ADVERTISEMENT

ಭರದಿಂದ ನಡೆಯುತ್ತಿದೆ ಮಳಿಗೆ ನಿರ್ಮಾಣ ಕಾರ್ಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2017, 5:32 IST
Last Updated 29 ಆಗಸ್ಟ್ 2017, 5:32 IST

ಧಾರವಾಡ: ಕಳೆದ ಬುಧವಾರ ಮುಂದೂಡಲಾದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಅಪೂರ್ಣಗೊಂಡಿದ್ದ ಮಳಿಗೆಗಳ ಕಾರ್ಯ ಭರದಿಂದ ಸಾಗಿದೆ.

ಜಿಲ್ಲಾ ಪಂಚಾಯ್ತಿಗೆ ಸೇರಿದ ಮಳಿಗೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳದಿದ್ದರೂ, ಕಾಮಗಾರಿ ಪೂರ್ಣಗೊಂಡಿದೆ ಎಂದು ಪ್ರಮಾಣ ಪತ್ರ ನೀಡಿ ₹ 18 ಲಕ್ಷ ಹಣ ಪಾವತಿಯಾಗಿರುವ ಕುರಿತು ಕಳೆದ ಬುಧವಾರ (ಆ. 23) ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಆರೋಪ ಮಾಡಿದ್ದರು. ಚರ್ಚೆ ಸಂಜೆಯವರೆಗೂ ನಡೆದಿದ್ದರಿಂದ ಈ ವಿಷಯ ಕುರಿತು ಚರ್ಚಿಸಲು ಸಭೆಯನ್ನು ಸೋಮವಾರ (ಅ. 28)ಕ್ಕೆ ಮುಂದೂಡಲಾಗಿತ್ತು.

ನಂತರ ಕಾಮಗಾರಿ ಚುರುಕು ಕಂಡಿತು. ಗಣೇಶ ಹಬ್ಬದ ದಿನವಾದ ಶುಕ್ರವಾರವೂ ಬಿಡುವಿಲ್ಲದೇ ಮಳಿಗೆ ನಿರ್ಮಾಣ ಕಾರ್ಯ ನಡೆದಿತ್ತು. ಸೋಮವಾರವೂ ಮಳಿಗೆಗಳಿಗೆ ಉಪಕರಣಗಳನ್ನು ಜೋಡಿಸುವ ಅಂತಿಮ ಹಂತದ ಕಾರ್ಯ ಸಾಗಿತ್ತು. ಇದೇ ವೇಳೆ ಕಾರಣಾಂತರಗಳಿಂದ ಸೋಮವಾರ ನಡೆಯಬೇಕಾದ ಸಾಮಾನ್ಯ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಚೈತ್ರಾ, ‘ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವುದಾಗಿ ಜಿಲ್ಲಾ ಪಂಚಾಯ್ತಿ ಕಾಂಗ್ರೆಸ್‌ ಸದಸ್ಯರು ತಿಳಿಸಿದರು. ಹೀಗಾಗಿ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ’ ಎಂದರು.

‘ಮಳಿಗೆ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ಕಾಮಗಾರಿ ಚುರುಕುಗೊಂಡಿದೆ. ಇದು ಅಧಿಕಾರಿ ವರ್ಗದ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಈ ವಿಷಯ ಚರ್ಚೆ ಆಗದ ಹೊರತು ಉದ್ಘಾಟನೆಗೆ ಅವಕಾಶವಿಲ್ಲ. ಇಂಥ ಇನ್ನೂ ಹಲವು ವಿಷಯಗಳು ಇವೆ’ ಎಂದು ಹೇಳಿದರು.

ಈ ನಡುವೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯನ್ನೂ ಬುಧವಾರ ಮುಂದೂಡಲಾಯಿತು. ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಅವರ ಸೂಚನೆಯಂತೆ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎಂ.ರುದ್ರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.