ADVERTISEMENT

‘ಅನ್ನಭಾಗ್ಯ ಯೋಜನೆಯಿಂದ ನಿಂತ ಗುಳೆ’

ಪಿಟಿಐ
Published 18 ಮೇ 2017, 6:46 IST
Last Updated 18 ಮೇ 2017, 6:46 IST

ಧಾರವಾಡ: ‘ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಆರಂಭಿಸಿದ ನಂತರ ಜನರು ಗುಳೆ ಹೋಗುವುದು ನಿಂತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ‘ಜನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅನ್ನಭಾಗ್ಯ ಯೋಜನೆಯು ಬಡಜನರ ಹಸಿವನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ. ‘ನಮ್ಮ ಹೊಲ ನಮ್ಮ ದಾರಿ ಯೋಜನೆ ಜಾರಿಯಲ್ಲಿ ಕರ್ನಾಟಕಕ್ಕೆ ಧಾರವಾಡ ಜಿಲ್ಲೆ ಮಾದರಿಯಾಗಿದೆ’ ಎಂದು ತಿಳಿಸಿದರು.

ಹೊಲಗಳ ರಸ್ತೆ ನಿರ್ಮಾಣ ಕಾರ್ಯ ಈಗಾಗಲೇ ಸಂಪೂರ್ಣವಾಗಿ ಮುಗಿದಿದೆ. ಕ್ಷೀರಧಾರೆ ಯೋಜನೆಯ ಮೂಲಕ ಪ್ರತಿ  ಲೀಟರ್‌ ಹಾಲಿಗೆ ₹5  ಪ್ರೋತ್ಸಾಹ ಧನ ನೀಡುತ್ತಿರುವ ಸರ್ಕಾರ ಪ್ರತಿದಿನ ₹ 4 ಕೋಟಿ ಹಣ  ರೈತರ ಕೈ ಸೇರುವಂತೆ ಮಾಡುತ್ತಿದೆ ಎಂದು ವಿವರಿಸಿದರು.

ADVERTISEMENT

ಕೃಷಿಭಾಗ್ಯ ಯೋಜನೆಯಡಿ ನಿರ್ಮಿಸಿಕೊಂಡ ಕೃಷಿ ಹೊಂಡಗಳಿಂದ ರೈತರ ಬದುಕು ಉತ್ತಮಗೊಂಡಿದೆ. ಪಶುಭಾಗ್ಯ ಯೋಜನೆಯಿಂದ ಜನರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ‘ಈಚೆಗೆ ಸುರಿದ ಮಳೆಯಿಂದ ನವಲಗುಂದ ಮತ್ತು ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ನಿರ್ಮಿಸಿದ ಕೃಷಿ ಹೊಂಡಗಳಿಂದ ನೀರಿನ ಮತ್ತು ಕೃಷಿ ಚಟುವಟಿಕೆಗಳ ಸಮಸ್ಯೆ ತೀರಿದಂತಾಗಿದೆ. ಆದರೆ, ಅನೇಕ ಕಾರ್ಯಗಳು ಬಾಕಿಯಿವೆ. ಅವುಗಳನ್ನು ಕ್ಷಿಪ್ರವಾಗಿ ಜಾರಿಗೊಳಿಸಬೇಕು’ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

‘ನವಲಗುಂದ ಸೇರಿದಂತೆ ಜಿಲ್ಲೆಯ ಹಲವೆಡೆ ಶಾಲಾ ಕಟ್ಟಡಗಳು ದುಃಸ್ಥಿತಿಯಲ್ಲಿವೆ. ದುರಸ್ತಿಗೆ ಸಚಿವರು ಸರ್ಕಾರಕ್ಕೆ ಪತ್ರ ಬರೆಯಬೇಕು. ‘ನಿಧಾನಗತಿಯಲ್ಲಿ ಸಾಗುತ್ತಿರುವ ಬಿಆರ್‌ಟಿಎಸ್‌ನಿಂದ ಮಹಾನಗರ ಜನತೆ ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು’ ಎಂದು ಆಗ್ರಹಿಸಿದರು.

ವಾ.ಕ.ರ.ಸಾ.ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚನ್ನಬಸಪ್ಪ ಮಟ್ಟಿ, ಕರಿಯಪ್ಪ ಮಾದರ್, ತಾ.ಪಂ. ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಪಾಲಿಕೆ ಆಯುಕ್ತ  ಸಿದ್ಧಲಿಂಗಯ್ಯ ಹಿರೇಮಠ, ಡಿವೈಎಸ್‌ಪಿ ಚಂದ್ರಶೇಖರ್ ಉಪಸ್ಥಿತರಿದ್ದರು.

ಸರ್ಕಾರದ ವಿವಿಧ ಯೋಜನೆಗಳ  ಫಲಾನುಭವಿಗಳು ಯೋಜನೆಗಳ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಫಲಾನುಭವಿಗಳಿಗೆ ಸಹಾಯಧನದ ಚೆಕ್‌ ಹಾಗೂ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಉಚಿತ ಅಕ್ಕಿ ಹಂಚಲಾಯಿತು.

ಇದೇ ವೇಳೆ 50 ನಗರ ಸಾರಿಗೆ ವಾಹನಗಳನ್ನು ಸಚಿವರು ಲೋಕಾರ್ಪಣೆ ಮಾಡಿದರು. ಸರ್ಕಾರವು ನಾಲ್ಕು ವರ್ಷಗಳಲ್ಲಿ ಮಾಡಿರುವ ಜಿಲ್ಲೆಯ ಪ್ರಗತಿ ಕುರಿತು ಕಿರುಪುಸ್ತಕ ಬಿಡುಗಡೆ ಮಾಡಲಾಯಿತು.

**

‘ಆರ್ಥಿಕ ಪರಿವರ್ತನೆ ತಂದ ರಾಜ್ಯ ಸರ್ಕಾರ’

‘ಹಿಂದುಳಿದ ವರ್ಗಗಳ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರವು ಪರಿವರ್ತನೆ ತಂದಿದೆ’ ಎಂದು ನಿವೃತ್ತ ಹಿರಿಯ ಅರ್ಥಶಾಸ್ತ್ರದ ಉಪನ್ಯಾಸಕ ಪ್ರೊ.ಎನ್.ಜಿ.ಚಚಡಿ ಹೇಳಿದರು.

‘ಒಬ್ಬ ವ್ಯಕ್ತಿಗೆ, ಕುಟುಂಬಕ್ಕೆ ಮೂಲಸೌಕರ್ಯ ಒದಗಿಸಿರುವುದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ತಿಳಿದ ಸರ್ಕಾರವು ಪೌಷ್ಟಿಕ ಆಹಾರ ಪೂರೈಕೆ, ಮನೆಗಳ ನಿರ್ಮಾಣ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರ ಪರಿಣಾಮ ಪರಿವರ್ತನೆ ಸಾಧ್ಯವಾಯಿತು’ ಎಂದರು.

ವಿದ್ಯಾಸಿರಿಯಿಂದ 12 ಲಕ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮತ್ತು ಐದು ಲಕ್ಷ ಎಸ್ಸೆಸ್ಸೆಲ್ಸಿ ಪೂರ್ವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಉತ್ತಮಗೊಂಡಿದೆ ಎಂದು ಅವರು ತಿಳಿಸಿದರು.

**

ಸರ್ಕಾರದ ಹಲವು ಸಾಧನೆ ಮಾಡಿದೆ. ಆದರೆ, ರೈತರ ಸಾಲ ಮನ್ನಾ ಮಾಡದಿರುವುದು ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
–ಎನ್‌.ಎಚ್‌. ಕೋನರಡ್ಡಿ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.