ADVERTISEMENT

ಎಪಿಎಂಸಿ ವರ್ತಕರಿಂದ ರೈತರಿಗೆ ವಂಚನೆ!

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 6:45 IST
Last Updated 11 ಜನವರಿ 2017, 6:45 IST

ಹುಬ್ಬಳ್ಳಿ: ಇಲ್ಲಿನ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ಒಣಮೆಣಸಿನಕಾಯಿ ಖರೀದಿ ಸಂದರ್ಭದಲ್ಲಿ ವರ್ತಕರು ತೂಕ ಮತ್ತು ಬೆಲೆಯಲ್ಲಿ ಮೋಸ ಮಾಡಿದ್ದಾರೆ ಹಾಗೂ ರೈತರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಅಣ್ಣಿಗೇರಿ ಮತ್ತು ತಿರ್ಲಾಪುರದ ರೈತರು ಪ್ರತಿಭಟಿಸಿದರು.

ಇಲ್ಲಿನ ಬಸವೇಶ್ವರ ಟ್ರೇಡಿಂಗ್‌ನಲ್ಲಿ ರೈತರ ಒಣಮೆಣಸಿನಕಾಯಿಗೆ ಆನ್‌ಲೈನ್‌ನಲ್ಲಿ ನಮೂದಿಸಿದ ಬೆಲೆಗೂ ಚೀಲದ ಮೇಲೆ ನಮೂದಿಸಿದ ಬೆಲೆಗೂ ಕ್ವಿಂಟಲ್‌ ಮೇಲೆ ₹ 3 ರಿಂದ ₹ 4 ಸಾವಿರ ಕಡಿಮೆಯಾಗಿದೆ. ತೂಕದಲ್ಲಿ ಹತ್ತಾರು ಕೆ.ಜಿ ಕಡಿತ ಮಾಡಲಾಗಿದೆ ಎಂದು ಆರೋಪಿಸಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ವರ್ತಕರ ವಂಚನೆಯನ್ನು ಪ್ರಶ್ನಿಸಿದ್ದಕ್ಕೆ ರೈತರೊಬ್ಬರಿಗೆ ವರ್ತಕರು ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರೈತರಿಗೆ ಮೋಸ ಮಾಡಿರುವ ವರ್ತಕರ ಲೈಸನ್ಸ್‌ ರದ್ದುಗೊಳಿಸಬೇಕು, ಆನ್‌ಲೈನ್‌ನಲ್ಲಿ ನಮೂದಿಸಿದ ಬೆಲೆಯನ್ನೇ ರೈತರಿಗೆ ನೀಡಬೇಕು, ತೂಕದಲ್ಲಿ ಕಡಿತ ಮಾಡಬಾರದು’ ಎಂದು ರೈತ ಮುಖಂಡರಾದ ಅಣ್ಣಿ­ಗೇರಿಯ ಶಿವಯೋಗಪ್ಪ ಸುರಕೋಡ, ಹೇಮಣ್ಣ ದ್ಯಾವನೂರು, ಬಸವರಾಜ ಲಕ್ಕಣ್ಣವರ ಮತ್ತಿತರ ರೈತರು ಆಗ್ರಹಿಸಿದರು.
ಸಂಧಾನ: ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಕಾರ್ಯದರ್ಶಿ ಎಚ್‌.ಸಿ.ಗಜೇಂದ್ರ ಮತ್ತು ಜೆಡಿಎಸ್‌ ಮುಖಂಡ ರಾಜಣ್ಣ ಕೊರವಿ ಸಮ್ಮುಖದಲ್ಲಿ ರೈತರು ಮತ್ತು ವರ್ತಕರ ಸಂದಾನ ಸಭೆ ನಡೆಯಿತು.

ತೂಕ ಮತ್ತು ಬೆಲೆಯಲ್ಲಿ ವ್ಯತ್ಯಾಸವಾಗಿರುವುದನ್ನು ಒಪ್ಪಿಕೊಂಡ ವರ್ತಕರು, ರೈತರ ಕ್ಷಮೆಯಾಚಿಸಿದರು. ‘ಕಣ್ತಪ್ಪಿನಿಂದಾಗಿ ತೂಕ, ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಉದ್ದೇಶಪೂರ್ವಕ­ವಾಗಿ ನಡೆದಿಲ್ಲ. ಇನ್ನು ಮುಂದೆ ಹಾಗಾ­ಗ­ದಂತೆ ಎಚ್ಚರ ವಹಿಸಲಾಗು­ವುದು’ ಎಂದು ವರ್ತಕರ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ತಿಳಿಸಿದರು.

‘ಆನ್‌ಲೈನ್‌ನಲ್ಲಿ ನಮೂದಿಸಿದ ಬೆಲೆಯನ್ನೇ ರೈತರಿಗೆ ನೀಡಲಾಗುವುದು, ತೂಕದಲ್ಲಿ ಆಗಿರುವ ವ್ಯತ್ಯಾಸವನ್ನು ಸರಿಪಡಿಸಲಾಗುವುದು’ ಎಂದು ಅವರು ಹೇಳಿದರು.
ಆದರೆ, ಇದಕ್ಕೆ ಒಪ್ಪದ ರೈತರು, ಎಪಿಎಂಸಿಯಲ್ಲಿ ಮೂರು ತಿಂಗಳಿಂದ ಒಣಮೆಣಸಿನಕಾಯಿ ವ್ಯಾಪಾರ ನಡೆ­ಯು­ತ್ತಿದೆ. ಇದೇ ರೀತಿ ಬಹಳಷ್ಟು ರೈತ­ರಿಗೆ ಮೋಸವಾಗಿದೆ. ಕಾರಣ ಸಂಬಂ­ಧ­ಪಟ್ಟ ವರ್ತಕರ ಲೈಸನ್‌್ ರದ್ದು­ಗೊ­ಳಿ­ಸ­ಬೇಕು ಎಂದು ರೈತರು ಪಟ್ಟು ಹಿಡಿದರು.

‘ವರ್ತಕರ ವಿರುದ್ಧ ಆಧಾರ ಸಹಿತ ದೂರು ನೀಡಿದರೆ ಪರಿಶೀಲಿಸಿ ಸೂಕ್ತಕ್ರಮಕೈಗೊಳ್ಳಲಾಗುವುದು’ ಎಂದು ಎಪಿಎಂಸಿ ಕಾರ್ಯದರ್ಶಿ ಎಚ್‌.ಸಿ.ಗಜೇಂದ್ರ ರೈತರಿಗೆ ತಿಳಿಸಿದರು.

‘ರೈತರಿಲ್ಲದೇ ವರ್ತಕರಿಲ್ಲ, ವರ್ತಕ­ರಿ­ಲ್ಲದೇ ರೈತರಿಲ್ಲ. ಇಬ್ಬರಿಗೂ ತೊಂದರೆ­ಯಾಗಬಾರದು’ ಎಂದು ರಾಜಣ್ಣ ಕೊರವಿ ರೈತರ ಮನವೊಲಿಸಿದರು.
ವರ್ತಕರ ವಿರುದ್ಧ ರೈತರು ದೂರು ದಾಖಲಿಸದಂತೆ ನೋಡಿ­ಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.