ADVERTISEMENT

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ತನ್ನಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2017, 6:38 IST
Last Updated 2 ಆಗಸ್ಟ್ 2017, 6:38 IST
ಹುಬ್ಬಳ್ಳಿಯ ಅಂಜುಮನ್ ಹಾಲ್‌ನಲ್ಲಿ ಮಂಗಳವಾರ ನಡೆದ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬ್ಲಾಕ್ ಸಮಿತಿಯ ಬೂತ್ ಮಟ್ಟದ ಕಾಂಗ್ರೆಸ್ ಸದಸ್ಯರ ಸಮಾವೇಶದಲ್ಲಿ ಪಕ್ಷದ ಸಾಧನೆ ಕುರಿತು ಪುಸ್ತಕಗಳನ್ನು ಎಐಸಿಸಿ ಕಾರ್ಯದರ್ಶಿ ಮಾಣಿಕಂ ಠಾಕೂರ್ ಬಿಡುಗಡೆ ಮಾಡಿದರು. ಕೆಪಿಸಿಸಿ ಉಪಾಧ್ಯಕ್ಷರಾದ ವೀರಣ್ಣ ಮತ್ತಿಕಟ್ಟಿ, ಎ.ಎಂ. ಹಿಂಡಸಗೇರಿ, ಪಕ್ಷದ ಮುಖಂಡ ವೀರಕುಮಾರ್ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್. ಪಾಟೀಲ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಇದ್ದಾರೆ
ಹುಬ್ಬಳ್ಳಿಯ ಅಂಜುಮನ್ ಹಾಲ್‌ನಲ್ಲಿ ಮಂಗಳವಾರ ನಡೆದ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬ್ಲಾಕ್ ಸಮಿತಿಯ ಬೂತ್ ಮಟ್ಟದ ಕಾಂಗ್ರೆಸ್ ಸದಸ್ಯರ ಸಮಾವೇಶದಲ್ಲಿ ಪಕ್ಷದ ಸಾಧನೆ ಕುರಿತು ಪುಸ್ತಕಗಳನ್ನು ಎಐಸಿಸಿ ಕಾರ್ಯದರ್ಶಿ ಮಾಣಿಕಂ ಠಾಕೂರ್ ಬಿಡುಗಡೆ ಮಾಡಿದರು. ಕೆಪಿಸಿಸಿ ಉಪಾಧ್ಯಕ್ಷರಾದ ವೀರಣ್ಣ ಮತ್ತಿಕಟ್ಟಿ, ಎ.ಎಂ. ಹಿಂಡಸಗೇರಿ, ಪಕ್ಷದ ಮುಖಂಡ ವೀರಕುಮಾರ್ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್. ಪಾಟೀಲ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಇದ್ದಾರೆ   

ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಲ್ಲ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಸಾಧನೆಯಲ್ಲಿ ಯಾವ ರಾಜ್ಯಕ್ಕೂ ಕಡಿಮೆ ಇಲ್ಲ. ಸಾಧನೆಗಳನ್ನು ಮನೆ, ಮನೆಗೆ ತಲುಪಿಸಬೇಕು. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಎಐಸಿಸಿ ಕಾರ್ಯದರ್ಶಿ ಮಾಣಿಕಂ ಠಾಕೂರ್  ಹೇಳಿದರು.

ಹುಬ್ಬಳ್ಳಿಯ ಅಂಜುಮನ್ ಹಾಲ್‌ನಲ್ಲಿ ಮಂಗಳವಾರ ನಡೆದ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬ್ಲಾಕ್ ಸಮಿತಿಯ ಬೂತ್ ಮಟ್ಟದ ಕಾಂಗ್ರೆಸ್ ಸದಸ್ಯರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬೂತ್‌ ಮಟ್ಟದ ಅಧ್ಯಕ್ಷರು ಮತ್ತು ಸದಸ್ಯರು ಮನಸು ಮಾಡಿದರೆ ಜಗದೀಶ ಶೆಟ್ಟರ್, ಯಡಿಯೂರಪ್ಪ ಅವರಂತಹ ನಾಯಕರನ್ನು ಸೋಲಿಸುವುದು ಕಷ್ಟವೇನಲ್ಲ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ‘ಕಾಂಗ್ರೆಸ್‌ ಪಕ್ಷದಲ್ಲಿ ಭಾಷಣಕಾರರ ಕೊರತೆ ಇದೆ. ಇಲ್ಲಿ ಕೆಲಸ ಮಾಡುವವರೇ ಹೆಚ್ಚು. ಅದೇ ಬಿಜೆಪಿಯಲ್ಲಿ ಕೆಲಸ ಮಾಡುವವರು ಸಿಗುವುದಿಲ್ಲ. ಆದರೆ, ಮೀಸೆ ಚಿಗುರದವರು ಕೂಡ ಸುಳ್ಳುಗಳನ್ನು ಪೋಣಿಸಿ ಒಳ್ಳೆಯ ಭಾಷಣ ಮಾಡಬಲ್ಲರು. ಯಾರದ್ದೊ ಸಾಧನೆಗಳನ್ನು ತಮ್ಮದೆಂದು ಬಿಂಬಿಸಿಕೊಂಡು ಪ್ರಚಾರ ಪಡೆಯಬಲ್ಲರು’ ಎಂದರು.

ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್. ಪಾಟೀಲ, ‘ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದಾಗಿನಿಂದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದು ಕಾಂಗ್ರೆಸ್. ಎಲ್ಲ ಸಾಧನೆ ನಮ್ಮದೇ ಎನ್ನುವಂತೆ ಬಿಜೆಪಿಯವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಭಿಮಾನದ ಬದುಕಿಗೆ ಬೇಕಾದ ಯೋಜನೆಗಳನ್ನು ಜಾರಿಗೆ ತಂದು, ಎಲ್ಲ ವರ್ಗದವರ ಅಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ’ ಎಂದು ಹೊಗಳಿದರು.

ಕೆಪಿಸಿಸಿ ಉಪಾಧ್ಯಕ್ಷರಾದ ವೀರಣ್ಣ ಮತ್ತಿಕಟ್ಟಿ, ಎ.ಎಂ. ಹಿಂಡಸಗೇರಿ, ಪಕ್ಷದ ಮುಖಂಡ ವೀರಕುಮಾರ ಪಾಟೀಲ ಮಾತನಾಡಿದರು. ಇದೇ ವೇಳೆ ಬಿಜೆಪಿ ಮುಖಂಡ ಹನುಮಂತಪ್ಪ ಬಂಕಾಪುರ ಕಾಂಗ್ರೆಸ್ ಸೇರಿದರು. ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ನಮನ ಸಲ್ಲಿಸಲಾಯಿತು. 

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತಾ ಆಳ್ವ, ಕಾರ್ಯದರ್ಶಿ ಚಾಂದ್ ಪಾಷಾ, ಮಾಜಿ ಸಂಸದ ಐ.ಜಿ. ಸನದಿ, ಶಾಸಕ ಸಿ.ಎಸ್. ಶಿವಳ್ಳಿ, ವಾ.ಕ.ರ.ಸಾ.ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಉಪಸ್ಥಿತರಿದ್ದರು.

ಬೂತ್ ಅಧ್ಯಕ್ಷರ ಹಾಜರಿ ಪರಿಶೀಲಿಸಿದ ಠಾಕೂರ್: ಎಐಸಿಸಿ ಕಾರ್ಯದರ್ಶಿ ಮಾಣಿಕಂ ಠಾಕೂರ್ ತಮ್ಮ ಭಾಷಣ ಮುಗಿಸುವಾಗ, ತಮ್ಮ ಎದುರಿಗಿದ್ದ ಬೂತ್ ಮಟ್ಟದ ಅಧ್ಯಕ್ಷರ ಪಟ್ಟಿಯನ್ನು ಕೈಗೆತ್ತಿಕೊಂಡು ಮೈಕ್‌ನಲ್ಲೇ ಹಾಜರಿ ಪಡೆದರು.

‘ನಾನು ಹೆಸರು ಹೇಳಿದ ಬೂತ್‌ ಅಧ್ಯಕ್ಷರು ಎದ್ದು ನಿಂತು ಕೈ ಮೇಲಕ್ಕೆ ಎತ್ತಿ ತಮ್ಮ ಹಾಜರಿಯನ್ನು ಸೂಚಿಸಬೇಕು’ ಎಂದು ಹದಿನೈದು ಮಂದಿಯ ಹೆಸರನ್ನು ಕೂಗಿ ಸಮಾವೇಶಕ್ಕೆ ಬಂದಿದ್ದಾರೆಯೇ ಎಂದು ಪರಿಶೀಲಿಸಿದರು.

‘ನಾಯಕರು ಮೊದಲು ಕುತಂತ್ರ ಬುದ್ಧಿ ಬಿಡಬೇಕು’
ಹುಬ್ಬಳ್ಳಿ: ‘ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಮತದಾರರು ಎಂದಿಗೂ ಮೋಸ ಮಾಡುವುದಿಲ್ಲ. ಬದಲಿಗೆ, ನಮ್ಮೊಂದಿಗೆ ವೇದಿಕೆ ಅಲಂಕರಿಸುವ ನಾಯಕರೇ ಬೆನ್ನ ಹಿಂದೆ ಸಂಚು ಮಾಡಿ ಸೋಲಿಸುತ್ತಾರೆ. ನಾಯಕರಾದವರು ಇಂತಹ ಕುತಂತ್ರ ಬುದ್ಧಿ     ಬಿಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಪಕ್ಷಕ್ಕೆ ದ್ರೋಹ ಮಾಡಿದರೆ, ಹೆತ್ತ ತಾಯಿಗೆ ದ್ರೋಹ ಬಗೆದಂತೆ’ ಎಂದರು.

‘ರಾಜ್ಯದಲ್ಲಿ ಪಕ್ಷ ಅತ್ಯಂತ ಬಲಿಷ್ಠವಾಗಿದೆ. ಆದರೆ, ಕೆಲ ನಾಯಕರ ಕುತಂತ್ರಗಳಿಂದಾಗಿ ಪಕ್ಷಕ್ಕೆ ಹಿನ್ನಡೆಯುಂಟಾಗುತ್ತಿದೆ. ಇಂಥ ಕುತಂತ್ರಗಳಿಂದಾಗಿಯೇ ನಾನು ಎದುರಿಸಿದ ಐದು ಚುನಾವಣೆಗಳ ಪೈಕಿ, ಮೂರರಲ್ಲಿ ಸೋಲಬೇಕಾಯಿತು. ಪಕ್ಷದೊಳಗಿದ್ದುಕೊಂಡೇ ವಿರೋಧಿ ಚಟುವಟಿಕೆ ನಡೆಸುವವರಿಗೆ ಮೊದಲು ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.