ADVERTISEMENT

ಜಿಲ್ಲೆಯಲ್ಲಿ ಉತ್ತಮ ಮಳೆ: ಕೋಡಿ ಬಿದ್ದ ಡೌಗಿ ನಾಲಾ

ದಿನವಿಡೀ ಸುರಿದ ವರುಣ; ಕುಂದಗೋಳ–ಕಲಘಟಗಿಯಲ್ಲಿಯೂ ವರ್ಷಧಾರೆ; ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 10:40 IST
Last Updated 20 ಜುಲೈ 2017, 10:40 IST
ಅಳ್ನಾವರದ ಡೌಗಿ ನಾಲಾ ಹಳ್ಳ ಸಂಪೂರ್ಣ ಭರ್ತಿಯಾಗಿ ಜನರಲ್ಲಿ ಹರ್ಷ ಮೂಡಿಸಿದೆ (ಎಡಚಿತ್ರ) ಅಳ್ನಾವರದಲ್ಲಿ ಸುರಿದ ಮಳೆಯಿಂದ ಸಂತಸಗೊಂಡಿದ್ದ ರೈತ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು
ಅಳ್ನಾವರದ ಡೌಗಿ ನಾಲಾ ಹಳ್ಳ ಸಂಪೂರ್ಣ ಭರ್ತಿಯಾಗಿ ಜನರಲ್ಲಿ ಹರ್ಷ ಮೂಡಿಸಿದೆ (ಎಡಚಿತ್ರ) ಅಳ್ನಾವರದಲ್ಲಿ ಸುರಿದ ಮಳೆಯಿಂದ ಸಂತಸಗೊಂಡಿದ್ದ ರೈತ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು   

ಹುಬ್ಬಳ್ಳಿ/ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸಂಜೆ ವರೆಗೂ ಜಿಟಿಜಿಟಿ ಮಳೆಯಾಯಿತು.

16 ಮಿ.ಮೀ. ಮಳೆ: ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 16 ಮಿ.ಮೀ. ಮಳೆಯಾಗಿದೆ. ಧಾರವಾಡ ತಾಲ್ಲೂಕಿನಲ್ಲಿ 27 ಮಿ.ಮೀ., ಹುಬ್ಬಳ್ಳಿ 22 ಮಿ.ಮೀ, ಕಲಘಟಗಿ 24 ಮಿ.ಮೀ, ಕುಂದಗೋಳ 11ಮಿ.ಮೀ ಹಾಗೂ ನವಲಗುಂದದಲ್ಲಿ 9 ಮಿ.ಮೀ. ಮಳೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಳ್ಳಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಡೌಗಿ ನಾಲಾ ಒಂದೇ ದಿನದಲ್ಲಿ ತುಂಬಿ, ಕೋಡಿ ಬಿದ್ದಿದೆ. ಬೆಳಗಾವಿ ಜಿಲ್ಲೆ ಖಾನಾಪುರ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಡೌಗಿ ನಾಲಾ ತುಂಬಿ ಹರಿಯುತ್ತಿದ್ದು, ಈ ಭಾಗದ ಜನರಲ್ಲಿ ಖುಷಿ ಮೂಡಿಸಿದೆ.

ADVERTISEMENT

ಮಳೆಗಾಲದಲ್ಲೂ ಪಟ್ಟಣಕ್ಕೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಜಿಲ್ಲಾಡಳಿತ ಬುಧವಾರ ಅದನ್ನು ಸ್ಥಗಿತಗೊಳಿಸಿದೆ.
ಡೌಗಿ ನಾಲಾಕ್ಕೆ ಇದೇ ಶುಕ್ರವಾರ ಬಾಗಿನ ಅರ್ಪಿಸಲು ಅಳ್ನಾವರ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಧರಿಸಲಾಗಿದೆ.

‘ಡೌಗಿ ನಾಲಾಕ್ಕೆ ಎರಡು ತಿಂಗಳು ಮುಂಚೆ ನೀರು ಬಂದಿದ್ದರೆ ಉತ್ತಮವಾಗಿರುತ್ತಿತ್ತು. ಈ ಭಾಗದ ಜನರ ಪ್ರಾರ್ಥನೆಯ ಫಲವಾಗಿ ಹಳ್ಳಕ್ಕೆ ನೀರು ಬಂದಿದೆ. ಸಾಯುವ ಜೀವಕ್ಕೆ  ಜೀವ ಜಲ ದೊರೆತು ಮರು ಜೀವ ಬಂದತಾಗಿದೆ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಕಿರಣ ಗಡಕರ ಹೇಳಿದರು.

ಪುಂಡಲೀಕ ಪಾರದಿ ಪ್ರತಿಕ್ರಿಯಿಸಿ, ‘ಬೆಳಿಗ್ಗೆ ಹಳ್ಳಕ್ಕೆ ಹೋಗಿದ್ದೆ. ನೀರು ತುಂಬಿ ಬಾಂದಾರ ಮೇಲೆ ಹರಿದು ಸಾಕಷ್ಟು ಪ್ರಮಾಣದಲ್ಲಿ ಪೋಲಾಗುತ್ತಿದೆ. ನೀರನ್ನು ತಡೆಯುವ ಕೆಲಸ ಆಗಬೇಕು. ಪಟ್ಟಣ ವ್ಯಾಪ್ತಿಯಲ್ಲಿ ಮೂರು ಕೆರೆಗಳಿವೆ. ಹರಿದು ಹೋಗುವ ನೀರನ್ನು ತಡೆದು ಕೆರೆ ತುಂಬುವ ಕೆಲಸ ಆಗಬೇಕು’ ಎಂದರು.

ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಅಳ್ನಾವರ ಭಾಗದಲ್ಲಿ ಈಗಾಗಲೇ ಬಿತ್ತನೆಯಾಗಿರುವ ಭತ್ತದ ಬೆಳೆಗೆ ಅನುಕೂಲವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಕಲಘಟಗಿ ತಾಲ್ಲೂಕು ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗಿದೆ. ಮಧ್ಯಾಹ್ನದ ವರೆಗೂ ಜಿಟಿಜಿಟಿ ಮಳೆಯಾಯಿತು. ಮಧ್ಯಾಹ್ನದ ಬಳಿಕ ಸುಮಾರು ಎರಡು ಗಂಟೆ ಧಾರಾಕಾರ ಮಳೆ ಸುರಿಯಿತು.

ನವಲಗುಂದ, ಅಣ್ಣಿಗೇರಿ ಮತ್ತು ಕುಂದಗೋಳ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆಯಾಗಿದೆ. ಕುಂದಗೋಳ ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಆಗುತ್ತಿರುವ ಸಾಧಾರಣ ಮಳೆಯಿಂದಾಗಿ ಮೆಣಸಿನ ಸಸಿ ನಾಟಿಗೆ ಅನುಕೂಲವಾಗಿದೆ.

ಕೆಸರುಮಯ ರಸ್ತೆ: ಹುಬ್ಬಳ್ಳಿಯಲ್ಲಿ ಬುಧವಾರ ಬೆಳಿಗ್ಗೆಯಿಂದ ಸಂಜೆ ವರೆಗೂ ಜಿಟಿಜಿಟಿ ಮಳೆಯಾಗಿರುವುದರಿಂದ ನಗರದ ಬಹುತೇಕ ರಸ್ತೆಗಳು ಕೆಸರುಮಯವಾಗಿದ್ದವು. ಇಲ್ಲಿನ ಜೆ.ಜಿ.ಕಾಮರ್ಸ್‌ ಕಾಲೇಜು ಎದುರು ರಸ್ತೆಯಲ್ಲಿ ನೀರು ನಿಂತಿರುವುದರಿಂದ ಸಂಚಾರಕ್ಕೆ ಅಡಚಣೆಯಾಯಿತು. ಬಳಿಕ ಬಿಆರ್‌ಟಿಎಸ್‌ನಿಂದ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಯಿತು. ಜಿಟಿಜಿಟಿ ಮಳೆಯಿಂದ ಅಶೋಕನಗರದ ಸಂತೆಯು ಗ್ರಾಹಕರಿಲ್ಲದೇ ಕಳೆಗುಂದಿತ್ತು.

ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿಯಲ್ಲಿ 15.6 ಮಿ.ಮೀ., ಶಿರಗುಪ್ಪಿಯಲ್ಲಿ 7.2 ಹಾಗೂ ಬ್ಯಾಹಟ್ಟಿಯಲ್ಲಿ 15.2 ಮಿ.ಮೀ ಮಳೆಯಾಗಿದೆ.

ಜಡಿ ಮಳೆ: ಧಾರವಾಡದಲ್ಲಿ ಬುಧವಾರ ಬೆಳಿಗ್ಗೆಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಜಿಟಿ, ಜಿಟಿ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ಹರಿಯಿತು. 
ಅವಳಿ ನಗರದ ಮಧ್ಯೆ ನಡೆಯುತ್ತಿರುವ ಬಿಆರ್‌ಟಿಎಸ್‌ ರಸ್ತೆ ಕಾಮಗಾರಿಗೆ ಅಗೆದ ಕೆಂಪು ಮಣ್ಣು ನೀರಿನೊಂದಿಗೆ ರಸ್ತೆಗಿಳಿದಿದ್ದು, ರಸ್ತೆಗಳ ಬಣ್ಣ ಬದಲಾಗಿದೆ.

ಮಳೆಯಿಂದಾಗಿ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಹೊಂಡಗಳು ನೀರಿನಿಂದ ತುಂಬಿಕೊಂಡಿವೆ.
ರಸ್ತೆ ಎಲ್ಲಿದೆ, ಹೊಂಡ ಎಲ್ಲಿದೆ ಎನ್ನುವುದು ತಿಳಿಯದೇ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.

ಅಲ್ಲದೇ, ಮಳೆಯಿಂದಾಗಿ ಪಿ.ಬಿ ರಸ್ತೆಯಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದರಿಂದ ಮೇಲಿಂದ ಮೇಲೆ ಸಂಚಾರ ದಟ್ಟಣೆಯಾಯಿತ್ತು.   

ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಚಳಿಯ ಅನುಭವ ನೀಡುತ್ತಿದೆ. ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಇಡೀ ದಿನ ಸೂರ್ಯನ ದರ್ಶನವಾಗಲಿಲ್ಲ. 

ಬೆಳಿಗ್ಗೆ ಶಾಲೆಗೆ ಹೋಗಬೇಕಾದ ಮಕ್ಕಳು ಕೊಡೆ, ಜರ್ಕೀನ್‌, ರೇನ್‌ಕೋಟ್‌ಗಳ ಆಶ್ರಯ ಪಡೆದರು. ಕಚೇರಿಗೆ ತೆರಳಬೇಕಾದವರು ಮಳೆಯಲ್ಲಿಯೇ ಹೋಗಬೇಕಾದ ಅನಿವಾರ್ಯತೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.