ADVERTISEMENT

‘ಬಸ್‌ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:01 IST
Last Updated 16 ಏಪ್ರಿಲ್ 2017, 10:01 IST

ಧಾರವಾಡ: ಅವಳಿ ನಗರದ ನಡುವೆ ನಿರ್ಮಾಣಗೊಳ್ಳುತ್ತಿರುವ ಬಿಆರ್‌ಟಿಎಸ್‌ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಹಳೇ ಬಸ್‌ ನಿಲ್ದಾಣದ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಪಟ್ಟಣ ರಸ್ತೆ ಸಾರಿಗೆ ನಿರ್ದೇಶನಾಲಯದ ಆಯುಕ್ತ ದರ್ಪಣ ಜೈನ್‌ ಅವರೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ನಿರ್ಮಾಣ ಹಂತದಲ್ಲಿರುವ ಹಳೇ ಬಸ್ ನಿಲ್ದಾಣಕ್ಕೆ ಅಧಿಕಾರಿಗಳೊಂದಿಗೆ ಈಚೆಗೆ ಭೇಟಿ ನೀಡಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಮಗಾರಿ ಆರಂಭವಾದ ದಿನದಿಂದ ವಿಳಂಬವಾಗುತ್ತಲೇ ಇದೆ. ಹೀಗಾಗಿ ಈ ಹಿಂದಿನ ಗುತ್ತಿಗೆದಾರನಿಗೆ ನೀಡಿದ್ದ ಟೆಂಡರ್‌ ರದ್ದುಗೊಳಿಸಿ, ಬೇರೆಯವರಿಗೆ ಕೆಲಸ ನೀಡಲಾಗಿತ್ತು. ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕಾಲಾವಕಾಶ ನೀಡಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇಲ್ಲ. ಹೀಗಾಗಿ ಈ ಅವಧಿಯನ್ನು ಸೆಪ್ಟೆಂಬರ್‌ವರೆಗೂ ವಿಸ್ತರಿಸಲಾಗಿದೆ. ಅಷ್ಟೊರಳಗೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ’ ಎಂದರು.

‘ದರ್ಪಣ್ ಜೈನ್ ಅವರೊಂದಿಗೆ ಚರ್ಚೆ ಮಾಡಲಿದ್ದು, ಕಾಮಗಾರಿಗೆ ಬೇಕಾದ ಅಗತ್ಯ ಸಹಕಾರ, ಸೌಲಭ್ಯ ಹಾಗೂ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗದಂತೆ ಮನವಿ ಮಾಡಿಕೊಳ್ಳಲಾಗುವುದು. ಬಸ್‌ ನಿಲ್ದಾಣ ಕಾಮಗಾರಿಯಿಂದ ಜನರಿಗೆ ಹಾಗೂ ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆಯಾಗಿದೆ ಎಂದರು.

ADVERTISEMENT

‘ಈ ಹಿಂದೆ ಬಿಆರ್‌ಟಿಎಸ್‌ ರೂಪಿಸಿದ್ದ ಯೋಜನೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಇರಲಿಲ್ಲ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಕನಿಷ್ಠ ನಾಲ್ಕು ಚಕ್ರಗಳ 15 ಹಾಗೂ 250 ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಕನಿಷ್ಠ ಒಂದು ಸಾವಿರ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು ಎಂದು ಆಯುಕ್ತರ ಗಮನ ಸೆಳೆಯಲಾಗುವುದು’ ಎಂದು ಬೆಲ್ಲದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.