ADVERTISEMENT

ಜಿಲ್ಲೆಗೆ ಶೆಟ್ಟರ್, ಜೋಶಿ ಕೊಡುಗೆ ಶೂನ್ಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:34 IST
Last Updated 7 ನವೆಂಬರ್ 2017, 6:34 IST
ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಡೊಳ್ಳು ಬಾರಿಸುವ ಮೂಲಕ ‘ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಡೊಳ್ಳು ಬಾರಿಸುವ ಮೂಲಕ ‘ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು   

ಧಾರವಾಡ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಅವರು ಈದ್ಗಾ ಮೈದಾನದ ಕೋಮು ಗಲಭೆ ವಿಷಯ ಹುಟ್ಟುಹಾಕಿ ಚುನಾವಣೆ ಗೆದ್ದಿದ್ದಾರೆ. ಅವರಿಂದ ಜಿಲ್ಲೆಗೆ ದೊರೆತಿರುವ ಕೊಡುಗೆ ಶೂನ್ಯ’ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಜೆಡಿಎಸ್‌ ಮುಖಂಡ ಬಸವರಾಜ ಹೊರಟ್ಟಿ ಆರೋಪ ಮಾಡಿದರು.

ಕೆಸಿಸಿ ಬ್ಯಾಂಕ್‌ ವೃತ್ತದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಮನೆ ಮನೆಗೆ ಕುಮಾರಣ್ಣ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ನಾಯಕರು ನಪಾಸಾಗಿದ್ದಾರೆ. ಟಿಪ್ಪು ವಿಷಯದಲ್ಲಿ ಶೆಟ್ಟರ್, ಜೋಶಿ ಹಾಗೂ ಸಚಿವ ಅನಂತಕುಮಾರ್‌ ಇಲ್ಲ ಸಲ್ಲದ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ.

ಕೋಮು ಗಲಭೆ ಮಾಡಿಸುವುದೇ ಈ ಪಕ್ಷದವರ ಕಾಯಕವಾಗಿದೆ. ಹಾಗೆ ನೋಡಿದರೆ ಜಿಲ್ಲೆಗೆ ಎಚ್‌.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ನೀಡಿದ ಕೊಡುಗೆ ಅಪಾರ. ಅವರ ಸಾಧನೆಗಳನ್ನೇ ಮನೆ, ಮನೆಗೆ ಹೋಗಿ ವಿವರಿಸಲಿದ್ದೇವೆ’ ಎಂದು ಹೇಳಿದರು.

ADVERTISEMENT

’ಮನೆ ಮನೆಗೆ ಕುಮಾರಣ್ಣ ಅಭಿಯಾನವು ಪಕ್ಷ ಸಂಘಟಿಸಲು ಉತ್ತಮ ವೇದಿಕೆ. ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ರಾಜ್ಯಕ್ಕೆ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟದಲ್ಲಿ ಅನೇಕ ಜನಪರ ಯೋಜನೆಗಳು ಜಾರಿಗೆ ಬಂದಿವೆ. ಈ ಭಾಗದ ಮುಖ್ಯಮಂತ್ರಿಯಾಗಿ ಶೆಟ್ಟರ್ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಲಿ’ ಎಂದರು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ‘ಎಲ್ಲ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರೆ ಗೆಲವು ನಮ್ಮದಾಗುತ್ತದೆ. ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ಅವಳಿ ನಗರಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಆದರೆ, ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಾಯಕರು ಅವಳಿ ನಗರವನ್ನು ಅಭಿವೃದ್ಧಿಗೊಳಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪ ಮಾಡಿದರು.

ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಭಜಂತ್ರಿ ಮಾತನಾಡಿ, ‘ರಾಜ್ಯ ಯುಘಟಕದ ವತಿಯಿಂದ ‘ಈ ಬಾರಿ ಕರ್ನಾಟಕಕ್ಕೆ ಕುಮಾರಣ್ಣ’ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ, ಧಾರವಾಡ ಶಹರ ಅಧ್ಯಕ್ಷ ಸುರೇಶ ಹಿರೇಮಠ, ಐ.ಎಂ. ನಧಾಪ್, ಪಾಲಿಕೆ ಸದಸ್ಯರಾದ ರಾಜು ಅಂಬೋರೆ, ದೇವರಾಜ ಕಂಬಳಿ, ಶಾಂತವೀರ ಬೇಟಗೇರಿ, ವೆಂಕಟೇಶ ಷಗಬಾಲ, ಬಿ.ಎಚ್. ದ್ಯಾವನೂರ, ಮುದಕಪ್ಪ ಮಲ್ಲಾರಿ, ಮಜೀದ ಕಿತ್ತೂರ, ಜಿಲ್ಲಾನಿ ಖಾಜಿ, ಅಬಜೀತ ಭಜಂತ್ರಿ, ರಾಜು ಚೌಧರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.