ADVERTISEMENT

ಕೈಕೊಟ್ಟ ಭೂಗತ ಕೇಬಲ್‌; ಪರದಾಟ

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:01 IST
Last Updated 27 ಮೇ 2017, 9:01 IST

ಹುಬ್ಬಳ್ಳಿ: ಇಲ್ಲಿನ ಆನಂದನಗರ ಹಾಗೂ ಅಕ್ಷಯ ಕಾಲೊನಿ ನಡುವಿನ 110 ಕೆ.ವಿ. ಉಪಕೇಂದ್ರದ ಭೂಗತ ಕೇಬಲ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ವಿದ್ಯುತ್‌ ಇಲ್ಲದೇ ನಗರದ ಕೆಲ ಪ್ರದೇಶದ ಜನರು ದಿನಪೂರ್ತಿ ಪರದಾಡಬೇಕಾಯಿತು.

ಆನಂದನಗರ ವ್ಯಾಪ್ತಿಯಲ್ಲಿ ಬೆಳಿಗ್ಗೆ 8.30ಕ್ಕೆ ಸ್ಥಗಿತಗೊಂಡಿದ್ದ ವಿದ್ಯುತ್‌ ಸಂಜೆ 6.30ಕ್ಕೆ ಪೂರೈಕೆಯಾಯಿತು. ಅಕ್ಷಯ ಕಾಲೊನಿ, ವಿದ್ಯಾನಗರ ಮತ್ತು  ಶಿರೂರು ಪಾರ್ಕ್‌ ವ್ಯಾಪ್ತಿಯಲ್ಲಿ ರಾತ್ರಿ 10.15ಕ್ಕೆ ಪೂರೈಕೆಯಾಯಿತು. ಅಲ್ಲಿವರೆಗೂ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.ಹೆಸ್ಕಾಂ ಸಿಬ್ಬಂದಿ ಯುದ್ಧೋಪಾದಿ­ಯಲ್ಲಿ ದಿನಪೂರ್ತಿ ಕಾರ್ಯನಿರ್ವಹಿಸುವ ಮೂಲಕ ತಾತ್ಕಾಲಿಕವಾಗಿ ವಿದ್ಯುತ್‌ ಪೂರೈಕೆ ಮಾಡುವಲ್ಲಿ ಸಫಲರಾದರು.

ಪರದಾಟ: ಬೆಳಿಗ್ಗೆಯಿಂದಲೇ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡ ಕಾರಣ ಈ ಭಾಗದ ಜನಜೀವನ ದಿನಪೂರ್ತಿ ಅಸ್ತವ್ಯಸ್ತವಾಯಿತು. ಕುಡಿಯುವುದಕ್ಕೂ ಸೇರಿದಂತೆ ಅಡುಗೆ ಮಾಡಲೂ ನೀರಿಲ್ಲದೇ ಜನರು ಪರದಾಡಿದರು.ಫ್ಯಾನ್‌, ಫ್ರಿಡ್ಜ್‌ ಕಾರ್ಯ ನಿರ್ವಹಿಸ­ದ್ದ­ರಿಂದ ಜನರು ಮನೆಯೊಳಗೆ ಕುಳಿತುಕೊಳ್ಳಲೂ ಸಾಧ್ಯವಾಗದೇ ಪರಿತಪಿಸಿದರು.
ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳ ಕಚೇರಿಗಳ ದೈನಂದಿನ ಕೆಲಸಕ್ಕೂ ತೊಂದರೆಯಾಯಿತು. ಹೋಟೆಲ್‌, ಅಂಗಡಿಗಳಲ್ಲೂ ವ್ಯಾಪಾರಕ್ಕೆ ಧಕ್ಕೆಯಾಯಿತು.

ADVERTISEMENT

ದುರಸ್ತಿಗೆ ನಾಲ್ಕು ದಿನ: ‘ಭೂಗತ ಕೇಬಲ್‌ ದೋಷ ಪತ್ತೆ ಹಚ್ಚಿ ಸರಿಪಡಿ­ಸಲು ಚನ್ನೈನಿಂದ ತಜ್ಞರು ಬರಬೇಕಾ­ಗಿದೆ. ದುರಸ್ತಿ ಕಾರ್ಯಕ್ಕೆ ಮೂರರಿಂದ ನಾಲ್ಕು ದಿನ ತಗಲುವ ಸಾಧ್ಯತೆ’ ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾತ್ಕಾಲಿಕ ವ್ಯವಸ್ಥೆ: ‘ಭೂಗತ ಕೇಬಲ್‌ ದುರಸ್ತಿಯಾಗುವವರೆಗೆ ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತಾತ್ಕಾಲಿಕವಾಗಿ ನಗರದ ಬೇರೆ ಮಾರ್ಗದಿಂದ ಸಂಪರ್ಕ ಕಲ್ಪಿಸಿ ವಿದ್ಯುತ್‌ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ’ ಎಂದು ಹೆಸ್ಕಾಂ ಹುಬ್ಬಳ್ಳಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಜಗದೀಶ ಬೆಳಗಲಿ ‘ಪ್ರಜಾವಾಣಿ’ಗೆ ಹೇಳಿದರು.

ಸಹಾಯವಾಣಿ ಸ್ಥಗಿತ: ವಿದ್ಯುತ್‌ ಪೂರೈಕೆ ಸ್ಥಗಿತದ ಬಗ್ಗೆ ದೂರು ನೀಡಲು ಹೆಸ್ಕಾಂ ದೂರವಾಣಿಗೆ ಕರೆ ಮಾಡಿದ ಕರೆಗೂ ಸ್ಪಂದಿಸಲಿಲ್ಲ. ಸಹಯವಾಣಿ ದೂರವಾಣಿ ಸಂಖ್ಯೆ ರಿಂಗ್‌ ಆಗುತ್ತಿಲ್ಲ. ಆದರೆ, ಯಾರೂ ಕರೆ ಸ್ವೀಕರಿಸಲಿಲ್ಲ.

‘ದಿನಪೂರ್ತಿ ವಿದ್ಯುತ್‌ ಸ್ಥಗಿತವಾಗಿದ್ದರೂ ಹೆಸ್ಕಾಂ ಸಿಬ್ಬಂದಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ದೂರು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ’ ಎಂದು ಉದ್ಯಮಿ ವಸಂತ ಲದ್ವಾ ‘ಪ್ರಜಾವಾಣಿ’ಗೆ ತಿಳಿಸಿದರು. ‘ವಿದ್ಯುತ್‌ ಇಲ್ಲದೇ ಇರುವುದರಿಂದ ವಹಿವಾಟು ಸ್ಥಗಿತಗೊಂಡಿದ್ದು. ಉದ್ಯಮ ವಲಯಕ್ಕೂ ಅಪಾರ ನಷ್ಟವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.