ADVERTISEMENT

ಮನೆಯವರೇ ಗಟಾರ ಸ್ವಚ್ಛಗೊಳಿಸಿದರು...

ಶ್ರೀಕಾಂತ ಜಮನಾಳ ಪ್ರತಿನಿಧಿಸುವ 3ನೇ ವಾರ್ಡ್‌ ವ್ಯಾಪ್ತಿಯ ಎತ್ತಿನಗುಡ್ಡದಲ್ಲಿ ತುಂಬಿನಿಂತ ಚರಂಡಿಗಳು

ಮನೋಜ ಕುಮಾರ್ ಗುದ್ದಿ
Published 20 ಜನವರಿ 2017, 9:09 IST
Last Updated 20 ಜನವರಿ 2017, 9:09 IST
ಧಾರವಾಡದ 3ನೇ ವಾರ್ಡ್‌ ವ್ಯಾಪ್ತಿಯ ಎತ್ತಿನಗುಡ್ಡದ ಗ್ರಾಮದಲ್ಲಿ ಯುವಕ ಅಕ್ಷಯಕುಮಾರ್‌ ಗಟಾರು ಸ್ವಚ್ಛಗೊಳಿಸಿದ ದೃಶ್ಯ ಗುರುವಾರ ಕಂಡು ಬಂತು. ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ
ಧಾರವಾಡದ 3ನೇ ವಾರ್ಡ್‌ ವ್ಯಾಪ್ತಿಯ ಎತ್ತಿನಗುಡ್ಡದ ಗ್ರಾಮದಲ್ಲಿ ಯುವಕ ಅಕ್ಷಯಕುಮಾರ್‌ ಗಟಾರು ಸ್ವಚ್ಛಗೊಳಿಸಿದ ದೃಶ್ಯ ಗುರುವಾರ ಕಂಡು ಬಂತು. ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ   

ಹುಬ್ಬಳ್ಳಿ:  ಧಾರವಾಡ–ಬೆಳಗಾವಿ ರಸ್ತೆಯಲ್ಲಿ ಬರುವ ಕೃಷಿ ವಿ.ವಿ. ಪಕ್ಕದಲ್ಲಿ ಬಲಕ್ಕೆ ಹೊರಳಿದರೆ ಎರಡು ಕಿ.ಮೀ. ಅಂತರದಲ್ಲಿ ಎತ್ತಿನಗುಡ್ಡ ಗ್ರಾಮವಿದೆ.
ಅಲ್ಲಿನ ದೊಡ್ಡಗೌಡರ ಓಣಿಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದಾಗ ತಮ್ಮ ಮನೆಯ ಮುಂದಿನ ಗಟಾರವನ್ನು ಅಕ್ಷಯಕುಮಾರ್‌ ಕುರಬೆಟ್ಟ ಕುರುಪಿ ಹಿಡಿದು ಸ್ವಚ್ಛ ಮಾಡುತ್ತಿದ್ದರು. ಮನೆಯ ಸದಸ್ಯರು ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಇಂತಹ ದೃಶ್ಯ ಇಂದು ನಿನ್ನೆಯದಲ್ಲ. ಹೂಳು ತುಂಬಿಕೊಂಡು ಗಟಾರ ಕಟ್ಟಿಕೊಂಡು ಕೊಳಚೆ ನೀರು ಮನೆಯ ಮುಂದೆ ನಿಂತಾಗಲೆಲ್ಲ ಅಕ್ಷಯಕುಮಾರ್‌ ಕುರಬೆಟ್ಟ ‘ಸ್ವಚ್ಛ ಗಟಾರ ಅಭಿಯಾನ’ವನ್ನು ಮಾಡುತ್ತಲೇ ಇರುತ್ತಾರೆ. ಉದ್ದನೆಯ ಚೂಪು ಮೂತಿಯ ಸಲಿಕೆಗಳೂ ಇವರಲ್ಲಿಲ್ಲ, ಮಹಾನಗರ ಪಾಲಿಕೆಯು ನಿಯೋಜಿಸಿದ ಪೌರಕಾರ್ಮಿಕರು ಇತ್ತ ಸುಳಿಯುವುದೇ ಇಲ್ಲವಂತೆ!

ನಗರದ ಸಂಪರ್ಕದಿಂದ ದೂರವೇ ಉಳಿದಿರುವ ಎತ್ತಿನಗುಡ್ಡದಲ್ಲಿ ಇಂದಿಗೂ ಸುಸ್ಥಿತಿಯಲ್ಲಿರುವ ಗಟಾರಗಳಿಲ್ಲ. ಕಸ ಹಾಕುವ ಕಂಟೇನರ್‌ಗಳಿಲ್ಲ. ರಸ್ತೆ ಪಕ್ಕದಲ್ಲಿ ಬಿದ್ದ ಕಸವನ್ನು ಒಯ್ಯುವ ಗಾಡಿಗಳೂ ನಿಯಮಿತವಾಗಿ ಬರುವುದಿಲ್ಲ. ರಸ್ತೆಗಳ ಪಾಡಂತೂ ಕೇಳುವುದೇ ಬೇಡ.

ಸುಮಾರು 5 ಸಾವಿರ ಜನಸಂಖ್ಯೆ ಇರುವ ಈ ಗ್ರಾಮ ಅಷ್ಟೇನೂ ದೊಡ್ಡದಲ್ಲ. ಗ್ರಾಮ ಪಾಲಿಕೆಯ ವ್ಯಾಪ್ತಿಗೆ ಬಂದಿದ್ದರೂ ಪಾಲಿಕೆಯಿಂದ ದೊರೆಯುವ ಎಲ್ಲ ಸೌಲಭ್ಯಗಳೂ ಇಲ್ಲಿ ದೊರೆತಿಲ್ಲ. ಗ್ರಾಮದ ಪ್ರಮುಖ ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಶಾಲೆಯ ಎದುರಿನ ಗಟಾರನ್ನು ಸ್ವಚ್ಛಗೊಳಿಸದೇ ಎಷ್ಟು ದಿನಗಳಾಯಿತು ಎಂಬುದು ಅಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿರುವ ಮಹಾದೇವ ಅವರಿಗೂ ಗೊತ್ತಿಲ್ಲ.

‘ಗ್ರಾಮದ ಮೇಲಿನ ಭಾಗದಿಂದ ಬರುವ ಗಟಾರದ ನೀರು ಇನ್ನೊಂದು ಗಟಾರನ್ನು ಸೇರುವಲ್ಲಿ ಸಿ.ಡಿ. ಇಲ್ಲದೇ ಇರುವುದರಿಂದ ಮಣ್ಣಿನಲ್ಲಿ ಹರಿದು ಹಂದಿಗಳ ಆಶ್ರಯಕ್ಕ ಕಾರಣವಾಗಿದೆ. ಈ ನೀರು ಇಡೀ ವಾತಾವರಣವನ್ನು ಆವರಿಸಿಕೊಂಡು ವಾಕರಿಕೆ ತರಿಸುತ್ತಿದೆ. ತಿಂಗಳಾದರೂ ಈ ಗಟಾರವನ್ನು ಸ್ವಚ್ಛಗೊಳಿಸುವುದಿಲ್ಲ’ ಎಂದು ಗ್ರಾಮದ ಯುವಕ ರಾಜು ಗುಡದೂರ ಬೇಸರ ವ್ಯಕ್ತಪಡಿಸುತ್ತಾರೆ.

‘70  ಪೌರಕಾರ್ಮಿಕರು  ಬೇಕು’
‘20 ವರ್ಷಗಳ ಹಿಂದೆ ಆದ ಸ್ವಚ್ಛತಾ ಕಾರ್ಯವನ್ನು ಗುತ್ತಿಗೆ ಹಿಡಿದವರೇ ಈಗಲೂ ಇದ್ದಾರೆ. ಹಳೆಯ ಟೆಂಡರ್‌ ಆಗಿದ್ದರಿಂದ ಹೆಚ್ಚು ಪೌರಕಾರ್ಮಿಕರನ್ನು ಬಳಸಿಕೊಳ್ಳುವಂತಿಲ್ಲ. ಬಳಸಿದರೆ ಅವರಿಗೆ ಪಾಲಿಕೆ ವೇತನವನ್ನೂ ನೀಡುವುದಿಲ್ಲ ಎನ್ನುತ್ತಾರೆ.

ಹೀಗಾಗಿ 40 ಸಾವಿರ ಜನಸಂಖ್ಯೆ ಇರುವ ನನ್ನ ವಾರ್ಡ್‌ ಸ್ವಚ್ಛ ಮಾಡಲು ಕೇವಲ 28 ಪೌರಕಾರ್ಮಿಕರಿದ್ದಾರೆ. ಕನಿಷ್ಠವೆಂದರೂ 65ರಿಂದ 70 ಪೌರಕಾರ್ಮಿಕರು ಬೇಕು’ ಎನ್ನುತ್ತಾರೆ ಪಾಲಿಕೆಯಲ್ಲಿ 3ನೇ ವಾರ್ಡ್‌ ಪ್ರತಿನಿಧಿಸುವ ಎತ್ತಿನಗುಡ್ಡದವರೇ ಆದ ಜೆಡಿಎಸ್‌ನ ಶ್ರೀಕಾಂತ ಜಮನಾಳ.

‘ಪೌರಕಾರ್ಮಿಕರನ್ನು ನಗರ ಪ್ರದೇಶಗಳಾದ ಸಂಪಿಗೆ ನಗರ, ಮಲ್ಲಿಗವಾಡ ಬೈಪಾಸ್‌ ರಸ್ತೆ, ಕೆಎಚ್‌ಬಿ ಕಾಲೊನಿ, ಪೊಲೀಸ್‌ ಕ್ವಾರ್ಟರ್ಸ್‌ ಕಡೆ ಸ್ವಚ್ಛತಾ ಕೆಲಸಕ್ಕ ಬಳಸಿಕೊಳ್ಳುತ್ತಿದ್ದೇವೆ. ಎತ್ತಿನಗುಡ್ಡದವರು ಎಲೆಕ್ಷನ್‌ನಲ್ಲಿ ಆರಿಸಿ ಬಂದರೆ ತಮ್ಮ ಊರನ್ನಷ್ಟೇ ಉದ್ಧಾರ ಮಾಡುತ್ತಾರೆ ಎಂಬ ಆರೋಪ ಕೇಳಿ ಬರುತ್ತದೆ.

ಹೀಗಾಗಿ, ಮೊದಲು ಎತ್ತಿನಗುಡ್ಡ ಗ್ರಾಮ ಬಿಟ್ಟು ಉಳಿದೆಡೆ ಅವಶ್ಯವಿರುವ ಕೆಲಸ ಮಾಡಿಸುತ್ತಿದ್ದೇನೆ. ಆ ನಂತರ ನಮ್ಮೂರಿನ ಕೆಲಸ ಮಾಡಿಸುತ್ತೇನೆ. 6ರಿಂದ 7 ಸಿ.ಡಿ. (ಕ್ರಾಸ್ಡ್‌ ಡ್ರೈನೇಜ್‌) ನಿರ್ಮಿಸುತ್ತಿದ್ದೇನೆ. ಐದು ಜನ ಹೆಚ್ಚುವರಿ ಪೌರಕಾರ್ಮಿಕರನ್ನು ಕೇಳಿದ್ದೇನೆ. ಸಚಿವ ವಿನಯ ಕುಲಕರ್ಣಿ ಅವರಿಗೆ ಹೇಳಿ ಒಂದು ಆಟೊ ಟಿಪ್ಪರ್ ತರಿಸಿಕೊಂಡಿದ್ದೇನೆ. ಇದು ಸಂಪಿಗೆ ನಗರ ಸುತ್ತಮುತ್ತ ಕಸ ಸಂಗ್ರಹಿಸುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.