ADVERTISEMENT

ದುರ್ಗದಬೈಲ್‌ನಲ್ಲಿ ನೂರೆಂಟು ಸಮಸ್ಯೆಗಳು!

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 5:49 IST
Last Updated 15 ಸೆಪ್ಟೆಂಬರ್ 2017, 5:49 IST
ಹಳೇ ಹುಬ್ಬಳ್ಳಿಯ ದುರ್ಗದಬೈಲ್‌ ವೃತ್ತದ ಸಂಚಾರ ದಟ್ಟಣೆಯ ನೋಟ
ಹಳೇ ಹುಬ್ಬಳ್ಳಿಯ ದುರ್ಗದಬೈಲ್‌ ವೃತ್ತದ ಸಂಚಾರ ದಟ್ಟಣೆಯ ನೋಟ   

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ದುರ್ಗದಬೈಲ್ ಹಲವು ಸಮಸ್ಯೆಗಳ ಗೂಡಾಗಿದೆ. ಹತ್ತಾರು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ವೃತ್ತವನ್ನು ಏಳು ರಸ್ತೆಗಳು ಸೇರುತ್ತವೆ. ಮಾರುಕಟ್ಟೆ ಪ್ರದೇಶವಾಗಿರುವುದರಿಂದ ಜನಸಂದಣಿ ಹೆಚ್ಚಾಗಿದೆ. ವಾಣಿಜ್ಯ ವ್ಯವಹಾರಗಳ ಹೃದಯಭಾಗವಾದ ಈ ವೃತ್ತವು ಮೂರು ವಾರ್ಡ್‌ಗಳಲ್ಲಿ ಹಂಚಿ ಹೋಗಿದೆ.

‘ದುರ್ಗದಬೈಲ್‌ನಿಂದ ಸಿದ್ಧಾರ್ಥ ವೃತ್ತದವರೆಗಿನ ರಸ್ತೆ ಅತ್ಯಂತ ಕಿರಿದಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ರಸ್ತೆ ಅಗಲೀಕರಣ ಮಾಡದ ಹೊರತು, ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದು  ಸ್ಥಳೀಯ ವ್ಯಾಪಾರಿ ಬಸವರಾಜ ಡಂಬಳ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ವಾಹನ ನಿಲುಗಡೆ ನಿಷೇಧ ಇರುವ ರಸ್ತೆಯ ಎರಡೂ ಬದಿ ಆಟೊಗಳು ನಿಲ್ಲುತ್ತವೆ. ಇದರಿಂದಾಗಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ಸಂಚಾರ ನಿಯಮ ಉಲ್ಲಂಘನೆ ಸಾಮಾನ್ಯವಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ಅವರು ದೂರುತ್ತಾರೆ.

ADVERTISEMENT

ಬಸ್‌ ತಂಗುದಾಣಗಳೇ ಇಲ್ಲ: ಸಿದ್ಧಾರ್ಥ ವೃತ್ತ, ಕಸಬಾಪೇಟೆ ಪೊಲೀಸ್ ಠಾಣೆ , ದುರ್ಗದಬೈಲ್‌ನಲ್ಲಿ ಬಸ್ಸುಗಳು ನಿಲ್ಲುವ ಸ್ಥಳಗಳಲ್ಲಿ ತಂಗುದಾಣಗಳೇ ಇಲ್ಲ. ‘ದುರ್ಗದಬೈಲ್ ವೃತ್ತದಲ್ಲಿದ್ದ ಬಸ್ ತಂಗುದಾಣವನ್ನು ಕೆಲ ವರ್ಷಗಳ  ಹಿಂದೆ ತೆರವು ಮಾಡಲಾಯಿತು.  ಮಳೆ ಮತ್ತು ಬಿಸಿಲು ಲೆಕ್ಕಿಸದೆ ಬಸ್ಸಿಗಾಗಿ ರಸ್ತೆಯಲ್ಲೇ ಕಾಯಬೇಕಾದ ಪರಿಸ್ಥಿತಿ ಇದೆ’ ಎಂದು ಸ್ಥಳೀಯರಾದ ಕರುಣಾಕರ ಶೆಟ್ಟಿ ಹೇಳುತ್ತಾರೆ.

ರಸ್ತೆಯಲ್ಲೇ ವ್ಯಾಪಾರ
‘ರಸ್ತೆ ಬದಿ ವ್ಯಾಪಾರಿಗಳಿಗಾಗಿ ಪಕ್ಕದ ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ, ಯಾರೂ ಅಲ್ಲಿಗೆ ಹೋಗದೆ ರಸ್ತೆಬದಿಯೇ ವ್ಯಾಪಾರಕ್ಕೆ ಮಾಡುತ್ತಾರೆ. ಯಾರೂ ಈ ಬಗ್ಗೆ ಕ್ರಮಕೈಗೊಳ್ಳುವುದಿಲ್ಲ’ ಎಂದು ವ್ಯಾಪಾರಿ ಮಂಜುನಾಥ ಕಾಟವೆ ದೂರುತ್ತಾರೆ.

‘ಏಕಮುಖ ಸಂಚಾರವೇ ಪರಿಹಾರ’
‘ಸಂಚಾರ ದಟ್ಟಣೆ ತಪ್ಪಿಸಲು ಏಕಮುಖ ಸಂಚಾರ ವ್ಯವಸ್ಥೆಯೇ ಪರಿಹಾರ. ದುರ್ಗದಬೈಲ್‌ ಮಾರ್ಗವಾಗಿ ನೇಕಾರನಗರ ಮತ್ತು ಇತರ ಭಾಗಗಳಿಗೆ ಸಂಚರಿಸುವ ವಾಹನಗಳನ್ನು ಕಸಬಾಪೇಟೆ ಪೊಲೀಸ್ ಠಾಣೆ ಬಳಿಯಿಂದ ಜಂಗ್ಲಿಪೇಟೆ ವೃತ್ತಕ್ಕೆ ತಿರುಗಿಸಬೇಕು. ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಜಂಗ್ಲಿಪೇಟೆ ವೃತ್ತದ ಮೂಲಕ ಬೆಳಮಕರಗಲ್ಲಿ ಮಾರ್ಗವಾಗಿ ಸಂಚರಿಸುವಂತೆ ಮಾಡಬೇಕು’ ಎಂದು ಸ್ಥಳೀಯ ಮುಖಂಡ ವೀರೇಶ ನೀಲನೂರ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.