ADVERTISEMENT

ಬೆಳಗಾವಿಯಲ್ಲಿ ಅತ್ಯಧಿಕ, ಉ.ಕನ್ನಡದಲ್ಲಿ ಅತಿ ಕಡಿಮೆ

ಹೆಸ್ಕಾಂ ವ್ಯಾಪ್ತಿಯಲ್ಲಿ ಒಂದೇ ವರ್ಷದಲ್ಲಿ 6,779 ವಿದ್ಯುತ್‌ ಕಳ್ಳತನ, ದುರುಪಯೋಗ ಪ್ರಕರಣಗಳು ಪತ್ತೆ

ಸಿದ್ದು ಆರ್.ಜಿ.ಹಳ್ಳಿ
Published 27 ಜುಲೈ 2017, 6:10 IST
Last Updated 27 ಜುಲೈ 2017, 6:10 IST
ಬೆಳಗಾವಿಯಲ್ಲಿ ಅತ್ಯಧಿಕ, ಉ.ಕನ್ನಡದಲ್ಲಿ ಅತಿ ಕಡಿಮೆ
ಬೆಳಗಾವಿಯಲ್ಲಿ ಅತ್ಯಧಿಕ, ಉ.ಕನ್ನಡದಲ್ಲಿ ಅತಿ ಕಡಿಮೆ   

ಹುಬ್ಬಳ್ಳಿ: ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿ (ಹೆಸ್ಕಾಂ) ಜಾಗೃತದಳವು 2016–17ನೇ ಸಾಲಿನಲ್ಲಿ ವಿದ್ಯುತ್‌ ಕಳ್ಳತನ ಮತ್ತು ದುರುಪಯೋಗ ಸೇರಿದಂತೆ ಒಟ್ಟು 6,779 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ₹ 12.31 ಕೋಟಿ ದಂಡ ವಿಧಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 2,358 ಪ್ರಕರಣ ದಾಖಲಾಗಿದ್ದು, ಹೆಸ್ಕಾಂ ವ್ಯಾಪ್ತಿಯಲ್ಲೇ ಅತಿ ಹೆಚ್ಚು ವಿದ್ಯುತ್‌ ಕಳ್ಳತನ ಮತ್ತು ದುರುಪಯೋಗ ಪ್ರಕರಣಗಳು ದಾಖಲಾದ ಜಿಲ್ಲೆಯಾಗಿದೆ. ಬಾಗಲಕೋಟೆ (1,234 ಪ್ರಕರಣ) ಮತ್ತು ವಿಜಯಪುರ (791 ಪ್ರಕರಣ) ಜಿಲ್ಲೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ (331) ಅತಿ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ.

2014–15ನೇ ಸಾಲಿನಿಂದ ಇಲ್ಲಿಯವರೆಗೂ ಕ್ರಮವಾಗಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲೇ ಅತಿ ಹೆಚ್ಚು ವಿದ್ಯುತ್‌ ಕಳ್ಳತನ ಮತ್ತು ದುರುಪಯೋಗವಾಗುತ್ತಿದೆ ಎಂಬುದನ್ನು ಅಂಕಿ ಅಂಶಗಳು ಸಾಬೀತುಪಡಿಸುತ್ತವೆ.

ADVERTISEMENT

ಏರುತ್ತಿರುವ ಪ್ರಕರಣಗಳ ಸಂಖ್ಯೆ: ಹೆಸ್ಕಾಂ ವ್ಯಾಪ್ತಿಯಲ್ಲಿ ಜಾಗೃತದಳವು 2014–15ನೇ ಸಾಲಿನಲ್ಲಿ 5,579 ಪ್ರಕರಣಗಳಲ್ಲಿ ₹ 11.99 ಕೋಟಿ ದಂಡ ಹಾಗೂ 2015–16ನೇ ಸಾಲಿನಲ್ಲಿ 6,155 ಪ್ರಕರಣಗಳಲ್ಲಿ ₹ 11.99 ಕೋಟಿ ದಂಡ ವಿಧಿಸಿತ್ತು.

ಆದರೆ, ಈ ಬಾರಿ (2016–17) 2,486 ವಿದ್ಯುತ್‌ ಕಳ್ಳತನ, 4,293 ವಿದ್ಯುತ್‌ ದುರುಪಯೋಗ ಸೇರಿದಂತೆ ಒಟ್ಟು 6,779 ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು ₹ 12.31 ಕೋಟಿ ದಂಡ ಹಾಕಿದೆ. ಅಂದರೆ, ಕಳೆದ ಎರಡು ವರ್ಷಗಳಿಗಿಂತ ಈ ಸಾಲಿನಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗಿವೆ.  ತಪ್ಪಿತಸ್ಥರ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಗಿದೆ.

ವಿದ್ಯುತ್‌ ಮೀಟರ್‌ಗಳಲ್ಲಿ ಕೈಚಳಕ: ‘ಮನೆಗಳಲ್ಲಿರುವ ವಿದ್ಯುತ್‌ ಮೀಟರ್‌ಗಳನ್ನು ವಿರೂಪಗೊಳಿಸುವುದು, ನಿಧಾನವಾಗಿ ಓಡುವಂತೆ ಮಾಡುವುದು, ಹೆಚ್ಚು ವಿದ್ಯುತ್‌ ಬಳಸಿದರೂ, ಕಡಿಮೆ ಬಿಲ್‌ ಬರುವಂತೆ ಮಾಡುವುದು.... ಮುಂತಾದ ಕೃತ್ಯಗಳನ್ನು ಸಾರ್ವಜನಿಕರು ಮಾಡುತ್ತಾರೆ.

ಮನೆಗಳಿಗೆ ಸಂಪರ್ಕ ತೆಗೆದುಕೊಂಡು ಅದನ್ನು ಅಂಗಡಿ, ಹೋಟೆಲ್‌ಗಳಿಗೆ ಬಳಸುವುದು, ಅನುಮತಿ ಇಲ್ಲದೆ ವಿದ್ಯುತ್‌ ತಂತಿಯಿಂದ ನೇರವಾಗಿ ಮನೆಗಳಿಗೆ ಸಂಪರ್ಕ ಪಡೆಯುವುದು ಮುಂತಾದ ಕೃತ್ಯಗಳಿಂದ ಹೆಸ್ಕಾಂಗೆ ಹೆಚ್ಚು ನಷ್ಟವಾಗುತ್ತದೆ.

‘ನಿರಂತರ ಜ್ಯೋತಿ’ ವಿದ್ಯುತ್‌ ಸಂಪರ್ಕವನ್ನು ಕೆಲವು ರೈತರು ಪಂಪ್‌ಸೆಟ್‌ಗಳಿಗೆ ಬಳಸುತ್ತಾರೆ. ಇದರಿಂದ ಅನೇಕ ಫಲಾನುಭವಿಗಳಿಗೆ ತೊಂದರೆಯಾಗುತ್ತದೆ. ಈ ಎಲ್ಲ ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದೇವೆ’ ಎನ್ನುತ್ತಾರೆ ಹೆಸ್ಕಾಂ ಜಾಗೃತದಳದ ಪೊಲೀಸ್‌ ಅಧೀಕ್ಷಕ ಜಿ.ಎಂ. ದೇಸೂರ.

‘ಬೀದಿದೀಪ, ನೀರಿನ ಸಂಪರ್ಕ, ಸಾರ್ವಜನಿಕ ಕಾರ್ಯಕ್ರಮಗಳು ಮುಂತಾದ ಉದ್ದೇಶಗಳಿಗೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ ಸಿಬ್ಬಂದಿಯೂ ಕೆಲವೊಮ್ಮೆ ವಿದ್ಯುತ್‌ ದುರುಪಯೋಗ ಮಾಡುತ್ತಾರೆ. ಇದನ್ನು ಕೂಡ ಪತ್ತೆ ಹಚ್ಚಿದ್ದೇವೆ. ಗರಿಷ್ಠ ಒಂದು ವರ್ಷದ ದರವನ್ನು ವಿಧಿಸುತ್ತೇವೆ.

ವಿದ್ಯುತ್‌ ಬಳಸಿರುವ ನಿಖರ ದಾಖಲೆ ಕೊಟ್ಟರೆ ದಂಡ ಕಡಿಮೆ ಮಾಡುತ್ತೇವೆ. ಕೈಗಾರಿಕೆಗಳಲ್ಲಿ ಎಲೆಕ್ಟ್ರಾನಿಕ್‌ ಮೀಟರ್‌ ಅಳವಡಿಸಿರುವುದರಿಂದ ಶೇ 99ರಷ್ಟು ವಿದ್ಯುತ್‌ ಕಳ್ಳತನ ಮತ್ತು ದುರುಪಯೋಗ ಇಲ್ಲವೆಂದೇ ಹೇಳಬಹುದು’ ಎಂದು  ದೇಸೂರ ತಿಳಿಸಿದರು.

* * 

ವಿದ್ಯುತ್‌ ಕಳ್ಳತನ ಪ್ರಕರಣಗಳಲ್ಲಿ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ. ಹಾಗಾಗಿ, ಜನರು ವಿದ್ಯುತ್‌ ಅನ್ನು ದುರುಪಯೋಗ ಮಾಡಿಕೊಳ್ಳಬಾರದು
ಜಿ.ಎಂ. ದೇಸೂರ
ಎಸ್ಪಿ, ಹೆಸ್ಕಾಂ ಜಾಗೃತದಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.