ADVERTISEMENT

ಮರವುಡ್ಲ ಕಾಯಿ ತಿಂದ ಮಕ್ಕಳಿಗೆ ವಾಂತಿ, ಭೇದಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 7:28 IST
Last Updated 7 ಜುಲೈ 2017, 7:28 IST

ಗುಡಗೇರಿ: ಕುಂದಗೋಳ ತಾಲ್ಲೂಕಿನ ರಟ್ಟಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 35 ವಿದ್ಯಾರ್ಥಿಗಳು ಗುರುವಾರ ಸಂಜೆ  ಮರವುಡ್ಲ ಕಾಯಿ ತಿಂದ ಪರಿಣಾಮ ವಾಂತಿ ಭೇದಿ ಕಾಣಿಸಿಕೊಂಡಿತು. ಗಾಬರಿಗೊಂಡ ಪಾಲಕರು, ಮಕ್ಕಳನ್ನು ಗುಡಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.

ಆಸ್ಪತ್ರೆಯಲ್ಲಿರುವ ಎಲ್ಲ ಹಾಸಿಗೆಗಳು ಮಕ್ಕಳಿಂದ ತುಂಬಿ ತುಳುಕಿದವು. ಹಾಸಿಗೆ ಇಲ್ಲದ ಕಾರಣ ಕೆಲವು ಮಕ್ಕಳನ್ನು ನೆಲದ ಮೇಲೆ ಮಲಗಿಸಿ, ಚಿಕಿತ್ಸೆ ನೀಡಲಾಯಿತು. ಘಟನೆಯಿಂದ ಗಾಬರಿಗೊಂಡಿದ್ದ ಮಕ್ಕಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ವೈದ್ಯ ಸಿಬ್ಬಂದಿ ಹರಸಾಹಸ ಪಟ್ಟರು.

ತೀವ್ರ ಅಸ್ವಸ್ಥಗೊಂಡ ಎಂಟು ವಿದ್ಯಾರ್ಥಿಗಳನ್ನು ತಾಲ್ಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಯಿತು.  ಚಿಕಿತ್ಸೆ ಕೊಡಿಸಲು ಪಾಲಕರು ಆಸ್ಪತ್ರೆ ಸಿಬ್ಬಂದಿಯ ದುಂಬಾಲು ಬಿದ್ದು, ಗೋಗರೆಯುವ ದೃಶ್ಯ ಕಂಡು ಬಂದಿತು. ತೀವ್ರವಾಗಿ ಬಳಲಿದ್ದ ಕೆಲ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ವಿದ್ಯಾಸಂಸ್ಥೆಯ ವಾಹನದಲ್ಲಿ  ಹುಬ್ಬಳ್ಳಿ ಕಿಮ್ಸ್‌ಗೆ ಕರೆದೊಯ್ಯಲಾಯಿತು.

ADVERTISEMENT

ಉರುಳಿ ಬಿದ್ದ ಖಾಸಗಿ ಬಸ್‌: ಪ್ರಯಾಣಿಕರಿಗೆ ಗಾಯ
ಹುಬ್ಬಳ್ಳಿ: ಬೆಂಗಳೂರಿನಿಂದ ಮಹಾರಾಷ್ಟ್ರದ ಸಾತಾರಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದು ಇಲ್ಲಿನ ವರೂರು ಕ್ರಾಸ್‌ನಲ್ಲಿ ಗುರುವಾರ ಬೆಳಿಗ್ಗೆ 5.30ಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಪ್ರಯಾಣಿಕರು ತೀವ್ರ ಗಾಯಗೊಂಡಿದ್ದಾರೆ.

ಗಾಯಗೊಂಡಿರುವ ಪ್ರಯಾಣಿಕರಾದ ಮಹಾರಾಷ್ಟ್ರದ ಸಾತಾರಾದ ಅನಿಕೇತ್‌ ದತ್ತಾತ್ರೇಯ(23), ಪುಣೆಯ ಬಾನ್‌ಸಾಹೇಬ್‌ ಜಂಜೀರೆ(40) ಮತ್ತು ಗುಜರಾತ್‌ನ ಜಾಮ್‌ನಗರದ ಸುನೀಲ್ ವಿಠಲಬಾಯಿ ಕಟೇಸಿಯಾ(27)ಮತ್ತು ಜನಕ ವಿಠಲಬಾಯಿ ಕಟೇಸಿಯಾ(25) ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.

ಚಾಲಕನ ಅಜಾಗರೂಕತೆಯಿಂದ ಬಸ್‌ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಘಟನೆ ನಡೆದ ತಕ್ಷಣ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಯಾಣಿಕರು ಬದಲಿ ವ್ಯವಸ್ಥೆ ಮಾಡಿಕೊಂಡು ಸಾತಾರಾಕ್ಕೆ ತೆರಳಿದರು. ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇಸ್ಪೀಟ್ ಆಡುತ್ತಿದ್ದ ವರ ಬಂಧನ
ಧಾರವಾಡ: ಇಲ್ಲಿನ ಚರಂತಿಮಠ ಉದ್ಯಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ ಆರು ಜನರನ್ನು ಶಹರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತರಿಂದ ₹ 820 ನಗದು ಹಾಗೂ ಇಸ್ಪೀಟ್‌ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ಪಲ್ಟಿ: ಗಾಯ
ಧಾರವಾಡ: ಹೈದರಾಬಾದಿನಿಂದ ಗೋವಾ ರಾಜ್ಯದ ಕಡೆ ಹೋಗುತ್ತಿದ್ದ ಕಾರು ತಾಲ್ಲೂಕಿನ ಶಿವಳ್ಳಿ ಬಳಿ ಗುರುವಾರ ಪಲ್ಟಿ ಆಗಿ ಮಹಿಳೆ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ  ದೀಪ್ತಿ ಸಾಗಲಾನಿ (50) ಮೃತಪಟ್ಟಿದ್ದಾರೆ. ಅವರ ಪತಿ ಭರತ್ ಸೇರಿದಂತೆ ಇಬ್ಬರು ಮಕ್ಕಳಿಗೆ ಗಾಯವಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.