ADVERTISEMENT

ಕುಡಿಯುವ ನೀರಿಗಾಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 9:51 IST
Last Updated 12 ಡಿಸೆಂಬರ್ 2017, 9:51 IST

ಧಾರವಾಡ: ಜಲಮಂಡಳಿ ನಿರ್ಲಕ್ಷ್ಯ ಧೋರಣೆ ಮತ್ತು ಒಂದೇ ಕಾಮಗಾರಿಯನ್ನು ಪದೇ, ಪದೇ ಕೈಗೆತ್ತಿಕೊಳ್ಳುವ ಪಾಲಿಕೆ ಕ್ರಮದಿಂದಾಗಿ ನಗರದ ವಾರ್ಡ್ ನಂ. 9 ರ ವ್ಯಾಪ್ತಿಯ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

ಕುಡಿಯುವ ನೀರು ಪೂರೈಸುವ ಪೈಪ್‌ ಲೈನ್ ದುರಸ್ತಿ ಮಾಡಲಾಗುತ್ತಿದೆ. ಹೀಗಾಗಿ ಹೆಬ್ಬಳ್ಳಿ ಅಗಸಿಯ ಕೆಲ ಭಾಗ, ಜೈ ಜೀನೇಂದ್ರ ಕಾಲೊನಿ, ರಾಮ ರಹೀಮ್ ಕಾಲೊನಿ, ಚರಂತಿಮಠ ಉದ್ಯಾನ ಹಾಗೂ ಹಶ್ಮಿ ಬಡಾವಣೆ ಜನತೆ ಕಳೆದ ಐದು ದಿನಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

‘ಹೆಬ್ಬಳ್ಳಿ ಅಗಸಿಯಿಂದ ಕೋಳಿಕೆರಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಕಾಮಗಾರಿ 15 ದಿನಗಳ ಹಿಂದೆ ಪೂರ್ಣಗೊಂಡಿತ್ತು. ಈಗ ನಿರಂತರ ನೀರು ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ 15ಕ್ಕೂ ಅಧಿಕ ಕಡೆಗಳಲ್ಲಿ ತಗ್ಗು ತೋಡಿ ರಸ್ತೆ ಹದಗೆಡಿಸಿದ್ದಾರೆ.

ADVERTISEMENT

ಐದು ದಿನಗಳಿಂದ ಬನಶಂಕರಿ ಭವನದ ಬಳಿ ಒಳಚರಂಡಿ ಮಾಡುತ್ತಿರುವ ಕಾಮಗಾರಿ ಪೂರ್ಣಗೊಳ್ಳದಿರುವುದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇದಕ್ಕೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ಜೈ ಜೀನೇಂದ್ರ ಕಾಲೊನಿ ಹಿತರಕ್ಷಣ ಸಮಿತಿ ಅಧ್ಯಕ್ಷ ಎಚ್.ಎ. ಮುಲ್ಲಾನವರ ಅಸಮಾಧಾನ ವ್ಯಕ್ತಪಡಿಸಿದರು.

‘ಕುಡಿಯುವ ನೀರು ಪೂರೈಕೆಗೆ 4 ಇಂಚಿನ ಪೈಪ್‌ ಲೈನ್ ಹಾಕುವ ಸಂದರ್ಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಜತೆಗೆ ರಸ್ತೆ ನಿರ್ಮಾಣದ ಪೂರ್ವದಲ್ಲಿಯೇ 6 ಇಂಚಿನ ಪೈಪ್‌ ಲೈನ್ ಮೂಲಕ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಸ್ಥಳೀಯರ ಮನವಿ ನಿರ್ಲಕ್ಷಿಸಿದ ಪಾಲಿಕೆ ಅಧಿಕಾರಿಗಳು, 4 ಇಂಚಿನ ಪೈಪ್‌ ಲೈನ್ ಮೂಲಕವೇ ಹೆಚ್ಚಿನ ಪ್ರಮಾಣದಲ್ಲಿ ನೀರು ಸರಬರಾಜಿಗೆ ಮುಂದಾಗಿದೆ. ನೀರಿನ ಒತ್ತಡದಿಂದ ಅಲ್ಲಲ್ಲಿ ಪೈಪ್‌ಗಳು ಒಡೆಯುತ್ತಿದ್ದು, ತಿಂಗಳಲ್ಲಿ  ಎರಡರಿಂದ ಮೂರು ಬಾರಿಯಾದರೂ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ’ ಎಂದರು.

ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಹೆಚ್ಚಿನ ಮುತವರ್ಜಿ ವಹಿಸಿ ಆದಷ್ಟು ಬೇಗ ಕುಡಿಯುವ ನೀರಿನ ಸರಬರಾಜಿಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರಾದ ಮಹಮ್ಮದ್ ಅಲಿ ಗೂಡುಸಾಬ, ಶಿವಾನಂದ ಲೋಲೆಣ್ಣವರ, ರಾಘವೇಂದ್ರ ಸಾವಂತ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.