ADVERTISEMENT

‘ಉತ್ತಮ ಕಾರ್ಯಕ್ಷಮತೆಗೆ ಪೊಲೀಸರ ಕೊರತೆ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:24 IST
Last Updated 20 ಮಾರ್ಚ್ 2017, 6:24 IST

ಧಾರವಾಡ: ಪೊಲೀಸರ ಕಾರ್ಯ ಕ್ಷಮತೆಗೆ ಕುಸಿಯಲು ಸಂಖ್ಯಾಬಲ ಕೊರತೆ ಹಾಗೂ ಜನರ ಸ್ಪಂದನೆ ಕಾರಣವಾಗಿದೆ ಎಂದು ನಿವೃತ್ತ ಡಿ.ಜಿ.ಪಿ ಎ. ಕೆ. ಸಿಂಗ್ ಹೇಳಿದರು.

ನಗರದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ರಂಗಾಯಣದಲ್ಲಿ ಯೋಗಕ್ಷೇಮದ ವತಿಯಿಂದ ಹಮ್ಮಿಕೊಂಡಿದ್ದ ಪೋಲೀಸ್‌ ಕಾನೂನು ಮತ್ತು ಜನತೆ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಪೊಲೀಸರ ದಕ್ಷತೆ ಹೆಚ್ಚಲು ಸಂಖ್ಯಾಬಲ ಹೆಚ್ಚಾಗಬೇಕಾಗಿದೆ ಎಂದರು.

‘ಜನಸಂಖ್ಯೆ ಆಧಾರದ ಮೇಲೆ ಪೊಲೀಸರ ನೇಮಕಾತಿ ಹಾಗೂ ಹೊಸ ನಿಯುಕ್ತಿ ನಡೆಯಬೇಕಿದೆ. ಬಡ್ತಿಯನ್ನು ನೀಡುವ ಮೂಲಕ ಸ್ಪೂರ್ತಿ ತುಂಬಬೇಕು’ ಎಂದು ಸಲಹೆ ನೀಡಿದರು.

ಜನರ ನಡುವೆ ಅನ್ಯೋನ್ಯ ಸಂಬಂಧಕ್ಕೆ ಸರ್ಕಾರವು ಸ್ಪಂದಿಸಬೇಕು. ಭ್ರಷ್ಟಾಚಾರ ತಡೆಗೆ ಪೊಲೀಸರ ಜೊತೆ ಸರ್ಕಾರ ಹಾಗೂ ಜನಸಮುದಾಯ ಸಾಥ್‌ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.

ಕಾನೂನು ಜಾರಿ ಮಾಡುವ ಸಂದರ್ಭದಲ್ಲಿ ಜನರಲ್ಲಿ ಅರಿವು ಮೂಡಿಸಬೇಕು. ಜಾರಿಯಾದರೆ ಯಾವ ರೀತಿ ಸ್ಪಂದನೆ ದೊರೆಯುವುದು ಎಂಬುದನ್ನು ಅರಿತು ಜಾರಿ ಮಾಡಿದರೆ ಒಳಿತಾಗುತ್ತದೆ ಇಲ್ಲದಿದ್ದರೆ ವೃಥಾ ಶ್ರಮ ವ್ಯರ್ಥವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿ, ಕಾನೂನು ಅರಿವು ಸಮಾಜದಲ್ಲಿ ಅತ್ಯವಶ್ಯಕವಾಗಿದೆ. ಪೊಲೀಸ್ ಮತ್ತು ಕಾನೂನು ಜೊತೆಗೆ ಜನತೆಯೊಂದಿಗೆ ಇಂತಹ ಚಿಂತನ- ಮಂಥನ ಕಾರ್ಯಕ್ರಮ ನಡೆಸುವುದರಿಂದ ಇಲಾಖೆಗೂ ಗೌರವ ಸಿಗುತ್ತದೆ ಎಂದರು.

ನಿವೃತ್ತ ನ್ಯಾಯಾಧೀಶ ಜಿ.ಸಿ.ತಲ್ಲೂರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್.ವಿಠ್ಠಲ್‌ಕೋಡ, ಡಾ.ಎಸ್.ಆರ್.ಪರಮೇಶ್ವರ, ಡಾ. ಪ್ರಕಾಶ ಭಟ್, ಎಂ.ವಿ.ವಡ್ಡಿನ, ಶಿವುಶಂಕರ್ ಹಿರೇಮಠ, ಬಸವರಾಜ ವಿಭೂತಿ ಉಪಸ್ಥಿತರಿದ್ದರು. ಸಂಚಾಲಕ ಮನೋಜ ಪಾಟೀಲ ನಿರೂಪಿಸಿದರು, ಮೋಹನ ರಾಮದುರ್ಗ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.