ADVERTISEMENT

ಭೂಮಿ ಉಳಿಸಲು ಪ್ಲಾಸ್ಟಿಕ್ ನಿರ್ಮೂಲನೆಗೆ ಪಣ

ವಿಶ್ವ ಭೂ ದಿನಾಚರಣೆ ಅಂಗವಾಗಿ ‘ಶಕ್ತಿಗಾಗಿ ಜಾಗೃತಿ’ ಜಾಥಾ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 8:45 IST
Last Updated 23 ಏಪ್ರಿಲ್ 2018, 8:45 IST

ಧಾರವಾಡ: ‘ಭೂಮಿಯ ಇಂದಿನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅದಕ್ಕೆ ಕಾರಣವಾಗಿರುವ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಮೂಲಕ ಭೂಮಿ ಉಳಿಸೋಣ ಎಂಬ ವಾಗ್ದಾನವನ್ನು ಪ್ರತಿಯೊಬ್ಬರೂ ಮಾಡಬೇಕು’ ಎಂದು ವೈದ್ಯ ಡಾ. ಸಂಜೀವ ಕುಲಕರ್ಣಿ ಹೇಳಿದರು.

ಸೆಲ್ಕೋ ಪ್ರತಿಷ್ಠಾನ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಕರ್ನಾಟಕ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಹಮ್ಮಿಕೊಂಡಿದ್ದ ‘ಶಕ್ತಿಗಾಗಿ ಜಾಗೃತಿ’ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ಲಾಸ್ಟಿಕ್ ನಿರ್ಮೂಲನೆ ಎಂಬ ಘೋಷವಾಕ್ಯವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮನುಷ್ಯನಿಗೆ ಬದುಕಲು ಇರುವುದೊಂದೆ ಭೂಮಿ. ನಗರೀಕರಣ, ಕೈಗಾರಿಕರಣ, ಅರಣ್ಯ ನಾಶದಿಂದ ಭೂಮಿ ತನ್ನ ನೈಜ ಸ್ವರೂಪ ಕಳೆದುಕೊಳ್ಳುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಭೂಮಿಯನ್ನು ರಕ್ಷಿಸುವರೇ ಇಲ್ಲವಾಗಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಇನ್ನೂ ಕಾಲ ಮಿಂಚಿಲ್ಲ. ಈಗಲೇ ಎಚ್ಚೆತ್ತುಕೊಂಡು ಭೂಮಿಗೆ ಮಾರಕವಾಗಿರುವ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಿದರೆ ನಮ್ಮ ಮುಂದಿನ ಪೀಳಿಗೆ ಬದುಕುಳಿಯುತ್ತದೆ’ ಎಂದರು.

‘ಪ್ರತಿ ವರ್ಷ ಏ.22ರಂದು ವಿಶ್ವ ಭೂಮಿ ದಿನಾಚರಣೆ ಆಯೋಜಿಸಲಾಗುತ್ತದೆ. ಈ ವರ್ಷ ಪ್ಲಾಸ್ಟಿಕ್‌ ನಿರ್ಮೂಲನೆ ಮಾಡಿ ಭೂಮಿ ಉಳಿಸುವ ಸಂಕಲ್ಪ ತೊಡಲಾಗಿದೆ. ಸಾಧ್ಯವಾದಷ್ಟು ಗಿಡಮರಗಳನ್ನು ಬೆಳೆಸಬೇಕು’ ಎಂದು ಹೇಳಿದರು.

ಜಾಥಾದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯ ವ್ಯವಸ್ಥಾಪಕರಾದ ಪ್ರಸನ್ನ ಹೆಗಡೆ, ಸುರೇಶ್ ಸಾವಳಗಿ, ಲಿನೆಟ್ ಡಿ‌ಸೆಲ್ವಾ ಪಾಲ್ಗೊಂಡಿದ್ದರು. ಪರಿಸರ ಪ್ರಿಯರು, ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪರಿಸರ ಜಾಗೃತಿ ಮೂಡಿಸುತ್ತ ಹೆಜ್ಜೆ ಹಾಕಿದರು. ಕೆಸಿಡಿಯಿಂದ ಆರಂಭವಾಗಿ ಆಲೂರು ವೆಂಕಟರಾವ್ ವೃತ್ತ, ಮುಖ್ಯ ಅಂಚೆ ಕಚೇರಿ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದ ಕಾರ್ಗಿಲ್ ಸ್ತೂಪಕ್ಕೆ ಬಂದು ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.