ADVERTISEMENT

‘ಕೊಳೆಯುತ್ತಿದೆ ₹ 18 ಸಾವಿರ ಕೋಟಿ’

ಖನಿಜ ಪ್ರತಿಷ್ಠಾನ ಆಯೋಗದ ನಿಧಿ ಸಮರ್ಪಕ ಬಳಕೆಯಾಗಲಿ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಮೇ 2017, 8:56 IST
Last Updated 25 ಮೇ 2017, 8:56 IST

ಧಾರವಾಡ: ‘ಗಣಿಗಾರಿಕೆ ನಡೆಯುತ್ತಿರುವ ಎಲ್ಲ ಜಿಲ್ಲೆಗಳಲ್ಲಿ ಖನಿಜ ಪ್ರತಿಷ್ಠಾನ ಆಯೋಗ ಸಂಗ್ರಹಿಸಿದ ಅಂದಾಜು ₹ 18 ಸಾವಿರ ಕೋಟಿ ಖಜಾನೆಯಲ್ಲಿ ಕೊಳೆಯುತ್ತಿದೆ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅರವಿಂದ ಏಗನಗೌಡರ ಆರೋಪಿಸಿದರು.

‘ಗಣಿ ಅಕ್ರಮಕ್ಕೆ ಕಡಿವಾಣ ಹಾಕಲು ಗಣಿ ಮತ್ತು ಖನಿಜಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದ ನಂತರ ಖನಿಜ ಪ್ರತಿಷ್ಠಾನ ಆಯೋಗ ರಚಿಸಲಾಯಿತು. ರಾಜ್ಯದ ಆಯೋಗ ನಿಧಿಯಲ್ಲಿ ಸಂಗ್ರಹವಾಗಿರುವ ಶೇ 60 ರಷ್ಟು ಹಣವನ್ನು ಗಣಿಯಿಂದ ಬಾಧಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಮಹಿಳೆ ಮತ್ತು ಮಕ್ಕಳ ಆರೋಗ್ಯ, ಸ್ವಚ್ಛತೆ, ಪರಿಸರ ಮಾಲಿನ್ಯ ತಡೆಗೆ ಸೇರಿದಂತೆ ಇತರೆ ಕೆಲಸಗಳಿಗೆ ಬಳಕೆ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಹಣ ಸಮರ್ಪಕವಾಗಿ ಬಳಕೆಯಾಗಿಲ್ಲ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಬಾಕಿ ಉಳಿದ ಶೇ 20ರಷ್ಟು ಹಣವನ್ನು ದತ್ತಿ ರೂಪದಲ್ಲಿ ಠೇವಣಿ ಇಟ್ಟುಕೊಳ್ಳಬೇಕು. ಗಣಿ ಚಟುವಟಿಕೆ ಪೂರ್ಣಗೊಂಡ ಬಳಿಕ ಪರಿಸರ ಪುನಃಶ್ಚೇತನಕ್ಕೆ ಬಳಸಬೇಕು. ಜಿಲ್ಲಾ ಖನಿಜ ಪ್ರತಿಷ್ಠಾನ ಮತ್ತು ಸಂಪನ್ಮೂಲ ಸಂಗ್ರಹ ಯೋಜನೆಯಡಿ ಸಂಗ್ರಹವಾಗಿರುವ ಹಣವನ್ನು ಬರ ಪರಿಹಾರಕ್ಕೆ ಬಳಸಿಕೊಳ್ಳುವಂತೆ ಸುಪ್ರಿಂಕೋರ್ಟ್‌ ಸೂಚನೆ ನೀಡಿದ್ದರೂ, ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರಕ್ಕೆ ರೈತನ ಬಗ್ಗೆ ಕಾಳಜಿ, ಕನಿಕರ ಇಲ್ಲದಿರುವುದನ್ನು ತೋರಿಸುತ್ತದೆ’ ಎಂದು ಟೀಕಿಸಿದರು.

‘ನೋಡಲ್ ಏಜೆನ್ಸಿಯಾಗಿರುವ ‘ಕರ್ನಾಟಕ ಗಣಿಗಾರಿಕೆ ಮತ್ತು ಪರಿಸರ ಮರುಸ್ಥಾಪನೆ ನಿಗಮ’ ತಕ್ಷಣ ಸಭೆ ಕರೆದು ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ಉಂಟಾಗಿರುವ ಹಾಗೂ ಉಂಟಾಗಬಹುದಾದ ಸಮಸ್ಯೆ,  ಪರಿಹಾರ ಮತ್ತು ಮೂಲಸೌಕರ್ಯ ತಲುಪಿಸಲು ಈ ಹಣ ಬಳಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಕೂಡಲೇ ಬರ ಪೀಡಿತ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಖಜಾನೆಯಲ್ಲಿ ಸಾಕಷ್ಟು
ಹಣವಿದ್ದರೂ ರೈತರ ಸಮಸ್ಯೆ ಬಗೆಹರಿಸುವಲ್ಲಿ ಹಾಗೂ ಜಾನುವಾರುಗಳಿಗೆ ಮೇವು, ನೀರು ಒದಗಿಸುವಲ್ಲಿ ವಿಫಲವಾದ ಕಾರಣ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಗಣಿ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮುಂದಿನ ಒಂದು ತಿಂಗಳ ಒಳಗಾಗಿ ರೈತ ಸಮುದಾಯಕ್ಕೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿ, ಖಜಾನೆಯಲ್ಲಿರುವ ಹಣವನ್ನು ವ್ಯಯಿಸಬೇಕು. ಇಲ್ಲದಿದ್ದರೆ, ಹೋರಾಟ ಅನಿವಾರ್ಯವಾಗಲಿದೆ’ ಎಂದು ಹೇಳಿದರು. ಮುಖಂಡರಾದ ಬಸವರಾಜ ಬಾಳಗಿ, ನಿಂಗನಗೌಡ ಪಾಟೀಲ, ಬಸವರಾಜ ಭಾವಿಕಟ್ಟಿ ಇದ್ದರು.

*
ಒಂದು ತಿಂಗಳಲ್ಲಿ  ರೈತರಿಗೆ ಅನುಕೂಲವಾಗುವ ಯೋಜನೆ  ರೂಪಿಸಿ, ಖಜಾನೆಯಲ್ಲಿರುವ ಹಣವನ್ನು ವ್ಯಯಿಸಬೇಕು. ಇಲ್ಲದಿದ್ದರೆ, ಹೋರಾಟ ಅನಿವಾರ್ಯವಾಗಲಿದೆ.
-ಅರವಿಂದ ಏಗನಗೌಡರ,
ಹುಬ್ಬಳ್ಳಿ–ಧಾರವಾಡ ಮಹಾನಗರ ಬಿಜೆಪಿ, ರೈತ  ಮೋರ್ಚಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT