ADVERTISEMENT

ಒತ್ತುವರಿ: ದಕ್ಷ ಸರ್ವೆಯರ್‌ ನೇಮಿಸಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:49 IST
Last Updated 13 ಮಾರ್ಚ್ 2017, 6:49 IST

ಹುಬ್ಬಳ್ಳಿ: ‘ಚಿಕ್ಕಮಗಳೂರು ಜಿಲ್ಲೆ ಮೂಡಿ­­ಗೆರೆ ತಾಲ್ಲಕಿನ ಕುಂದೂರು ಬೆನಕಲ್ ಹೋಬಳಿಯ ಸರ್ವೆ ನಂಬರ್‌ 156ರಲ್ಲಿ ವಿಧಾನಪರಿಷತ್‌ ಸದಸ್ಯೆ ಮೋಟಮ್ಮ ಹಾಗೂ ಅವರ ಮಕ್ಕಳು ಸೇರಿದಂತೆ ಹಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ 20 ಎಕರೆ ಕಂದಾಯ ಹಾಗೂ ಅರಣ್ಯ ಭೂಮಿ­ಯನ್ನು ಮರು ವಶಕ್ಕೆ ಪಡೆಯುವ ನಿಟ್ಟಿ­ನಲ್ಲಿ ಸರ್ಕಾರ ಕೂಡಲೇ ಪ್ರಕ್ರಿಯೆ ಆರಂಭಿ­ಸಬೇಕು’ ಎಂದು ಸಮಾಜ ಪರಿ­ವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಒತ್ತಾಯಿಸಿದರು.

‘ಚಿಕ್ಕಮಗಳೂರು ಜಿಲ್ಲೆಯ ಸರ್ವೆಯರ್‌ಗಳ ಮೇಲೆ ಮೋಟಮ್ಮ ಅವರು ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಬೇರೆ ಜಿಲ್ಲೆಗಳ ದಕ್ಷ ಅಧಿಕಾರಿಗಳನ್ನು ಒತ್ತುವರಿಯಾದ ಜಮೀ­­ನನ್ನು ಅಳತೆ ಮಾಡಲು ನಿಯೋ­ಜಿಸಿ ಒಂದಿಂಚು ಭೂಮಿಯನ್ನೂ ಬಿಡದೇ ಸರ್ಕಾರ ತನ್ನ ವಶಕ್ಕೆ ಪಡೆ­ಯ­ಬೇಕು’ ಎಂದು ಭಾನುವಾರ  ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಫಿಲೊಮಿನಾ ಪೆರಿಸ್‌ ಹಾಗೂ ಅವರ ಮಕ್ಕಳು ಒತ್ತುವರಿ ಮಾಡಿಕೊಂಡ ಭೂಮಿ 100 ಎಕರೆಗೂ ಅಧಿಕವಿದ್ದು, ಸರ್ಕಾರ ಈ ಹಂತದಲ್ಲಿ ಕಣ್ಣು ಮುಚ್ಚಿಕೊಳ್ಳದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

‘ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಮೂಡಿಗೆರೆ ತಹ­ಶೀಲ್ದಾರ್‌ ಅವರನ್ನು ಮೋಟಮ್ಮ ಅವ­ರ ಪ್ರಭಾ­ವ ವನ್ನೂ ಲೆಕ್ಕಿಸದೇ ಅಲ್ಲಿಯೇ ಮುಂದು­ವರಿಸಿ­ರು­ವುದು ಶ್ಲಾಘ­ನೀಯ’ ಎಂದು ಹಿರೇಮಠ ಹೇಳಿ­ದರು. ಗದಗ ಜಿಲ್ಲೆಯ ಕಪ್ಪತ­ಗುಡ್ಡದಲ್ಲಿ ಅಕ್ರಮ ಗಣಿ­ಗಾರಿಕೆ ನಡೆ ಸಲು ಬಲ್ದೋಡಾ ಕಂಪೆನಿ­ಯು ಹಿಂಬಾಗಿಲ ಮೂಲಕ ಪ್ರಯತ್ನ ಮುಂದುವರೆಸಿದ್ದು, ಸ್ಥಳೀಯರನ್ನು ಮುಂದೆ ಮಾಡಿದೆ. ಗುಡ್ಡವನ್ನು ಸಂರಕ್ಷಿತ ಅರಣ್ಯ ಸ್ಥಾನ ಮಾನದಿಂದ ಕೈಬಿಡಬೇಕು ಎಂದು ಕೆಲ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಸಲ್ಲಿ­ಸಿದ್ದಾರೆ. ನಿಜವಾಗಿಯೂ ಅವರ ಉದ್ದೇಶ ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳುವು­ದಾಗಿ­ದ್ದರೆ ಬಲ್ದೋಟಾ ಕಂಪೆನಿಯ ಪ್ರತಿನಿಧಿ ಜೊತೆ ಏಕೆ ಬರಬೇಕಿತ್ತು ಎಂದು ಪ್ರಶ್ನಿಸಿದರು.

ಮುಸ್ಲಿಮರಿಗೆ ಟಿಕೆಟ್ ನೀಡದಿ­ರುವುದು ಸರಿಯಲ್ಲ: ಉತ್ತರ ಪ್ರದೇಶ­ದಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವುದು ನಿಶ್ಚಿತವಾಗಿದೆ. ಆದರೆ, ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದಿ­ರುವುದು ಆ ಪಕ್ಷದ ಧೋರಣೆ ಪ್ರಜಾ­ಪ್ರಭುತ್ವಕ್ಕೆ ಅಪಾಯಕಾರಿ­ಯಾದುದು. ಕೋಮು ಆಧಾರದ ರಾಜಕೀಯ ಧ್ರುವೀಕರಣ ಅಪಾಯಕಾರಿ ಎಂದರು.

ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡ ಬಿಜೆಪಿ ಇಷ್ಟು ಸೀಟು ಪಡೆದಿದೆ ಎಂಬ ಬಿಎಸ್ಪಿ ಅಧಿನಾಯಕಿ ಮಾಯಾವತಿ ಅವರ ಟೀಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹಿರೇಮಠ, ‘ಚುನಾವಣೆ­ಯಲ್ಲಿ ಸೋತಾಗ ಹಾಗೆ ಅನಿಸುವುದು ಸಹಜ. ಆದರೆ, ಇದರ ಕುರಿತು ಏನನ್ನೂ ಮಾತನಾಡಲಾರೆ’ ಎಂದರು. ಎಸ್‌ಪಿಎಸ್‌ ಸದಸ್ಯ ಐ.ಜಿ. ಪುಲ್ಲಿ ಇದ್ದರು.

**

‘ಸರಿಯಾದ ದಿಕ್ಕಿನಲ್ಲಿ ವಿಚಾರಣೆ’

ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ ಹಾಗೂ ಭ್ರಷ್ಟಾಚಾರದ ಕಳಂಕ ಅಂಟಿಕೊಳ್ಳುವಂತೆ ಮಾಡಿದ ಮಾಜಿ ಲೋಕಾಯುಕ್ತ ಭಾಸ್ಕರರಾವ್‌ ವಿರುದ್ಧದ ವಿಚಾರಣೆಗೆ ಸರಿಯಾದ ದಿಕ್ಕಿನತ್ತ ನಡೆದಿದ್ದು, ವಿಚಾರಣೆಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸುವ ಮೂಲಕ ನ್ಯಾಯಪೀಠ ತಪ್ಪಿತಸ್ಥರಿಗೆ ಕಠಿಣ ಸಂದೇಶ ರವಾನಿಸಿದೆ ಎಂದು ಎಸ್‌. ಆರ್‌. ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.