ADVERTISEMENT

ಕುಡಿವ ನೀರಿನ ಕರ: ₹ 83 ಕೋಟಿ ಬಾಕಿ

ಬಸವರಾಜ ಹವಾಲ್ದಾರ
Published 18 ಮೇ 2017, 6:48 IST
Last Updated 18 ಮೇ 2017, 6:48 IST
ಹುಬ್ಬಳ್ಳಿಯಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಕಟ್ಟಡ
ಹುಬ್ಬಳ್ಳಿಯಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಕಟ್ಟಡ   

ಹುಬ್ಬಳ್ಳಿ: ಮಲಪ್ರಭಾ ಹಾಗೂ ನೀರ ಸಾಗರದಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು ಅವಳಿ ನಗರಕ್ಕೆ ನೀರು ಪೂರೈಸುತ್ತದೆ. ಸರಬರಾಜು ಮಾಡಿದ ನೀರಿಗೆ ಸಾರ್ವಜನಿಕರು ಸರಿಯಾಗಿ ಕರ ಪಾವತಿ ಮಾಡದ್ದರಿಂದ ಮಂಡಳಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಸರಬರಾಜು ಮಾಡಿದ ನೀರಿಗೆ ಸಾರ್ವಜನಿಕರು ಪಾವತಿಸಬೇಕಿರುವ ₹ 83 ಕೋಟಿ  ನೀರಿನ ಕರ ಬಾಕಿ ಉಳಿದಿದೆ. ವರ್ಷದಿಂದ ವರ್ಷಕ್ಕೆ ಬಾಕಿಯ ಪ್ರಮಾಣ ಹೆಚ್ಚುತ್ತಾ ಹೋಗುತ್ತಿದೆ. ವಸೂಲಾತಿ ಅಭಿಯಾನಕ್ಕೆ ಜನರೂ ಸ್ಪಂದಿಸುತ್ತಿಲ್ಲ. ಸಿಬ್ಬಂದಿ ಕೊರತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಬಾಕಿ ವಸೂಲಿ ಮಾಡಲು ಮಂಡಳಿಗೂ ಸಾಧ್ಯವಾಗುತ್ತಿಲ್ಲ. ಮಹಾನಗರ ಪಾಲಿಕೆಯಿಂದ ಮಂಡಳಿಗೆ ನೀರು ಸರಬರಾಜನ್ನು ವಹಿಸಿಕೊಳ್ಳುವಾಗಲೇ ನೀರಿನ ಕರ ಬಾಕಿ ಉಳಿದಿಕೊಂಡಿತ್ತು.  ಅದು ಇಂದಿಗೂ ಮುಂದುವರಿದಿದೆ.

ದಿನದ 24 ಗಂಟೆ ನೀರು ಸರಬರಾಜು ಮಾಡುವ ಪ್ರದೇಶ ಹೊರತು ಪಡಿಸಿದರೆ, ಉಳಿದ ಪ್ರದೇಶಗಳಿಗೆ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಅದಕ್ಕಾಗಿ ಮಲಪ್ರಭಾದಿಂದ 155 ದಶ ಲಕ್ಷ ಲೀಟರ್‌ ನೀರು ಪಡೆಯಲಾಗುತ್ತಿದೆ. ನೀರ ಸಾಗರ ಒಣಗಿರುವುದರಿಂದ ಅಲ್ಲಿಂದ ಸದ್ಯ ನೀರು ಲಭ್ಯವಾಗುತ್ತಿಲ್ಲ.

ADVERTISEMENT

ಅವಳಿ ನಗರದಲ್ಲಿ ಒಟ್ಟು 1.35 ಲಕ್ಷ ನಳಗಳಿಗೆ ಸಂಪರ್ಕ ನೀಡಲಾಗಿದೆ. ಅದರಲ್ಲಿ 85 ಸಾವಿರ ಹುಬ್ಬಳ್ಳಿಯಲ್ಲಿ ಇದ್ದರೆ, 50 ಸಾವಿರ ನಳಗಳ ಸಂಪರ್ಕ ಧಾರವಾಡದಲ್ಲಿವೆ. ಸರಿಯಾಗಿ ನೀರು ಸರಬರಾಜು ಮಾಡಲಾಗದ ಕೆಲವು ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ನೀರು ಸರಬರಾಜು ಮಾಡುವುದರಿಂದ ಪ್ರತಿ ವರ್ಷ ಮಂಡಳಿಗೆ ಕರ ರೂಪದಲ್ಲಿ ₹ 14 ಕೋಟಿ ಸಂಗ್ರಹವಾಗಬೇಕಿದೆ. ಹಿಂದಿನ ವರ್ಷಗಳಲ್ಲಿ ಅಷ್ಟು ವಸೂಲಿ ಆಗಿಲ್ಲ. ಹೀಗಾಗಿ ಬಾಕಿಯ ಮೊತ್ತ ಹೆಚ್ಚಾಗಿದೆ. ಈಗ ಅದಕ್ಕೆ ಬಡ್ಡಿಯೂ ಸೇರಿಕೊಂಡಿದೆ. 2016–17 ಸಾಲಿನಲ್ಲಿ ಹಿಂದಿನ ವರ್ಷದ ಬಾಕಿಯೂ ಸೇರಿ ₹ 20 ಕೋಟಿ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾಯಂ ಸಿಬ್ಬಂದಿಯ ಕೊರತೆಯಿಂದಾಗಿ ಕರ ವಸೂಲಿ ಸಾಧ್ಯವಾಗುತ್ತಿಲ್ಲ. ಗುತ್ತಿಗೆ ನೌಕರರನ್ನು ಬಳಸಿಕೊಂಡೇ ಕರ ವಸೂಲಿ ಮಾಡಲಾಗುತ್ತಿದೆ.

ನೀರು ಸರಬರಾಜು ಮಾಡಲು ಮಂಡಳಿಗೆ ಒಂದು ವರ್ಷಕ್ಕೆ ₹ 18 ಕೋಟಿ ಖರ್ಚಾಗುತ್ತಿದೆ. ಆದರೆ, ಅಷ್ಟು ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ. ಬಾಕಿಯೂ ವಸೂಲಾಗದಿರುವುದು ಕೆಲವು ಹೊಸ ಯೋಜನೆಗಳಿಗೆ ಅಡ್ಡಿಯಾಗಿದೆ.

**
ಬಾಕಿ ಉಳಿದಿರುವ ನೀರಿನ ಕರ ವಸೂಲಾತಿ ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ ವಾರ್ಷಿಕ ಬೇಡಿಕೆಯಲ್ಲದೇ ₹ 6 ಕೋಟಿ ಹೆಚ್ಚು ವಸೂಲು ಮಾಡಲಾಗಿದೆ.
-ಎಸ್‌. ಕರಿಯಪ್ಪ, ಕಾರ್ಯ ನಿರ್ವಾಹಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.