ADVERTISEMENT

ಆಮರಣ ಉಪವಾಸ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 5:52 IST
Last Updated 27 ಜುಲೈ 2017, 5:52 IST

ಧಾರವಾಡ: ಮಲಪ್ರಭಾ- ಮಹದಾಯಿ ಕಳಸಾ- ಬಂಡೂರಿ ರೈತ ಹೋರಾಟ ಕೇಂದ್ರ ಸಮಿತಿ ಹೋರಾಟಗಾರ ರೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ರೈತ ಮುಖಂಡರೊಂದಿಗಿನ ಜಿಲ್ಲಾಡಳಿತದ ಮಾತುಕತೆ ವಿಫಲವಾಯಿತು. ಇದರ ಬೆನ್ನಲ್ಲೇ ಇದೇ 28ರಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ರೈತ ಮುಖಂಡ ಲೋಕನಾಥ ಹೆಬ್ಸೂರ ಘೋಷಿಸಿದರು.

ಕೃಷಿ ಸಾಲ ಹೊಂದಿರುವ ರೈತರಿಗೆ ಬೆಳೆ ವಿಮೆ ಕಡ್ಡಾಯವನ್ನು ಸಡಿಲಗೊಳಿ ಸಬೇಕು, ನವಲಗುಂದ ತಾಲ್ಲೂಕಿನಲ್ಲಿ ನಡೆದ ಗಲಭೆ ವೇಳೆ ಬಂಧನಕ್ಕೊಳಗಾಗಿ ನಂತರ ಮೃತಪಟ್ಟ ರೈತರ ಕುಟುಂಬ ಗಳಿಗೆ ಪರಿಹಾರ ನೀಡಬೇಕು, ಮಲಪ್ರಭಾ ನದಿ ನೀರನ್ನು ಕೃಷಿಗೆ ನೀಡಬೇಕು ಎಂಬ ಬೇಡಿಕೆಗಳನ್ನು ಹೊತ್ತು ತಂದಿದ್ದ ರೈತರು, ತಮಗೆ ಜಿಲ್ಲಾಡಳಿತದಿಂದ ಸೂಕ್ತ ಪರಿಹಾರ ಸಿಗಲಿಲ್ಲ ಎಂದು ಸಭೆಯಿಂದ ಹೊರನಡೆದರು.

‘ರೈತರ ಪಹಣಿಪತ್ರ, ಆಧಾರ್‌ ಗುರುತಿನ ಚೀಟಿ, ಬ್ಯಾಂಕ್ ಖಾತೆಗಳಂತಹ ದಾಖಲೆ ಕೊಟ್ಟರೂ ಜಿಲ್ಲೆಯ 32 ಸಾವಿರ (ಕೆವಿಜಿ ಬ್ಯಾಂಕ್‌ 15 ಸಾವಿರ ಹಾಗೂ ಕೆಸಿಸಿ ಬ್ಯಾಂಕ್‌ 17 ಸಾವಿರ) ರೈತರಿಗೆ ಬೆಳೆ ವಿಮೆ ಬಂದಿಲ್ಲ. ಇದು ರೈತರಿಗೆ ಟೋಪಿ ಹಾಕುವ ಕುತಂತ್ರವೇ ಹೊರತು, ಸಕಾರಣವಲ್ಲ. ರೈತರ ಪರವಾಗಿ ನಿಲ್ಲಬೇಕಾದ ಅಧಿ ಕಾರಿಗಳು ವಿಮಾ ಕಂಪೆನಿಯ ಪರವಾಗಿ ಮಾತನಾಡುತ್ತಿರುವುದು ವಿಪರ್ಯಾಸ’ ಎಂದು ಲೋಕನಾಥ ಹೆಬಸೂರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಜಿಲ್ಲೆಯ ರೈತರಿಗೆ ಮಂಜೂರಾಗಿರುವ ₹172 ಕೋಟಿಯಲ್ಲಿ ₹ 42 ಕೋಟಿ ಹಣ ರೈತರ ಹೆಸರು ಹಾಗೂ ಬ್ಯಾಂಕ್ ಮಾಹಿತಿ ತಪ್ಪು ನಮೂದಿಸಿದ್ದರಿಂದ ಬಂದಿಲ್ಲ. ₹ 56 ಕೋಟಿ ಮೊತ್ತದ ಹತ್ತಿ ಹಾಗೂ ಮೆಣಸಿನ ಕಾಯಿ ತೆಗೆದಿದ್ದಾರೆ ಎಂದು ವಿಮಾ ಕಂಪೆನಿಗಳು ನೀಡುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮಳೆಯೇ ಆಗದೆ ಗಿಡವೇ ಹುಟ್ಟಿಲ್ಲ ಎಂದಾದ ಮೇಲೆ ಬೆಳೆ ತೆಗೆಯಲು ಹೇಗೆ ಸಾಧ್ಯ. ವಿಮಾ ಕಂಪೆನಿಗಳು ಈ ಬಗೆಯ ಮೋಸ ಮಾಡುವುದೇ ಆದಲ್ಲಿ ವಿಮೆಯನ್ನು ಯಾವ ರೈತರೂ ಕಟ್ಟುವುದಿಲ್ಲ. ಜತೆಗೆ ಬೆಳೆ ಸಾಲ ಹೊಂದಿರುವ ರೈತರನ್ನು ಇದರಿಂದ ಮುಕ್ತಿಗೊಳಿಸಿ. ಇಲ್ಲವೇ ರೈತರು ಸಂಪೂರ್ಣ ಸಾಲದಲ್ಲಿ ಮುಳಗಿಹೋಗಲಿದ್ದಾರೆ’ ಎಂದರು.

‘ಬೆಳೆ ವಿಮೆ ಬರುತ್ತದೆಯೇ ಎಂಬುದನ್ನು ಖಾತ್ರಿ ಪಡಿಸಿದರೆ ರೈತರು ಬೆಳೆ ವಿಮಾ ಕಂತು ತುಂಬಲಿದ್ದಾರೆ. ಆದರೆ, ವಿಮಾ ಕಂಪೆನಿಯು ಮೂರು ಜನ ವಿಮೆ ಮಾಡಿಸಿದ ಗ್ರಾಮಕ್ಕೆ ಶೇ 100ರಷ್ಟು ಪರಿಹಾರ, ಆದರ ಪಕ್ಕದ ಗ್ರಾಮದಲ್ಲಿ ಶೇ 100ರಷ್ಟು ವಿಮಾ ಕಂತು ತುಂಬಿದ ಹೊಲಗಳಿಗೆ ಶೇ 0.03 ರಷ್ಟು ಪರಿಹಾರ ಎಂದು ಘೋಷಿಸಿರುವುದನ್ನು ಗಮನಿಸಿದರೆ ಬ್ಯಾಂಕ್‌ ಹಾಗೂ ವಿಮಾ ಕಂಪೆನಿಗಳ ಮೋಸ ಅರ್ಥವಾಗುತ್ತದೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾ ಗಿದ್ದಾರೆ. ಹೀಗಾಗಿ ಬ್ಯಾಂಕ್‌ಗಳ ಎದುರು ಧರಣಿ ನಡೆಸಲು ರೈತರು ತೀರ್ಮಾನಿಸಿದ್ದಾರೆ’ ಎಂದು ಹೇಳಿದರು.

ತಪ್ಪೊಪ್ಪಿಕೊಂಡ ಜಿಲ್ಲಾಡಳಿತ:  2016ರ ಮುಂಗಾರಿನ ₹ 172ಕೋಟಿ ಬೆಳೆವಿಮೆ ಬಿಡುಗಡೆಯಾಗಿರುವ ಕುರಿತು ವಿವರಗಳನ್ನು ಕೇಳಿದ ರೈತ ಮುಖಂಡ ಸುಭಾಷ ಚಂದ್ರಗೌಡ ಪಾಟೀಲ್, ‘ಬೆಳೆವಿಮೆ ಹಣ ಬಂದಿದೆ ಎಂದು ಪ್ರಚಾರ ಮಾಡ ಲಾಗಿದೆ. ಆದರೆ, ಇಲ್ಲಿ ನೋಡಿದರೆ ನೀವು ಬಂದಿಲ್ಲ ಎನ್ನುತ್ತೀರಿ. ಸತ್ಯವನ್ನು ಹೇಳಿ ಎಂದು ಪಟ್ಟು ಹಿಡಿದರು.  ಕೊನೆಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ, ‘ಈವರೆಗೂ ಜಿಲ್ಲೆಗೆ ₹ 65ಕೋಟಿ ಮಾತ್ರ ಬಂದಿದೆ. ಇನ್ನುಳಿದ ಹಣ ಬರಬೇಕಿದೆ’ ಎಂದರು.

ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನ ಹಳ್ಳಿ ಮಾತನಾಡಿ, ‘ಬ್ಯಾಂಕ್‌ಗಳಿಂದ ತಪ್ಪಾಗಿದೆ. ನಾವು ಇದನ್ನು ಒಪ್ಪಿಕೊಳ್ಳುತ್ತೇವೆ’ ಎಂದು ರೈತರಿಗೆ ಸಮಜಾಯಿಷಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪ ವಿಭಾಗಾಧಿ ಕಾರಿ ಮಹೇಶ ಕರ್ಜಗಿ, ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ವಿಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.