಟಿಗೆ ರೂ15 ಮತ್ತು ಮಿಶ್ರಿಕೋಟಿ ಕ್ರಾಸ್‌ನಿಂದ ಮಿಶ್ರಿಕೋಟಿಗೆ ರೂ 5 ದರ ನಿಗದಿ ಮಾಡಲಾಗಿದೆ.

ಹುಬ್ಬಳ್ಳಿ-–ತಡಸ ಮಧ್ಯೆ ಬೆಳಿಗ್ಗೆ 7.30ರಿಂದ ರಾತ್ರಿ 8.15ರ ವರೆಗೆ ಪ್ರತಿ 15 ನಿಮಿಷಕ್ಕೆ ಒಂದರಂತೆ ಒಟ್ಟು 44 ಬಾರಿ ಸಂಚರಿಸಲಿದ್ದು ಹುಬ್ಬಳ್ಳಿಯಿಂದ ತಡಸಕ್ಕೆ ರೂ 20 ಮತ್ತು ತಡಸ ಕ್ರಾಸ್‌ನಿಂದ ತಡಸಕ್ಕೆ ರೂ 5 ದರ ನಿಗದಿ ಮಾಡಲಾಗಿದೆ ಎಂದು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.