ADVERTISEMENT

ಬಂಧಿಸುವಂತೆ ಒತ್ತಾಯಿಸಿ ರೈತರ ಮುತ್ತಿಗೆ

ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್‌್; ಆಕ್ರೋಶ– ನವಲಗುಂದದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 10:45 IST
Last Updated 20 ಜುಲೈ 2017, 10:45 IST

ನವಲಗುಂದ:  ಕಳಸಾ ಬಂಡೂರಿ ಹೋರಾಟದಲ್ಲಿ ಭಾಗಿಯಾದ ರೈತರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರಿಂದ ನಿಟ್ಟುಸಿರು ಬಿಟ್ಟಿದ್ದ ರೈತರಿಗೆ, ಈಗ ಮತ್ತೆ ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.ಇದರಿಂದ ರೊಚ್ಚಿಗೆದ್ದ ರೈತರು ಬುಧವಾರ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ‘ನಮ್ಮನ್ನು ಬಂಧಿಸಿ’ ಎಂದು ಒತ್ತಾಯಿಸಿದರು.

‘ಈ ಹಿಂದೆಯೂ ಗಡಿಪಾರು ಮಾಡುವುದಾಗಿ ನೋಟಿಸ್ ನೀಡಿದ್ದ ಸಂದರ್ಭದಲ್ಲಿ ಎಲ್ಲರನ್ನು ಬಂಧಿಸುವಂತೆ ಜೈಲ್ ಭರೊ ಚಳವಳಿ ಹಮ್ಮಿಕೊಂಡಿದ್ದೆವು. ಆಗ ಎಲ್ಲ ಪ್ರಕರಣಗಳನ್ನು ಹಿಂಪಡೆಯುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟಿದ್ದೆವು. ಈಗ ಮತ್ತೆ ಸಮನ್ಸ್‌ ಜಾರಿಮಾಡಿ ಸರ್ಕಾರ ನಮ್ಮನ್ನು ಕೆರಳಿಸಿದೆ’ ಎಂದು ಪಕ್ಷಾತೀತ ಹೋರಾಟ ಸಮಿತಿಯ ಅಧ್ಯಕ್ಷ ಲೋಕನಾಥ ಹೆಬಸೂರ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಒಟ್ಟು 23 ಜನರಿಗೆ ಸಮನ್ಸ್‌ ಜಾರಿಯಾಗಿದ್ದು ಇದರಲ್ಲಿ ಏಳು ಜನ ಮಾತ್ರ ಸ್ವೀಕರಿಸಿದ್ದಾರೆ.

ಮಾತಿನ ಚಕಮಕಿ: ಠಾಣೆಗೆ ಮುತ್ತಿಗೆ ಹಾಕಿದ ವೇಳೆ, ಹೋರಾಟಗಾರರು ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್ ಪಿ.ಎಂ.ದಿವಾಕರ ನಡುವೆ ಮಾತಿನ ಚಕಮಕಿ ನಡೆಯಿತು.
‘ಪೊಲೀಸ್‌ ಇಲಾಖೆಯವರು ರೈತರ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತೆ ಮತ್ತೆ ಪ್ರಕರಣಗಳನ್ನು ಹಾಕುತ್ತಿದ್ದಾರೆ. ಈ ಮೂಲಕ ಹೋರಾಟವನ್ನು ಹತ್ತಿಕ್ಕುವ ಕುತಂತ್ರ ನಡೆಯುತ್ತಿದೆ’ ಎಂದು ರೈತರು ಆರೋಪಿಸಿದರು.

ADVERTISEMENT

ಆಗ ರೈತರನ್ನು ಸಮಾಧಾನಪಡಿಸಿದ ದಿವಾಕರ, ‘ಜೆ.ಎಂ.ಎಫ್. ನ್ಯಾಯಾಲಯದಲ್ಲಿದ್ದ ರೈತರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಆದರೆ ಸೆಷನ್ಸ್‌ ಕೋರ್ಟ್‌ನಲ್ಲಿರುವ 16 ಪ್ರಕರಣಗಳಲ್ಲಿ ಕೆಲ ರೈತರು ಜಾಮೀನು ಪಡೆದುಕೊಂಡಿಲ್ಲ. ಆದ್ದರಿಂದ ಸಮನ್ಸ್‌ ಜಾರಿಯಾಗಿದೆ. ಒಬ್ಬ ರೈತ ಜಾಮೀನು ಪಡೆಯದಿದ್ದರೆ ಪ್ರಕರಣ ಹಿಂಪಡೆಯಲು ಬರುವುದಿಲ್ಲ’ ಎಂದು ತಿಳಿ ಹೇಳಿದರು.

ಆಗ ಪ್ರತಿಕ್ರಿಯಿಸಿದ ರೈತರು ‘ಮೊದಲೇ ನಮಗೆ ಇದರ ಬಗ್ಗೆ ಮಾಹಿತಿ ನೀಡಿದ್ದರೆ ಜಾಮೀನು ಪಡೆಯದ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದೆವು. ಕೋರ್ಟ್‌ಗೆ ಅಲೆದಾಡಿದ ಬಳಿಕ ಈಗ ಮಾಹಿತಿ ಕೊಡುತ್ತಿದ್ದೀರಿ. ನಮ್ಮ ಮೇಲೆ ಇನ್ನೂ ಎಷ್ಟು ಪ್ರಕರಣಗಳು ಬಾಕಿ ಇವೆ ಎಂಬುದರ ಬಗ್ಗೆ ಈಗಲೇ ಮಾಹಿತಿ ಕೊಡಿ’ ಎಂದು ಪಟ್ಟು ಹಿಡಿದರು.

‘ಕಳಸಾ ಬಂಡೂರಿ ಹೋರಾಟಕ್ಕೆ ಸಂಬಂಧಿಸಿದ 16 ಹಾಗೂ ವೈಯಕ್ತಿಕ ದೂರುಗಳ ಮೂರು ಪ್ರಕರಣಗಳು ಬಾಕಿ ಉಳಿದಿವೆ. ಹೋದ ವರ್ಷದ ಮೇ 25ರಂದು ಸಂಸದ ಪ್ರಹ್ಲಾದ ಜೋಶಿ ಅವರು ನ್ಯಾಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಾಗ ರೈತರು ಮುತ್ತಿಗೆ ಹಾಕಿದ ಪ್ರಕರಣವೂ ಸೇರಿದೆ’ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌್ ಮಾಹಿತಿ ನೀಡಿದರು.

ಹೋರಾಟಗಾರರಾದ ಸುಭಾಸಚಂದ್ರಗೌಡ ಪಾಟೀಲ, ದೇವೆಂದ್ರಪ್ಪ ಹಳ್ಳದ, ಶರಣು ಯಮನೂರ, ಬಸಪ್ಪ ಸಂಗಳದ, ಗುರುಸಿದ್ದಪ್ಪ ಕಾಲುಂಗರ, ರವಿ ಪಾಟೀಲ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.