ADVERTISEMENT

ದುಶ್ಚಟ ತ್ಯಜಿಸಲು ಆಟೊ ಚಾಲಕರ ಸಂಕಲ್ಪ

ತೇರಾಪಂಥ್‌ ಯುವಕ ಪರಿಷತ್‌ ದಿನಾಚರಣೆ ಪ್ರಯುಕ್ತ 125 ಮಂದಿಗೆ ಉಚಿತ ಅಪಘಾತ ವಿಮೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 10:45 IST
Last Updated 10 ಜುಲೈ 2017, 10:45 IST

ಹುಬ್ಬಳ್ಳಿ: ‘ಇನ್ನು ಮುಂದೆ ಮದ್ಯ ಮತ್ತು ಗುಟ್ಕಾ ಸೇವಿಸುವುದಿಲ್ಲ. ವ್ಯಸನಮುಕ್ತ ಜೀವನ ನಡೆಸುತ್ತೇವೆ’ ಎಂದು ಆಟೊ ಚಾಲಕರು ಭಾನುವಾರ ಇಲ್ಲಿ ಸಂಕಲ್ಪ ಮಾಡಿದರು.

ನಗರದ ಘಂಟಿಕೇರಿಯ ಶಾಂತಿನಿಕೇತನ ಶಾಲೆಯ ಸಭಾಂಗಣದಲ್ಲಿ ತೇರಾಪಂಥ್‌ ಯುವಕ ಪರಿಷತ್‌ ಯುವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಅಪಘಾತ ವಿಮೆ ವಿತರಣಾ ಸಮಾರಂಭದಲ್ಲಿ ಆಟೊ ಚಾಲಕರು ಮೇಲಿನಂತೆ ಸಂಕಲ್ಪ ಮಾಡಿದರು.

ಉಪನ್ಯಾಸ ನೀಡಿದ ಆಚಾರ್ಯ ಮಹಾಶ್ರವಣರ ಶಿಷ್ಯೆ ವಿಪುಲ್‌ ಪ್ರಗೇರಿ, ‘ಮದ್ಯ ಮತ್ತು ಗುಟ್ಕಾ ಚಟಕ್ಕೆ ಬಲಿಯಾಗಿ ಅನೇಕ ಮಂದಿ ಆಟೊ ಚಾಲಕರು ಸುಂದರವಾದ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಡಿದ ಬಹುತೇಕ ಹಣವನ್ನು ದುಶ್ಚಟಗಳಿಗೆ ಬಳಸುತ್ತಿದ್ದಾರೆ. ಇದರಿಂದ ಸಂಸಾರದ ಬಗ್ಗೆಯೂ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.

ADVERTISEMENT

‘ವ್ಯಸನಕ್ಕೆ ವ್ಯಯ ಮಾಡುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಲ್ಲಿ ಠೇವಣಿ ಇಡಬೇಕು. ಇದರಿಂದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಕುಡಿದು ಹೆಂಡತಿ–ಮಕ್ಕಳನ್ನು ಹೊಡೆಯುವುದು ತಪ್ಪಲಿದೆ. ದುಶ್ಚಟಗಳು ಮನುಷ್ಯನ ಬದುಕನ್ನು ನಾಶ ಮಾಡುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದರು.

ಬೆಂಡಿಗೇರಿ ಠಾಣೆ ಇನ್‌ಸ್ಪೆಕ್ಟರ್‌ ವಿನೋದ ಮುಕ್ತೇದಾರ ಮಾತನಾಡಿ, ‘ಬಹುತೇಕ ಆಟೊ ಚಾಲಕರು ಸಂಚಾರ ನಿಯಮ ಪಾಲಿಸುವುದಿಲ್ಲ. ವಾಹನಕ್ಕೆ ವಿಮೆ ಮಾಡಿಸಿರುವುದಿಲ್ಲ. ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಷ್ಟೇ ವಾಹನದ ವಿಮೆ, ನಿರ್ವಹಣೆ ಬಗ್ಗೆ ಗಮನ ಹರಿಸಬೇಕು’ ಎಂದು ಹೇಳಿದರು.

ದಕ್ಷಿಣ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಅಲಿ ಶೇಖ್‌ ಮಾತನಾಡಿ, ‘ವಾಹನ ಖರೀದಿ ಮಾಡಿದಾಗ ಮಾತ್ರ ಆಟೊ ಚಾಲಕರು ಅದಕ್ಕೆ ವಿಮೆ ಮಾಡಿಸುತ್ತಾರೆ. ಪ್ರತಿವರ್ಷ ಅದನ್ನು ನವೀಕರಣ ಮಾಡುವುದಿಲ್ಲ. ಬಹುತೇಕ ಆಟೊ ಚಾಲಕರು ಬಾಡಿಗೆ ಆಟೊಗಳನ್ನೇ ಓಡಿಸುತ್ತಾರೆ. ನಿತ್ಯ ದುಡಿದ ಹಣದಲ್ಲಿ ಆಟೊ ಮಾಲೀಕರಿಗೆ ನೀಡಿ, ಉಳಿದ ಹಣವನ್ನು ಸಂಸಾರಕ್ಕೆ ಬಳಸಿಕೊಳ್ಳಬೇಕು’ ಎಂದು ಹೇಳಿದರು.

ನೋಂದಣಿ ಮಾಡಿಸಿಕೊಂಡಿದ್ದ 150 ಆಟೊ ಚಾಲಕರ ಪೈಕಿ 125 ಮಂದಿಗೆ  ಉಚಿತವಾಗಿ ಅಪಘಾತ ವಿಮೆ ಬಾಂಡ್‌ಗಳನ್ನು ಪರಿಷತ್‌ ವತಿಯಿಂದ ವಿತರಿಸಲಾಯಿತು.

ಧಾರವಾಡ ಜಿಲ್ಲಾ ಆಟೊ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ದೇವಾನಂದ ಜಗಾಪುರ, ಉಪಾಧ್ಯಕ್ಷ ಬಾಬಾಜಾನ ಮುಧೋಳ, ಅಖಿಲ ಭಾರತೀಯ ತೇರಾಪಂಥ್‌ ಶ್ರಾವಕ ಪರಿಷತ್‌ ಹುಬ್ಬಳ್ಳಿ ಘಟಕ ಅಧ್ಯಕ್ಷ ರಾವತ್‌ ಮಲಗೋಟಿ, ತೇರಾಪಂಥ್‌ ಯುವ ಪರಿಷತ್‌ ಹುಬ್ಬಳ್ಳಿ ಘಟಕ ಅಧ್ಯಕ್ಷ ಮುಖೇಶ ಜೈನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.