ADVERTISEMENT

ಬತ್ತಿದ ಕೊಳವೆ ಬಾವಿಗೆ ‘ಟ್ವಿನ್‌ ರಿಂಗ್‌’ ಚಿಕಿತ್ಸೆ

ರಾಜ್ಯ–ಹೊರರಾಜ್ಯಗಳಲ್ಲಿ ಟ್ವಿನ್ ರಿಂಗ್ ಮಾದರಿಯಲ್ಲಿ ನೀರು ಉಕ್ಕಿಸುವ ‘ಸಂಕಲ್ಪ’ ಯಶಸ್ಸು

ವಿಕ್ರಂ ಕಾಂತಿಕೆರೆ
Published 23 ಮಾರ್ಚ್ 2017, 8:47 IST
Last Updated 23 ಮಾರ್ಚ್ 2017, 8:47 IST
ಮುಧೋಳದ ಅಮಲಝರಿ ಗ್ರಾಮದಲ್ಲಿ ಟ್ವಿನ್‌ ರಿಂಗ್ ಮಾದರಿಯಲ್ಲಿ ಕೊಳವೆ ಬಾವಿಗೆ ಜಲಮರುಪೂರಣ ವ್ಯವಸ್ಥೆ ಮಾಡಿರುವುದು.
ಮುಧೋಳದ ಅಮಲಝರಿ ಗ್ರಾಮದಲ್ಲಿ ಟ್ವಿನ್‌ ರಿಂಗ್ ಮಾದರಿಯಲ್ಲಿ ಕೊಳವೆ ಬಾವಿಗೆ ಜಲಮರುಪೂರಣ ವ್ಯವಸ್ಥೆ ಮಾಡಿರುವುದು.   

ಹುಬ್ಬಳ್ಳಿ: ಬತ್ತಿಹೋಗಿದ್ದ ಕೊಳವೆಬಾವಿಗಳಿಂದ ಸಂಕಷ್ಟಕ್ಕೀಡಾಗಿದ್ದ ರೈತರು, ‘ಟ್ವಿನ್‌ರಿಂಗ್‌’ ಎಂಬ ಚಿಕಿತ್ಸೆ ಕೊಡಿಸಿ, ಬೆಳೆಗಳಿಗೆ ಜೀವಜಲ ಪಡೆದುಕೊಳ್ಳುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳದ ಅಮಲಝರಿ ಗ್ರಾಮದಲ್ಲಿ ಅಕ್ಕಪಕ್ಕದ ಮೂರು ಕಡೆ ಒಟ್ಟು ಏಳು ಕೊಳವೆಬಾವಿಗಳು ‘ಬರಡು’ ಆಗಿದ್ದವು. ಮತ್ತಷ್ಟು ಕೊಳವೆಬಾವಿಗಳನ್ನು ಕೊರೆಸಿ ಕೈಸುಟ್ಟುಕೊಳ್ಳಲು ರೈತರು ಸಜ್ಜಾಗುತ್ತಿದ್ದಂತೆ ಅವರಿಗೆ ಹುಬ್ಬಳ್ಳಿಯ ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಬಗ್ಗೆ ಮಾಹಿತಿ ಲಭಿಸಿತು.

ಸಂಸ್ಥೆ ಸಹಾಯದಿಂದ ಜಲಮರುಪೂರಣ ಮಾಡಿದ ನಂತರ ಈ ಹೊಲಗಳಲ್ಲಿ ಈಗ ಹಸಿರು ನಳನಳಿಸುತ್ತಿದೆ. ಈ ಏಳು ಕೊಳವೆಬಾವಿಗಳ ಪೈಕಿ ನಾಲ್ಕರಲ್ಲಿ ಟ್ವಿನ್ ರಿಂಗ್ ಮಾದರಿ ಬಳಸಿ ಜಲ ಮರುಪೂರಣ ಮಾಡಲಾಗಿತ್ತು.

ಜಲಮರುಪೂರಣಕ್ಕೆ ಸಂಬಂಧಿಸಿ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಹೆಸರು ಮಾಡಿರುವ ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆ ಒಂದು ವರ್ಷದಿಂದ ಈ ಹೊಸ ಮಾದರಿ ಬಳಸುತ್ತಿದೆ.

‘ಬತ್ತಿದ ಕೊಳವೆ ಬಾವಿಗಳ ಬಳಿ ತಗ್ಗು ತೆಗೆದು ಜಲ್ಲಿ, ಮರಳು ಇತ್ಯಾದಿಗಳನ್ನು ತುಂಬಿಸಿ ಗೋಡೆ ಕಟ್ಟಿ ಮಾಡುತ್ತಿದ್ದ ಹಳೆಯ ಮಾದರಿಗೆ ₹ 40,000ದಿಂದ ₹ 45,000 ವೆಚ್ಚ ಆಗುತ್ತಿದ್ದರೆ, ಹೊಸ ಮಾದರಿಗೆ ತಗಲುವ ವೆಚ್ಚ ₹ 15,000ರಿಂದ ₹ 18,000 ಮಾತ್ರ’ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ಸಿಕಂದರ್ ಮೀರಾನಾಯಕ್‌.

‘ಹೊಸ ಮಾದರಿ ಅಳವಡಿಸಲು ಕೇವಲ ಒಂದು ದಿನದ ಕೆಲಸ ಹಿಡಿಯುತ್ತದೆ. ಕಡಿಮೆ ಸಂಖ್ಯೆಯ ಕೂಲಿಯಾಳುಗಳನ್ನು ಬಳಸಿ ಕೆಲಸ ಮಾಡಬಹುದಾಗಿದೆ. ಕಡಿಮೆ ಪ್ರಮಾಣದ ಉಸುಕು ಮತ್ತು ಸೊಳ್ಳೆ ಪರದೆಯನ್ನು ಈ ಮಾದರಿಗೆ ಬಳಸಲಾಗುತ್ತದೆ. ಈ ಎಲ್ಲ ಕಾರಣಗಳಿಂದ ಇದಕ್ಕೆ ತಗಲುವ ವೆಚ್ಚ ಕಡಿಮೆ’ ಎಂದು ಅವರು ವಿವರಿಸುತ್ತಾರೆ.

‘ರಾಜ್ಯದ ವಿವಿಧ ಕಡೆಗಳಲ್ಲಿ ಅನೇಕ ರೈತರಿಂದ ಬೇಡಿಕೆ ಬಂದಿದೆ. ಆಂಧ್ರಪ್ರದೇಶ, ಉತ್ತರ ಪ್ರದೇಶದಲ್ಲೂ ಈ ಮಾದರಿ ಬಳಸಿ ಕೊಳವೆಬಾವಿಗಳಿಗೆ ಜೀವ ತುಂಬಲಾಗಿದೆ. ರಾಜ್ಯದ ಪ್ರಮುಖ ತಂತ್ರಜ್ಞಾನ ಕಂಪೆನಿಯೊಂದರ ವ್ಯಾಪ್ತಿಯ ಐದು ಸಾವಿರ ಕೊಳವೆಬಾವಿಗಳನ್ನು ಮರುಪೂರಣಗೊಳಿಸುವ ಯೋಜನೆ ಸದ್ಯದಲ್ಲೇ ಆರಂಭಗೊಳ್ಳಲಿದೆ.

ದೇಶಪಾಂಡೆ ಫೌಂಡೇಷನ್‌ 350 ಕೊಳವೆಬಾವಿಗಳಿಗೆ ಜಲಮರುಪೂರಣ ಮಾಡುವ ಯೋಜನೆ ಹಮ್ಮಿಕೊಂಡಿದ್ದು ಏಪ್ರಿಲ್ ಮೊದಲ ವಾರದಲ್ಲಿ ಇದು ಆರಂಭಗೊಳ್ಳಲಿದೆ’ ಎಂದು ಅವರು ತಿಳಿಸಿದರು.

ಹೆಚ್ಚುವರಿ ಬೆಳೆ ತೆಗೆದಿದ್ದೇನೆ:  ಹಿಂದೆಲ್ಲ ಅಕ್ಟೋಬರ್‌ ತಿಂಗಳಲ್ಲಿ ಕೊಳವೆಬಾವಿ ಬತ್ತಿ ಹೋಗುತ್ತಿತ್ತು. ಅಲ್ಲಿಗೆ ವರ್ಷದ ಬೆಳೆಯೂ ಮುಗಿಯುತ್ತಿತ್ತು. ಜಲಮರುಪೂರಣ ಮಾಡಿದ ನಂತರ ಈ ಬಾರಿ ಅಕ್ಟೋಬರ್ ನಂತರವೂ ಕೊಳವೆಬಾವಿಯಲ್ಲಿ ನೀರು ಲಭಿಸಿತು. ಆದ್ದರಿಂದ ಹೆಚ್ಚುವರಿ ಬೆಳೆ ತೆಗೆಯಲು ಸಾಧ್ಯವಾಯಿತು ಎನ್ನುತ್ತಾರೆ ಮುಧೋಳದ ಅಮರನಾಥ ಆರ್‌.ಗೌಡರ

ಏನಿದು ಟ್ವಿನ್‌ ರಿಂಗ್ ಪದ್ಧತಿ?
ಕೊಳವೆ ಬಾವಿ ಮತ್ತು ಅದರ ಪಕ್ಕದಲ್ಲಿ ಎರಡು ಕಡೆ ಸಿಮೆಂಟ್‌ ರಿಂಗ್‌ಗಳ ಜಾಲ ನಿರ್ಮಿಸಿ ನೀರು ಇಂಗಿಸುವ ಪದ್ಧತಿ ಇದು. ಎಂಟು ಅಡಿ ಆಳದಲ್ಲಿ ತಲಾ ಎಂಟು ರಿಂಗ್‌ಗಳನ್ನು ಇಳಿಸಲಾಗುತ್ತದೆ. ಕೊಳವೆಬಾವಿಯ ಕೇಸಿಂಗ್ ಪೈಪ್‌ಗೆ ಸಣ್ಣ ತೂತುಗಳನ್ನು ಕೊರೆದು ಸೊಳ್ಳೆ ಪರದೆ ಸುತ್ತಲಾಗುತ್ತದೆ. ರಿಂಗ್‌ಗಳ ಸಮೀಪದಲ್ಲೇ ಮಳೆ ನೀರು ಸಂಗ್ರಹಿಸುವ ಹೊಂಡ ತೋಡಲಾಗುತ್ತದೆ.

ಈ ಹೊಂಡದಿಂದ ಒಂದು ರಿಂಗ್‌ಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಎರಡೂ ರಿಂಗ್‌ಗಳ ಸುತ್ತ ಉಸುಕು ಮತ್ತು ಸಣ್ಣ ಜಲ್ಲಿ ಹಾಕಲಾಗುತ್ತದೆ. ಹೊಂಡದಿಂದ ಬಂದ ನೀರು ಮೊದಲ ರಿಂಗ್‌ನ ಸುತ್ತ ನಿಂತು ಸ್ವಚ್ಛಗೊಂಡು ಕೇಸಿಂಗ್ ಪೈಪ್‌ನ ಸುತ್ತ ಇರುವ ರಿಂಗ್ ಮೂಲಕ ಬಾವಿಯ ಒಳಗೆ ಹೋಗುತ್ತದೆ. ಇದರಿಂದ ಅಂತರ್ಜಲ ಹೆಚ್ಚುತ್ತದೆ.

ADVERTISEMENT

*
ಟ್ವಿನ್ ರಿಂಗ್‌ ಪದ್ಧತಿಯಿಂದ ಕಡಿಮೆ ವೆಚ್ಚದಲ್ಲಿ ಕೊಳವೆ ಬಾವಿಗಳ ಮರುಪೂರಣ ಮಾಡಲಾಗುತ್ತದೆ. ಹೊರರಾಜ್ಯಗಳಲ್ಲೂ ಇದಕ್ಕೆ ಉತ್ತಮ ಬೇಡಿಕೆ ಇದೆ.
-ಸಿಕಂದರ್ ಮೀರಾನಾಯಕ್‌,
ಸಂಕಲ್ಪ ಸಂಸ್ಥೆಯ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.