ADVERTISEMENT

ನಿತ್ಯ ವಾಹನ ಸವಾರರ ಪರದಾಟ

ಉಪ್ಪಿನ ಬೆಟಗೇರಿಯ ಹೊಸಪೇಟೆ ಓಣಿಯಲ್ಲಿ ತಗ್ಗು ಮುಚ್ಚಲು ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 5:34 IST
Last Updated 13 ಜನವರಿ 2017, 5:34 IST
ಉಪ್ಪಿನ ಬೆಟಗೇರಿ ಗ್ರಾಮದ ಗ್ರಾಮದ ಹೊಸಪೇಟೆ ಓಣಿಯಲ್ಲಿ ಪಂಚಾಯ್ತಿಯವರು ಅಗೆದ ರಸ್ತೆಯ ಮೂಲಕವೇ ಹಾದು ಹೋಗುತ್ತಿರುವ ಬೈಕ್‌ ಸವಾರ
ಉಪ್ಪಿನ ಬೆಟಗೇರಿ ಗ್ರಾಮದ ಗ್ರಾಮದ ಹೊಸಪೇಟೆ ಓಣಿಯಲ್ಲಿ ಪಂಚಾಯ್ತಿಯವರು ಅಗೆದ ರಸ್ತೆಯ ಮೂಲಕವೇ ಹಾದು ಹೋಗುತ್ತಿರುವ ಬೈಕ್‌ ಸವಾರ   
ಧಾರವಾಡ: ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಹೊಸಪೇಟೆ ಓಣಿ­ಯಲ್ಲಿ (ದೊಡವಾಡದವರ ಮನೆ ಬಳಿ) ಪಂಚಾಯ್ತಿಯವರು ನೀರಿನ ಪೂರೈಕೆಯ ಕೊಳವೆ ದುರಸ್ತಿಗಾಗಿ ಅಗೆದ ತೆಗ್ಗನ್ನು ಮುಚ್ಚದೆ ಹಾಗೇ ಬಿಟ್ಟಿದ್ದರಿಂದ ಗ್ರಾಮ­ಸ್ಥರು ತೀವ್ರ ಪರದಾಡುವಂತಾಗಿದೆ.
 
ಕುಡಿಯುವ ನೀರಿನ ಪೈಪ್‌ನಲ್ಲಿ ಚರಂಡಿ ನೀರು ಸೇರುತ್ತಿರುವ ಕಾರಣ ಅದನ್ನು ದುರಸ್ತಿ ಮಾಡುವ ಸಂಬಂಧ ಪಂಚಾಯ್ತಿಯವರು ಸುಮಾರು 20 ದಿನಗಳ ಹಿಂದೆ ರಸ್ತೆಯಲ್ಲೇ ತೆಗ್ಗು ತೆಗೆದು ಕೆಲಸ ಮಾಡಿದ್ದರು. ಆದರೆ, ಕೆಲಸ ಮುಗಿದ ನಂತರ ಆ ತೆಗ್ಗನ್ನು ಮುಚ್ಚದೇ ಹಾಗೇ ಬಿಟ್ಟಿದ್ದರಿಂದ, ಆ ಮಾರ್ಗವಾಗಿ ಹಾದು ಹೋಗುವ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. 
 
‘ಈ ಹಿಂದೆ ಅದೇ ಜಾಗದಲ್ಲಿ ತೆಗ್ಗು ಬಿದ್ದಿತ್ತು. ಆಗ ಪಂಚಾಯ್ತಿಯವರು ಅದರಲ್ಲಿ ಕಲ್ಲು, ಮಣ್ಣು ಹಾಕಿ ತಾತ್ಕಾಲಿಕವಾಗಿ ಅದನ್ನು ಮುಚ್ಚಿದ್ದರು. ಆದರೆ, ಈಗ ಪೈಪ್‌ಲೈನ್‌ ಸರಿಪಡಿಸುವ ಸಲುವಾಗಿ ತಾವೇ ಅಗೆದ ತೆಗ್ಗನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದಾರೆ. ಮಾರುಕಟ್ಟೆಗೆ ವಾಹನ ಸವಾರರು ಹೋಗಬೇಕಾದರೆ ಇದೇ ಮುಖ್ಯರಸ್ತೆಯ ಮೂಲಕ ಹೋಗಬೇಕು.
 
ಆದರೆ, ರಸ್ತೆಯಲ್ಲಿ ತೆಗ್ಗು ತೋಡಿರುವುದರಿಂದ ವಾಹನಗಳು ಹಾಗೂ ಚಕ್ಕಡಿಗಳು ಬೇರೆ ಮಾರ್ಗದ ಮೂಲಕ ಹಾದು ಹೋಗಬೇಕಾದ ಪರಿಸ್ಥಿತಿ ಇದೆ. ಇತ್ತೀಚೆಗೆ ವೃದ್ಧೆಯೊಬ್ಬರು ತೆಗ್ಗಿನಲ್ಲಿ ಬಿದ್ದು ಗಾಯಗೊಂಡಿದ್ದರು. ಈ ಸಂಬಂಧ ಪಂಚಾಯ್ತಿಯವರಿಗೆ ಸಾಕಷ್ಟು ಬಾರಿ ಹೇಳಿದರೂ ಅದನ್ನು ಮುಚ್ಚುವ ಗೋಜಿಗೆ ಹೋಗಿಲ್ಲ’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.