ADVERTISEMENT

ಬೆಳೆ ಸಂರಕ್ಷಣೆಗೆ ನೂತನ ತಂತ್ರಜ್ಞಾನ ‘ಇ–ಸ್ಯಾಪ್‌’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 6:21 IST
Last Updated 23 ಸೆಪ್ಟೆಂಬರ್ 2017, 6:21 IST
ಪ್ರಾಧ್ಯಾಪಕ ಡಾ.ಪ್ರಭುರಾಜ್‌
ಪ್ರಾಧ್ಯಾಪಕ ಡಾ.ಪ್ರಭುರಾಜ್‌   

ಧಾರವಾಡ: ಆಧುನಿಕ ಕೃಷಿಯಲ್ಲಿ ಕೀಟ, ರೋಗಗಳ ಹಾವಳಿ ಮತ್ತು ಅವುಗಳ ಹತೋಟಿ ರೈತರಿಗೆ ಬಹುದೊಡ್ಡ ಸವಾಲಾಗಿದ್ದು, ಇದನ್ನು ಸುಲಭವಾಗಿ ನಿವಾರಿಸಲು ರಾಯಚೂರು ಕೃಷಿ ವಿಶ್ವವಿದ್ಯಾಲಯವು ನವೀನ ರೀತಿಯ ಸಾಧನ ಮತ್ತು ತಂತ್ರಾಂಶವನ್ನೊಳಗೊಂಡ ‘ಇ–ಸ್ಯಾಪ್‌’ ತಂತ್ರಜ್ಞಾನವನ್ನು ಆವಿಷ್ಕರಿಸಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಕೃಷಿ ಮೇಳದಲ್ಲಿ ‘ಇ–ಸ್ಯಾಪ್‌’ ತಂತ್ರಜ್ಞಾನದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.

‘ಇ–ಸ್ಯಾಪ್‌’ (ಇ–ಸಲ್ಯೂಷನ್ಸ್‌ ಅಗೆನೆಸ್ಟ್‌ ಅಗ್ರಿಕಲ್ಚರಲ್‌ ಪೆಸ್ಟ್‌) ತಂತ್ರಜ್ಞಾನವು ಬೆಳೆಗಳಿಗೆ ಬರುವ ಕೀಟ, ರೋಗ, ಪೋಷಕಾಂಶ ಕೊರತೆ ಮತ್ತು ಕಳೆ ನಿರ್ವಹಣೆಗೆ ಸಕಾಲದಲ್ಲಿ ಸಂರಕ್ಷಣೆ ಒದಗಿಸುವ ನವೀನ ತಂತ್ರಜ್ಞಾನವಾಗಿದೆ ಎಂದು ಪ್ರಧಾನ ಸಂಶೋಧಕ, ರಾಯಚೂರು ಕೃಷಿ ಮಹಾವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಪ್ರಭುರಾಜ್‌. ಎ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇ–ಸ್ಯಾಪ್‌’ ತಂತ್ರಜ್ಞಾನವನ್ನು ಈಗಾಗಲೇ ರಾಯಚೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಅಳವಡಿಸಲಾಗಿದ್ದು, ಭತ್ತ, ಹತ್ತಿ, ತೊಗರಿ, ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಣಸಿನಕಾಯಿ, ಗೋವಿನಜೋಳ, ಜೋಳ, ಕಬ್ಬು, ದಾಳಿಂಬೆ, ಮಾವು, ತೆಂಗು, ನಿಂಬೆ, ಕಿತ್ತಳೆ, ಬೆಂಡೆ, ಬದನೆ, ಹೆಸರು, ಉದ್ದು, ಸೊಯಾ ಅವರೆ, ಬಾಳೆ ಮತ್ತು ಟೊಮೆಟೊ ಬೆಳೆಗಳಿಗೆ ಬರುವ ಕೀಟ, ರೋಗ ಮತ್ತು ಪೋಷಕಾಂಶದ ಕೊರತೆಗೆ ಪರಿಹಾರವನ್ನು ನೀಡಲಾಗುತ್ತದೆ ಎಂದರು.

ಈ ವಿನೂತನ ತಂತ್ರಜ್ಞಾನದ ಸಹಾಯದಿಂದ ಇದುವರೆಗೆ ಸುಮಾರು 87,500 ರೈತರು ಲಾಭವನ್ನು ಪಡೆದಿದ್ದಾರೆ. ಜೊತೆಗೆ ಧಾರವಾಡ, ಬೆಂಗಳೂರು, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಶೀಘ್ರದಲ್ಲೇ ರಾಜ್ಯದಾದ್ಯಂತ ವಿಸ್ತರಿಸಲು ಕೃಷಿ ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.

ಪ್ರಾಯೋಗಿಕ ಜಾರಿ ಡಿಜಿಟಲ್‌ ಕೃಷಿ ಕಾರ್ಯಕ್ರಮದಡಿ ‘ಇ–ಸ್ಯಾಪ್‌’ ತಂತ್ರಜ್ಞಾನವನ್ನು ಧಾರವಾಡ ಜಿಲ್ಲೆಯ ನವಲಗುಂದ ಮತ್ತು ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲ್ಲೂಕಿನಲ್ಲಿ ಆರು ತಿಂಗಳ ಈಚೆಗೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ಡಾ.ಪ್ರಭುರಾಜ್‌.ಎ ತಿಳಿಸಿದರು.

ಪ್ರತಿ ತಾಲ್ಲೂಕಿನಲ್ಲಿ 20 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಒಂದು ಗ್ರಾಮ ಪಂಚಾಯಿತಿಗೆ 200 ರೈತರಂತೆ ಪ್ರತಿ ತಾಲ್ಲೂಕಿಗೆ ನಾಲ್ಕು ಸಾವಿರ ರೈತರನ್ನು ನೋಂದಣಿ ಮಾಡಲಾಗಿದೆ ಎಂದರು.

ಪ್ರತಿ ಪಂಚಾಯಿತಿಗೆ ಒಬ್ಬ ‘ರೈತ ಮಿತ್ರ’ರನ್ನು ನಿಯೋಜಿಸಲಾಗಿದೆ. ಇವರು ‘ಇ–ಸ್ಯಾಪ್‌’ ತಂತ್ರಜ್ಞಾನ ಇರುವ ಟ್ಯಾಬ್‌ ಮೂಲಕ ರೈತರ ಹೆಸರನ್ನು ನೋಂದಾಯಿಸಿಕೊಂಡು ಅಗತ್ಯ ಮಾಹಿತಿ, ಪರಿಹಾರ ಕಲ್ಪಿಸುತ್ತಿದ್ದಾರೆ ಎಂದರು.

’ಇ–ಸ್ಯಾಪ್‌’ ಪ್ರಾಯೋಗಿಕ ಜಾರಿಗೆ ರಾಜ್ಯ ಸರ್ಕಾರವು ₹ 5 ಕೋಟಿ ಅನುದಾನ ನೀಡಿದೆ. ರಾಜ್ಯದ 60 ಕೃಷಿ ಅಧಿಕಾರಿಗಳಿಗೆ ಈಗಾಗಲೇ ಈ ತಂತ್ರಜ್ಞಾನ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದಿರುವ ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳಿಗೆ ಮಾಹಿತಿ, ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.