ADVERTISEMENT

ಎಂ.ಎಸ್.ಎಸ್ ತಂಡ ಚಾಂಪಿಯನ್

ಕೆ.ಎಲ್‌.ಇ ಟ್ವೆಂಟಿ–20 ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 5:31 IST
Last Updated 21 ಫೆಬ್ರುವರಿ 2017, 5:31 IST
ಎಂ.ಎಸ್.ಎಸ್ ತಂಡ ಚಾಂಪಿಯನ್
ಎಂ.ಎಸ್.ಎಸ್ ತಂಡ ಚಾಂಪಿಯನ್   
ಹುಬ್ಬಳ್ಳಿ: ಎದುರಾಳಿ ತಂಡದ ಕಿರಣ ಎಸ್ ಅವರ ಆಲ್‌ರೌಂಡ್ ಆಟ ವ್ಯರ್ಥವಾಯಿತು. ಕುತೂಹಲಕಾರಿ ಅಂತ್ಯ ಕಂಡ ಫೈನಲ್ ಪಂದ್ಯದಲ್ಲಿ ಸ್ಥಳೀಯರನ್ನು ಮಣಿಸಿದ ಬೆಳಗಾವಿಯ ಡಾ.ಎಂ. ಎಸ್.ಎಸ್ ಎಂಜಿನಿಯರಿಂಗ್ ಕಾಲೇಜು ತಂಡದವರು ಕೆ.ಎಲ್‌.ಇ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಆಗಿ ಮೆರೆದರು.
 
ಬೌಲರ್‌ಗಳು ಮೆರೆದಾಡಿದ ಅಂತಿಮ ಕದನದಲ್ಲಿ ಸ್ಥಳೀಯ ಬಿ.ವಿ.ಬಿ ಸಿಇಟಿ ಕಾಲೇಜು ತಂಡವನ್ನು ಎಂ.ಎಸ್‌. ಎಸ್‌ ತಂಡದವರು ‘ಪ್ರಯಾಸದಿಂದ’ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
 
ಇಲ್ಲಿನ ಬಿ.ವಿ.ಬಿ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರಾಕೇಶ, ಸತ್ಯಂ ಮತ್ತು ಯಶ್ ಪಾಟೀಲ ಅವರ ಅಮೋಘ ಬೌಲಿಂಗ್ ಎಂ.ಎಸ್.ಎಸ್ ತಂಡಕ್ಕೆ ಮೂರು ವಿಕೆಟ್‌ ಜಯ ತಂದುಕೊಟ್ಟಿತು. 
 
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಿ.ವಿ.ಬಿ ಕಾಲೇಜು ತಂಡ ಸ್ಥಳೀಯ ಪ್ರೇಕ್ಷಕರು ಮತ್ತು ಸಹಪಾಠಿಗಳ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ವಿಫಲವಾಯಿತು. ಕಿರಣ ಎಸ್ ಅವರ ಅರ್ಧ ಶತಕದ (50; 42 ಎಸೆತ, 4 ಬೌಂಡರಿ) ಬಲ ಇದ್ದರೂ ತಂಡ ಗಳಿಸಿದ್ದು ಕೇವಲ 120 ರನ್ ಮಾತ್ರ. ಪರಿಣಾಮಕಾರಿ ಬೌಲಿಂಗ್ ಮಾಡಿದ ರಾಕೇಶ, ಸತ್ಯಂ ಮತ್ತು ಯಶ್‌ ಪಾಟೀಲ ಒಟ್ಟು ಏಳು ವಿಕೆಟ್‌ ಹಂಚಿಕೊಂಡರು. 
 
ಗುರಿ ಸುಲಭವಾಗಿತ್ತು. ಆದರೆ ಎಂ.ಎಸ್.ಎಸ್ ತಂಡಕ್ಕೆ ಗೆಲುವು ಸುಲಭವಾಗಿ ದಕ್ಕಲಿಲ್ಲ. ತಲಾ ಎರಡು ವಿಕೆಟ್ ಕಬಳಿಸಿದ ಕಿರಣ ಎಸ್‌, ಸುಮಂತ್ ಮತ್ತು ಅಖೀಬ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಅಂತಿಮ ಓವರ್‌ಗಳಲ್ಲಿ ಸೂರಜ್ ಸನದಿ ತಾಳ್ಮೆ ಕಳೆದುಕೊಳ್ಳದೆ ಕ್ರೀಸ್‌ನಲ್ಲಿ ತಳವೂರಿ ತಂಡವನ್ನು ಕಾಪಾಡಿದರು. ಅಂತಿಮ ಓವರ್‌ನ ನಾಲ್ಕನೇ ಎಸೆತ ಬೌಂಡರಿ ಗೆರೆ ದಾಟುತ್ತಿದ್ದಂತೆ ತಂಡದ ಆಟಗಾರರು ಕೇಕೆ ಹಾಕಿದರು.
 
ಸಂಕ್ಷಿಪ್ತ ಸ್ಕೋರ್‌
ಬಿ.ವಿ.ಬಿ ಸಿಇಟಿ ಹುಬ್ಬಳ್ಳಿ: 19.6 ಓವರ್‌ಗಳಲ್ಲಿ 120ಕ್ಕೆ ಆಲೌಟ್‌ (ಕಿರಣ ಎಸ್ 50; ರಾಕೇಶ ಪಾಟೀಲ 26ಕ್ಕೆ3, ಸತ್ಯಂ 18ಕ್ಕೆ2, ಯಶ್ ಪಾಟೀಲ 22ಕ್ಕೆ2)
ಡಾ.ಎಂ.ಎಸ್.ಎಸ್‌ ಕಾಲೇಜು ಬೆಳಗಾವಿ: 19.4 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 123 (ರುದ್ರಗೌಡ ಪಾಟೀಲ 33, ಸೂರಜ್ ಸನದಿ ಔಟಾಗದೆ 27, ಸಂದೇಶ ಪುರಿ 27; ಕಿರಣ ಎಸ್ 14ಕ್ಕೆ2, ಸುಮಂತ್ 14ಕ್ಕೆ2, ಅಖೀಬ್ ಎಸ್‌ 28ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.