ADVERTISEMENT

ಪಾಲಿಕೆ ಬಜೆಟ್‌: ಜೇಬಿಗೆ ತೆರಿಗೆ ಭಾರ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2014, 6:58 IST
Last Updated 19 ಡಿಸೆಂಬರ್ 2014, 6:58 IST

ಹುಬ್ಬಳ್ಳಿ: ಮೊದಲು ತೆರಿಗೆ ಪಾವತಿಸಿ; ನಂತರ ಸೌಲಭ್ಯ ಕಲ್ಪಿಸುತ್ತೇವೆ: ಪಾಲಿಕೆ. ಮೊದಲು ಸೌಲಭ್ಯ ಕಲ್ಪಿಸಿ; ನಂತರ ತೆರಿಗೆ ಪಾವತಿಸುತ್ತೇವೆ:ಸಾರ್ವಜನಿಕರು.

ನಗರದ ಕನ್ನಡ ಭವನದಲ್ಲಿ ಗುರು­ವಾರ ನಡೆದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ 2015–16ನೇ  ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯ ಒಟ್ಟು ಸಾರಾಂಶವಿದು. ಇದೇ ಮೊದಲ ಬಾರಿಗೆ ಮಹಾನಗರ ಪಾಲಿಕೆ, ಬಜೆಟ್‌ ಪೂರ್ವಭಾವಿಯಾಗಿ ಸಂಘ ಸಂಸ್ಥೆಗಳ, ಸಾರ್ವಜನಿಕರ ಸಭೆ ಕರೆದಿತ್ತು.

ಆರಂಭದಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಸಿ.ಎಂ. ನೂರ್‌ಮನ್ಸೂರ್‌, ‘ಕೇಂದ್ರ, ರಾಜ್ಯ ಬಜೆಟ್‌ ಮಂಡನೆ ಪೂರ್ವದಲ್ಲಿ ಷೇರುದಾರರ ಸಭೆ ಕರೆ­ಯುವುದು ವಾಡಿಕೆ. ಅದರಂತೆ ಇದೇ ಮೊದಲ ಬಾರಿಗೆ ಪಾಲಿಕೆಯಲ್ಲಿಯೂ ಬಜೆಟ್‌ ಪೂರ್ವಭಾವಿ ಸಭೆ ಕರೆಯ­ಲಾಗಿದೆ. ಸಾರ್ವಜನಿಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು’ ಎಂದರು,

‘2014–15ನೇ ಸಾಲಿನಲ್ಲಿ ₨ 300 ಕೋಟಿ ಮೊತ್ತದ ಬಜೆಟ್‌ ಮಂಡಿಸ­ಲಾಗಿತ್ತು. ಆದರೆ, ಪ್ರತಿ ವರ್ಷ ₨ 600 ಕೋಟಿ ಬಜೆಟ್‌ ರೂಪಿಸಿದರೆ ಮಾತ್ರ ಅವಳಿ ನಗರದಲ್ಲಿ ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು. ಸರ್ಕಾರ­ದಿಂದ ₨ 138 ಕೋಟಿ ಬರುತ್ತದೆ. ಪಾಲಿಕೆಯ ವಿವಿಧ ಸಂಪನ್ಮೂಲದಿಂದ ₨ 89 ಕೋಟಿ ಬರುತ್ತದೆ. ಪ್ರತಿ ವರ್ಷ ಕೊರತೆ ಬಜೆಟ್‌ ಮಂಡಿಸುವಂತಾಗಿದೆ’ ಎಂದರು.
‘ಅವಳಿ ನಗರದ ಕೆಲವೆಡೆ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. 24 X 7 ನೀರು ಪೂರೈಕೆ ಕಾಮಗಾರಿ, ಹೆಸ್ಕಾಂ ಕಾಮಗಾರಿ ನಡೆಯುತ್ತಿರು­ವುದರಿಂದ ಅಲ್ಲಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಇನ್ನು 3–4 ತಿಂಗಳಲ್ಲಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾ­ಗುವುದು. ತೆರಿಗೆ ಸಂಗ್ರಹ ಹೆಚ್ಚಾದರೆ, ಸಂಪನ್ಮೂಲವೂ ಹೆಚ್ಚಾಗಲಿದೆ’ ಎಂದು ಹೇಳುವ ಮೂಲಕ ಅವರು, ಮುಂದಿನ ಬಜೆಟ್‌ನಲ್ಲಿ ತೆರಿಗೆ ಮಿತಿ ಹೆಚ್ಚಿಸುವ ಸುಳಿವು ನೀಡಿದರು.

ಪಾಲಿಕೆಯ ಆಸ್ತಿ ಗುರುತಿಸಿ: ‘ಪಾಲಿ­ಕೆಯ ವ್ಯಾಪ್ತಿಯಲ್ಲಿರುವ ಕಟ್ಟಡ, ನಿವೇಶನ ಅಥವಾ ಆಸ್ತಿಯನ್ನು ಗುರು­ತಿಸುವ ಕೆಲಸವಾಗಬೇಕು. ಅದ­ರಿಂದ ಆದಾಯ ಪಡೆಯುವ ಯೋಜನೆ ರೂಪಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕೆಡವಿ, ಅಲ್ಲಿ ಮೂರು ಅಥವಾ ಐದು ಹಂತದ ವಾಣಿಜ್ಯ ಕಟ್ಟಡವನ್ನು ನಿರ್ಮಿಸಬೇಕು. ಅದರಿಂದ ಪಾಲಿಕೆಗೆ ಬರುವ ಆದಾಯ ಪ್ರಮಾಣ ಹೆಚ್ಚುತ್ತದೆ’ ಎಂದು ಮುರಳಿ ಕರ್ಜಗಿ ಸಲಹೆ ನೀಡಿದರು.

‘ರಸ್ತೆಗಳ ಕಾಮಗಾರಿ ಸಂಬಂಧಿಸಿ­ದಂತೆ ವೆಚ್ಚ ಎಷ್ಟು? ಗುತ್ತಿಗೆದಾರರ ಹೆಸರೇನು? ಮತ್ತಿತರ ವಿವರಗಳಿರುವ ಫಲಕಗಳನ್ನು ಆ ಸ್ಥಳದಲ್ಲಿ ಹಾಕಬೇಕು. ಮಾಹಿತಿ ಪಡೆಯಲು ಸಂಪರ್ಕ ಸಂಖ್ಯೆ ನಮೂದಿಸಬೇಕು. ಪ್ರತಿ ವಾರ್ಡ್‌ಗೆ ಮಾಡುತ್ತಿರುವ ವೆಚ್ಚದ ವಿವರ ನಮೂ­ದಿಸಬೇಕು. ಅಗತ್ಯವಿರುವೆಡೆ ಸಾರ್ವ­ಜನಿಕ – ಖಾಸಗಿ ಸಹಭಾಗಿ­ತ್ವದಡಿ (ಪಿಪಿಪಿ) ಕಾಮಗಾರಿ ಕೈಗೆತ್ತಿಕೊಳ್ಳಲು ಪಾಲಿಕೆ ಯೋಜನೆ ರೂಪಿಸಬೇಕು’ ಎಂದು ಕರ್ಜಗಿ ಸಲಹೆ ನೀಡಿದರು.

ಅಕ್ರಮ–ಸಕ್ರಮ ಜಾರಿಯಾಗಲಿ: ‘ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನು­ಮತಿ ಪಡೆಯಲು ತುಂಬಾ ವಿಳಂಬ­ವಾಗುತ್ತಿದೆ. ಇದನ್ನು ತಪ್ಪಿಸ­ಬೇಕು. ಜತೆಗೆ, ಅಕ್ರಮ–ಸಕ್ರಮ ಯೋಜನೆ ಜಾರಿಗೆ ತರಬೇಕು’ ಎಂದು ಅಂದಾನಪ್ಪ ಸಜ್ಜನರ ಹೇಳಿದರು.

ವಲಯ ಕೇಂದ್ರಗಳಿಗೆ ಸಮಿತಿ ರಚನೆಯಾಗಲಿ: ‘ವಲಯ ಕೇಂದ್ರಗಳಲ್ಲಿ ಒಂದೊಂದು ಸಮಿತಿ ರಚನೆ ಮಾಡಿ, ಅಭಿವೃದ್ಧಿ ಕೆಲಸಗಳ ಮೇಲುಸ್ತುವಾರಿ ನೋಡಿ­ಕೊಳ್ಳುವ ವ್ಯವಸ್ಥೆ ಮಾಡಬೇಕು’ ಎಂದು ಹಿರಿಯರಾದ ಡಾ. ಸತ್ತೂರ ಸಲಹೆ ನೀಡಿದರು.

ಮೇಯರ್‌ ಶಿವು ಹಿರೇಮಠ, ‘ಬಜೆಟ್‌ ರೂಪಿಸುವಾಗ ಸಾರ್ವಜನಿಕರ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳ­ಲಾಗುವುದು. ಪಾಲಿಕೆಯ ಆಸ್ತಿ ಸಮೀಕ್ಷೆ ಮಾಡುವುದಕ್ಕೆ ಈಗಾ­ಗಲೇ ಟೆಂಡರ್‌ ಕರೆಯಲಾಗಿದೆ. ಅವಳಿ ನಗರದ ಸಮಗ್ರ ಅಭಿವೃದ್ಧಿಗೆ ₨ 7,500 ಕೋಟಿಯಿಂದ ₨ 8,000ದವರೆಗೆ ಹಣ ಬೇಕಾ­ಗುತ್ತದೆ. ಪಾಲಿಕೆ ಆದಾಯ ಹೆಚ್ಚ­ಬೇಕಾದರೆ, ತೆರಿಗೆ ಸಂಗ್ರಹ ಅನಿ­ವಾರ್ಯ­­ವಾಗುತ್ತದೆ. ಪ್ರತಿ ವರ್ಷ ಶೇ 5ರಂತೆ, ಮೂರು ವರ್ಷದಲ್ಲಿ ಶೇ 15 ರಷ್ಟು ತೆರಿಗೆ ಹೆಚ್ಚಿಸುವ ಯೋಚನೆ ಇದೆ’ ಎಂದರು.

ಪಾಲಿಕೆಯ ತೆರಿಗೆ ನಿಯಂತ್ರಣ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ಮಾತ­ನಾಡಿ, ‘ಪೌರ ಕಾರ್ಮಿಕರ ಹಾಗೂ ಸಿಬ್ಬಂದಿಯ ವೇತನವನ್ನು ಪಾಲಿ­ಕೆಯ ಆದಾಯದಿಂದಲೇ ನೀಡ­ಲಾಗುತ್ತಿದೆ. ತೆರಿಗೆ ಮಿತಿ ಏರಿಸುವುದು ಅನಿವಾರ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.