ADVERTISEMENT

ಜನತಾಬಜಾರ್‌, ಕಮರಿಪೇಟೆ, ದುರ್ಗದ ಬೈಲ್‌ ಹೈಟೆಕ್‌

ಸ್ಮಾರ್ಟ್‌ ಸಿಟಿ ಏನು ಎಲ್ಲಿ?

Published 13 ಮಾರ್ಚ್ 2017, 6:52 IST
Last Updated 13 ಮಾರ್ಚ್ 2017, 6:52 IST
ಜನತಾಬಜಾರ್‌, ಕಮರಿಪೇಟೆ, ದುರ್ಗದ ಬೈಲ್‌ ಹೈಟೆಕ್‌
ಜನತಾಬಜಾರ್‌, ಕಮರಿಪೇಟೆ, ದುರ್ಗದ ಬೈಲ್‌ ಹೈಟೆಕ್‌   

ಹುಬ್ಬಳ್ಳಿ: ನಗರದ ಜನತಾ ಬಜಾರ್‌, ಕಮರಿಪೇಟೆ, ದುರ್ಗದಬೈಲ್‌, ನೆಹರೂ ಸ್ಟೇಡಿಯಂ ಅಭಿವೃದ್ಧಿಗೆ ಹೈಟೆಕ್‌ ಸ್ಪರ್ಶ ಸಿಗಲಿದೆ. ಗೋಕುಲ ರಸ್ತೆ ‘ಹಸಿರು ರಸ್ತೆ’ಯಾಗಿ ಪರಿವರ್ತನೆಯಾಗಲಿದೆ. ಬೋಟಿಂಗ್‌ ಸೇರಿದಂತೆ ಇತರ ಮನರಂಜನಾ ಚಟುವಟಿಕೆಗಳ ತಾಣವಾಗಿ ತೋಳನಕೆರೆ ಅಭಿವೃದ್ಧಿಯಾಗಲಿದೆ.

ನಗರದ ಹೃದಯ ಭಾಗದಲ್ಲಿ ಇರುವ ನೆಹರೂ ಸ್ಟೇಡಿಯಂ ಅನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಸ್ಟೇಡಿಯಂ ಮೇಲೆ ಸೌರ ಫಲಕ ಹಾಕಿ ವಿದ್ಯುತ್‌ ಉತ್ಪಾದಿಸಲಾಗುವುದು. ಈ ಪ್ರದೇಶದ ಸುತ್ತಮುತ್ತ­ಲಿನ ಬೀದಿಗಳಲ್ಲಿ 49 ಸಾವಿರ ಎಲ್‌ಇಡಿ ದೀಪ ಅಳವಡಿಸ­ಲಾಗುತ್ತದೆ ಎನ್ನುತ್ತಾರೆ ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ.

ರಾಣಿ ಚನ್ನಮ್ಮ ವೃತ್ತದಲ್ಲಿ­ರುವ ಜನತಾ ಬಜಾರ್‌ ಅನ್ನು ಬಹುಪಯೋಗಿ ಮಾಲ್‌ ಆಗಿ ಪರಿವರ್ತಿಸಲಾಗುವುದು. ಅಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತದೆ. ‘ಸಿಟಿ ಸೆಂಟರ್‌ ಪ್ಲಾಜಾ’ ನಿರ್ಮಾಣವಾಗಲಿದ್ದು, ಇಲ್ಲಿನ ಮಾರುಕಟ್ಟೆ ಪ್ರದೇಶವನ್ನು ಸುವ್ಯವಸ್ಥಿತಗೊಳಿಸಿ ಪಾದಚಾರಿಗಳು, ವಾಹನ ಸಂಚಾರಕ್ಕೆ ತೊಂದರೆ­ಯಾಗ­ದಂತೆ ‘ಚತುರ ವ್ಯವಸ್ಥೆ’ ಕಲ್ಪಿಸಲಾಗುತ್ತದೆ.

ADVERTISEMENT

ಕಮರಿಪೇಟೆಯಲ್ಲಿ ಪಾದಚಾರಿ ಮಾರ್ಗದ ಆಧುನೀಕರಣ, ಈಜುಕೊಳದಲ್ಲಿ ಸಾರ್ವಜನಿಕ ಸೌಲಭ್ಯಗಳು ಬರಲಿವೆ. ಇಂದಿರಾಗಾಂಧಿ ಗಾಜಿನ ಮನೆ ಹಾಗೂ ಮಹಾತ್ಮಗಾಂಧಿ ಉದ್ಯಾನದ ಪ್ರದೇಶ ಅಭಿವೃದ್ಧಿಯಲ್ಲಿ ಹಸಿರು ತಾಣಕ್ಕೆ ಹೆಚ್ಚಿನ ಮಹತ್ವ. ತೆರೆದ ಪ್ರದೇಶ ಹೆಚ್ಚಾಗಿರಲಿದ್ದು, ನಗರದ ಪ್ರಮುಖ ತಾಣವನ್ನಾಗಿಸುವ ಜತೆಗೆ ಪಾರ್ಕಿಂಗ್‌ ಸ್ಥಳವನ್ನೂ ನಿರ್ಮಿಸಲಾಗುತ್ತದೆ. ಈ ಪ್ರದೇಶದ ಸುತ್ತಮುತ್ತ ನಾಲಾ ವ್ಯವಸ್ಥೆಯನ್ನು ಮರುಅಭಿವೃದ್ಧಿಪಡಿಸಲಾಗುತ್ತದೆ.

ದುರ್ಗದ ಬೈಲ್‌ನಲ್ಲಿರುವ ಎಂ.ಜಿ. ಮಾರ್ಕೆಟ್‌ ಆಧುನಿಕ ಸ್ಪರ್ಶ ಪಡೆದುಕೊಳ್ಳಲಿದ್ದು, ‘ಸ್ಮಾರ್ಟ್‌ ಶಾಪಿಂಗ್‌’ ತಾಣವಾಗಲಿದೆ. ಇಲ್ಲಿ ಸಂತೆಗೆ ಅವಕಾಶ ಕಲ್ಪಿಸುವ ಜತೆಗೆ, ವಾಹನ ನಿಲುಗಡೆಗೂ ವ್ಯವಸ್ಥೆ­ಯಾಗ­ಲಿದೆ. ಮೇದಾರ್‌ ಓಣಿ­ಯಲ್ಲಿ­ರುವ ಪಾಲಿಕೆ ಆಸ್ಪತ್ರೆಗೆ ಹೈಟೆಕ್‌ ಸೌಲಭ್ಯಗಳೂ ಲಭ್ಯ­ವಾಗಲಿವೆ. ಇಲ್ಲಿ, ಸ್ಮಾರ್ಟ್‌ ಪಾರ್ಕಿಂಗ್‌ ಕಲ್ಪಿಸ­ಲಾಗುತ್ತದೆ. ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ರೈಲ್ವೆ ಇಲಾಖೆ ಸಹಯೋಗದಲ್ಲಿ ನಿರ್ಮಾಣ­ವಾಗಲಿದ್ದು, ಇದರ ಮೇಲೆ ಸೌರವಿದ್ಯುತ್‌ ಉತ್ಪಾದಿಸ­ಲಾಗುತ್ತದೆ.

ಕೊಳೆಗೇರಿ ಅಭಿವೃದ್ಧಿ: ಗೋಕುಲ ರಸ್ತೆಯಲ್ಲಿರುವ ಕೇಂದ್ರ ಬಸ್‌ ನಿಲ್ದಾಣದ ಹಿಂಭಾಗದಲ್ಲಿರುವ ಮಾರುತಿ ನಗರದಲ್ಲಿರುವ ಕೊಳೆಗೇರಿಯನ್ನು ಅಭಿವೃದ್ಧಿಪಡಿಸ­ಲಾಗುತ್ತದೆ. ಇಲ್ಲಿ ಕಡಿಮೆ ವೆಚ್ಚದ ವಸತಿ ಸೌಲಭ್ಯವೂ ಲಭ್ಯವಾಗಲಿದೆ.

**

ತೋಳನಕೆರೆ ಚಟುವಟಿಕೆ ತಾಣ
ತೋಳನಕೆರೆಯಲ್ಲಿನ ಹೂಳು ತೆಗೆದು, ಅದನ್ನು ಸ್ವಚ್ಛಗೊಳಿಸುವ ಕೆಲಸ ಪ್ರಥಮವಾಗಿ ನಡೆಯಲಿದೆ. ಸಾರ್ವಜನಿಕ ತಾಣವಾಗಿಸುವ ಜತೆಗೆ ಮಕ್ಕಳಿಂದ ಹಿಡಿದು ವೃದ್ಧರು ಬಳಸಬಹುದಾದಂತಹ ಮನರಂಜನಾ ಸೌಲಭ್ಯಗಳು ಇಲ್ಲಿ ಸಿಗಲಿವೆ. ಬೋಟಿಂಗ್‌ ವ್ಯವಸ್ಥೆಯ ಆಕರ್ಷಣೆಯೊಂದಿಗೆ ಸ್ವಚ್ಛ ಸುಂದರ ತಾಣವಾಗಿಸಿ, ಸುತ್ತಮುತ್ತಲಿನ ಪ್ರದೇಶದ ಜೀವನ ಮಟ್ಟವನ್ನೂ ಸುಧಾರಿಸಲಾಗುವುದು ಎಂದು ಆಯುಕ್ತ ಸಿದ್ಧಲಿಂಗಯ್ಯ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.