ADVERTISEMENT

ಆರು ಭಾಷೆಗಳಲ್ಲಿ ‘ದೇಸಿ ಕೃಷಿ ವಿಜ್ಞಾನ ಕೋಶ’

ಸಂಸ್ಥಾಪನಾ ದಿನಾಚರಣೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಜುಲೈ 2014, 6:28 IST
Last Updated 22 ಜುಲೈ 2014, 6:28 IST

ಹುಬ್ಬಳ್ಳಿ: ಕಲಿಕೆಯ ಜೊತೆಗೆ ಸಂಶೋಧನೆ, ಪ್ರಕಟಣೆಗೂ ಒತ್ತು ನೀಡುತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ 15 ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿವೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೊಡಿ ಬಳಿಯ ವಿಶ್ವವಿದ್ಯಾಲ ಯದ ಕ್ಯಾಂಪಸ್‌ನಲ್ಲಿ ಮಂಗಳವಾರ ನಡೆಯಲಿ ರುವ ಸಂಸ್ಥಾಪನಾ ದಿನಾಚರಣೆಯಲ್ಲಿ ಈ ಪ್ರಕಟಣೆಗಳು ಅನಾವರಣಗೊಳ್ಳಲಿವೆ.

ದೇಸಿ ಕೃಷಿ ಸಮುದಾಯದ ಕುರಿತು ಕಳೆದ ಒಂದು ವರ್ಷದಿಂದ ವಿಶ್ವವಿದ್ಯಾಲಯದ ಮಾರ್ಗ ದರ್ಶನದಲ್ಲಿ ನಡೆದ ಅಧ್ಯಯನದ ಒಟ್ಟು ರೂಪವಾಗಿ ‘ದಕ್ಷಿಣ ಭಾರತೀಯ ದೇಸಿ ಕೃಷಿ ವಿಜ್ಞಾನ ಕೋಶ’ ಕೂಡ  ಪ್ರಕಟಗೊಳ್ಳಲಿದೆ. ದಕ್ಷಿಣ ಭಾರತದ ಆರು ಭಾಷೆಗಳಲ್ಲಿ ಈ ಗ್ರಂಥವು ಮೂಡಿಬಂದಿರುವುದು ವಿಶೇಷ.  ಕನ್ನಡದ ಜೊತೆಗೆ ತಮಿಳು, ತೆಲಗು, ಮಲಯಾಳ, ಕೊಡವ ಮತ್ತು ತುಳು ಭಾಷೆಗಳಲ್ಲೂ ಈ ಕೋಶ ಮೂಡಿಬಂದಿದೆ.  ಎರಡು ಸಂಪುಟಗಳಲ್ಲಿ ಪ್ರಕಟಣೆಗೊಳ್ಳುತ್ತಿದೆ.

ವಿಶ್ವವಿದ್ಯಾಲಯದ ವಿಸ್ತರಣೆ ಮತ್ತು ಸಲಹಾ ಕೇಂದ್ರದಿಂದ ಈ ಎಲ್ಲ ಪ್ರಕಟಣೆಗಳನ್ನು ಹೊರತರ ಲಾಗುತ್ತಿದೆ. ಮಂಗಳವಾರದಂದು ಶೇ 50ರ ರಿಯಾಯಿತಿ ದರದಲ್ಲಿ ವಿಶ್ವವಿದ್ಯಾಲಯದಲ್ಲಿ ಪುಸ್ತಗಳ ಮಾರಾಟದ ವ್ಯವಸ್ಥೆಯೂ ಇದೆ.

ಇದರೊಟ್ಟಿಗೆ ಜಾನಪದ ವಿಶ್ವಕೋಶದ ಕರ್ನಾ ಟಕ ಸಂಪುಟ, ಆಫ್ರಿಕನ್ ಜಾನಪದ ವಿಶ್ವಕೋಶ, ಉತ್ತರ ಭಾರತದ ವಿಶ್ವಕೋಶ, ದಕ್ಷಿಣ ಭಾರತದ ವಿಶ್ವಕೋಶ ಮೊದಲಾದ ಗ್ರಂಥಗಳ ಸಂಪಾದನಾ ಕಾರ್ಯವೂ ಭರದಿಂದ ನಡೆದಿದೆ. ಹೀಗಾಗಿ ಸದ್ಯದಲ್ಲಿಯೇ ಮತ್ತಷ್ಟು ಮಹತ್ವದ ಪ್ರಕಟಣೆಗಳು ಹೊರಬರಲಿವೆ.

‘ಕಲಿಕೆ, ಪ್ರಾತ್ಯಕ್ಷಿಕೆ, ತರಬೇತಿ ಮತ್ತು ಸಂಶೋ ಧನೆಗೆ ವಿಶ್ವವಿದ್ಯಾಲಯವು ಒತ್ತು ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಪುಸ್ತಕಗಳು ಪ್ರಕಟಗೊಳ್ಳು ತ್ತಿವೆ. ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 9 ಹಾಗೂ ಅದಕ್ಕೂ ಮುನ್ನ 6 ಪುಸ್ತಕಗಳು ಬಿಡುಗಡೆಯಾಗಿದ್ದವು. ಇದೀಗ 15 ಪುಸ್ತಕಗಳು ಬಿಡುಗಡೆಯಾಗುವ ಮೂಲಕ ಈ ವರ್ಷ ವಿಶ್ವವಿದ್ಯಾಲಯವು ಒಟ್ಟು 30 ಪ್ರಕಟಣೆ ಗಳನ್ನು ಹೊರಡಿಸಿದಂತೆ ಆಗುತ್ತದೆ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ.

‘ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಎಂ.ಫಿಲ್‌ ಹಾಗೂ ಪಿಎಚ್‌ಡಿ ದಾಖಲಾತಿಗೂ ಪ್ರಕಟಣೆ ಹೊರಡಿ ಸಿದ್ದೇವೆ. ಹೀಗಾಗಿ ಸಂಶೋಧನೆ ಜೊತೆಗೆ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೂ ಚುರುಕು ಪಡೆಯಲಿವೆ’ ಎನ್ನುತ್ತಾರೆ ಅವರು.

ಬಿಡುಗಡೆಯಾಗಲಿರುವ ಪುಸ್ತಕಗಳು...
ದಕ್ಷಿಣ ಭಾರತೀಯ ದೇಸಿ ಕೃಷಿ ವಿಜ್ಞಾನ ಕೋಶ (ಸಂಪಾ ದಕರು–ಆರ್‌.ವಿ.ಎಸ್‌. ಸುಂದರಂ. ರಮೇಶ್‌), ವಿಸ್ತೃತ ಜಾನಪದ ಗ್ರಂಥಸೂಚಿ (ಸಂ: ಕ್ಯಾತನಹಳ್ಳಿ ರಾಮಣ್ಣ, ಟಿ.ಎಸ್‌. ರಾಮಪ್ಪ), ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರದ ದೈವಗಳ ಸಂದಿಪಾರ್ದನ (ಲೇ: ಇಂದಿರಾ ಹೆಗಡೆ), ಉತ್ತರ ಕನ್ನಡದ ಜಾನಪದ ಕಥೆಗಳು (ಲೇ: ಶಾಂತಿ ನಾಯಕ್‌), ನೆಲದ ನೆನಪು (ಸಂ: ಚಿಕ್ಕಮಗಳೂರು ಗಣೇಶ್‌, ಜಯಪ್ರಕಾಶ ಶೆಟ್ಟಿ), ಜಾನಪದ ವರ್ಷ–2012 (ಸಂ: ಕೆ.ವಿ. ಮುದ್ದವೀರಪ್ಪ), ತಾತ್ಯಾ ಬಾಪು ಅವರ ಲಾವಣಿಗಳು (ಸಂ. ಹರಿಲಾಲ್‌ ಪವಾರ್‌), ಮಲೆನಾಡ ನುಡಿಕೋಶ (ವೇಣಾಕ್ಷಿ ಎಸ್.ಬಿ), ನಾಡವರ ಜಾನಪದ ತವನಿಧಿ (ಲೇ: ಎನ್‌.ಆರ್‌. ನಾಯಕ್‌), ಪೂಜಾರಿ ಶಿವಣ್ಣ ಹೇಳಿದ ಜುಂಜಪ್ಪ ಮಹಾಕಾವ್ಯ (ಸಂ:  ತೀ.ನಂ. ಶಂಕರನಾರಾಯಣ, ಎಂ.ಎನ್‌. ವೆಂಕ ಟೇಶ), ಬೆಳಗಲಿ ವೀರಣ್ಣ (ಎಂ.ಎನ್‌. ವೆಂಕಟೇಶ), ಮಂಜಮ್ಮ ಜೋಗತಿ (ಲೇ: ಚಂದ್ರಪ್ಪ ಸುಗತಿ).

ಇಂಗ್ಲಿಷ್‌ನಲ್ಲಿ ಪ್ರಕಟಣೆಗೊಳ್ಳಲಿರುವ ಪುಸ್ತಕಗಳು: ಮಂಟೇಸ್ವಾಮಿ ಎಪಿಕ್ಸ್‌ ಟ್ರೇಡಿಶನ್‌ ಆಫ್‌ ಸೌಥ್‌ ಕರ್ನಾಟಕ (ಲೇ: ಪ್ರೊ. ಅಂಬಳಿಕೆ ಹಿರಿಯಣ್ಣ, ಅನುವಾದ–ಎನ್‌.ಟಿ. ಭಟ್‌), ದಾಕ್ಷಿಣಾಥ್ಯ ಅಭಿನಯ ಸಿದ್ಧಾಂತ (ಲೇ: ಗುರುರಾವ್‌ ಬಾಫಟ್‌), ದ ಬಯಲಾಟಾಸ್‌ ಆಫ್‌ ನಾರ್ಥ್‌ ಕರ್ನಾಟಕ (ದಿವಂಗತ ಬಸವರಾಜ ಮಲಶೆಟ್ಟಿ ಅವರ ಸಂಶೋಧನಾ ಪ್ರಬಂಧ. ಅ: ಪಾರ್ವತಿ ಐತಾಳ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT