ADVERTISEMENT

ಮಲ್ಲೇಶ್ವರನಗರ: ನಳದಲ್ಲಿ ಕೊಳಚೆ ನೀರು

ನಿವಾಸಿಗಳ ಸಂಕಷ್ಟಕ್ಕೆ ನಗರಪಾಲಿಕೆ ಸದಸ್ಯರು, ಅಧಿಕಾರಿಗಳಿಗಿಲ್ಲ ಅನುಕಂಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:23 IST
Last Updated 12 ಜನವರಿ 2017, 9:23 IST
ಮಲ್ಲೇಶ್ವರನಗರ: ನಳದಲ್ಲಿ ಕೊಳಚೆ ನೀರು
ಮಲ್ಲೇಶ್ವರನಗರ: ನಳದಲ್ಲಿ ಕೊಳಚೆ ನೀರು   
ಹುಬ್ಬಳ್ಳಿ: ‘ಮನೆ ಮುಂದೇನೇ ಕೊಳಚೆ ನೀರು ನಿಂತೈತಿ, ಮೇಲಿಂದ ಬರೋ ಒಳಚರಂಡಿ ನೀರೆಲ್ಲ ಇಲ್ಲೇ ನಿಲ್ತೈತಿ. ಇದೀಗ ಕೊಳಚೆ ನೀರು ನಳದ ನೀರಿಗೂ ಸೇರಿಕೊಂಡೈತಿ, ಆರು ತಿಂಗಳಿಂದ ನಮ್ಮ ಪಾಡು ಕೇಳೋರಿಲ್ಲ. ಕಾರ್ಪೊರೇಟರ್‌, ಅಧಿಕಾರಿಗಳಿಗೆ ಎಷ್ಟ ಬಾರಿ ಕಂಪ್ಲೈಂಟ್‌ ಕೊಟ್ರೂ ಯಾರೂ ತಿರುಗಿನೋಡಿಲ್ರಿ...’
 
ಹಳೇಹುಬ್ಬಳ್ಳಿಯ ಗುಡಿಹಾಳ ರಸ್ತೆಯಲ್ಲಿರುವ ಮಲ್ಲೇಶ್ವರನಗರದ ನಿವಾಸಿಗಳ ಸಂಕಷ್ಟದ ಮಾತುಗಳಿವು. ಹನುಮನ ದೇವಸ್ಥಾನದ ಬಳಿ ಇರುವ ಈ ಮಲ್ಲೇಶ್ವರನಗರದಲ್ಲಿ ರಸ್ತೆ, ಚರಂಡಿ ಇಲ್ಲ. ಆದರೆ, ಮೇಲ್ಭಾಗದ ಪ್ರಭಾತ್‌ ಕಾಲೊನಿ (ಸಾಲಿ ಫ್ಲಾಟ್‌) ಪ್ರದೇಶದಿಂದ ಒಳಚರಂಡಿ ಕೊಳಕು ಮಾತ್ರ ಮನೆ ಮುಂದೆಯೇ ಬಂದು ನಿಲ್ಲುತ್ತದೆ. ಜತೆಗೆ ಹಂದಿಗಳ ಬೀಡು ಇದಾಗಿದೆ.
 
ಅಭಿವೃದ್ಧಿಯಾಗುತ್ತಿರುವ ಪ್ರದೇಶವಾಗಿರುವ ಗೋಡ್ಖೆ ಪ್ಲಾಟ್‌ನಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ ತುಂಬಿ ಹರಿಯುತ್ತಿವೆ. ಇದರ ಕೊಳಚೆ ನೀರು ಮಲ್ಲೇಶ್ವರನಗರದ ಹನುಮನ ದೇವಸ್ಥಾನದವರೆಗೆ ಮೋರಿ ರೂಪದಲ್ಲಿ ರಸ್ತೆ, ಮನೆಗಳ ಮುಂದೆ ಅಡ್ಡಾದಿಟ್ಟಿಯಾಗಿ ಹರಿಯುತ್ತಿದೆ. ದೇವಸ್ಥಾನದ ನಂತರ ರಸ್ತೆ ತುಂಬೆಲ್ಲ ಕೊಳಚೆ ನೀರು ತುಂಬಿಕೊಂಡಿದ್ದು, ಮನೆಗಳಿಗೆ ಹೋಗಲೂ ಕಷ್ಟವಾಗಿದೆ. ‘ಮನೆಗಳ ಮುಂದೆ ಕೊಳಚೆ ನೀರಿದ್ದು, ಹಂದಿಗಳು ಇಲ್ಲೇ ಓಡಾತ್ತಿವೆ. ದುರ್ವಾಸನೆಯಿಂದಾಗಿ ಉಸಿರಾಡಲೂ ತೊಂದರೆಯಾಗಿದೆ. ಮಕ್ಕಳನ್ನು ಹೊರೆ ಬಿಡಲು ಸಾಧ್ಯವಾಗುತ್ತಿಲ್ಲ. ಬಾಗಿಲು ಮುಚ್ಚಿಕೊಂಡೇ ಕೂರಬೇಕಾಗಿದೆ’ ಎಂದು ಸಂಕಷ್ಟ ತೋಡಿಕೊಂಡರು.
 
ಸೆಪ್ಟಿಕ್ ಟ್ಯಾಂಕ್‌: ‘ಮಲ್ಲೇಶ್ವರನಗರದಲ್ಲಿ ಇನ್ನೂ ಒಳಚರಂಡಿ ವ್ಯವಸ್ಥೆ ಆಗಿಲ್ಲ. ಇನ್ನು ಮೇಲ್ಭಾಗದಲ್ಲಿರುವ ಸಾಲಿ ಪ್ಲಾಟ್‌ನಿಂದ ಒಳಚರಂಡಿ ನೀರು ಹೊರಕ್ಕೆ ಹರಿದುಬಿಡಲು ಯೋಜನೆ ರೂಪಿಸಿದ್ದರೂ ಇನ್ನೂ ಅನುಷ್ಠಾನವಾಗಿಲ್ಲ. ಇಲ್ಲಿ ಎತ್ತರದ ಪ್ರದೇಶ ಎದುರಾಗಿದ್ದು, ಪೈಪ್‌ಲೈನ್‌ ಹಾಕಬೇಕೆಂದರೆ ಐದಾರು ಕಿಮೀ ದೂರ ಕ್ರಮಿಸಬೇಕು. ಇದಕ್ಕೆ ಕೋಟ್ಯಂತರ ವೆಚ್ಚವಾಗುತ್ತದೆ. ಅದಕ್ಕಾಗಿ ಸೆಪ್ಟಿಕ್‌ ಟ್ಯಾಂಕ್‌ ಮಾಡಿ ಅದರಲ್ಲೇ ಸಂಗ್ರಹಿಸಬೇಕಿದೆ. ಸುಮಾರು ₹30 ಲಕ್ಷ ವೆಚ್ಚವಾಗಲಿದ್ದು, ಆಯುಕ್ತರು ಕಡತಕ್ಕೆ ಸಹಿ ಹಾಕಿದ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ. ಸದ್ಯಕ್ಕೆ ಕೊಳಚೆ ನೀರು ನಿವಾರಿಸುವ ಕಾರ್ಯ ಮಾಡಲಾಗುತ್ತದೆ’ ಎಂದು 39ನೇ ವಾರ್ಡ್‌ನ ಕಾರ್ಪೊರೇಟರ್‌ ದೀಪಾ ನಾಗರಾಜ ಗೌರಿ ತಿಳಿಸಿದರು.
 
***
ಮೇಲ್ಗಡೆ ಚೇಂಬರ್‌ ಓಪನ್‌ ಆಗೈತಿ. ಅಲ್ಲಿಂದ ಡ್ರೈನೇಜ್ ನೀರೆಲ್ಲ ಮನೆಗೇ ಬರ್ತೈತಿ. ಮಕ್ಕಳು ಇಲ್ಲೆಲ್ಲ ಓಡಾಡೋದೆ ಕಷ್ಟ. ಯಾರಿಗೇಳಿದ್ರೂ ಏನೂ ಆಗಿಲ್ಲ
-ರೇಣುಕಾ
ಸ್ಥಳೀಯ ನಿವಾಸಿ
 
***
ಕಾರ್ಪೊರೇಟರ್‌ಗೆ, ಅಧಿಕಾರಿಗಳಿಗೆ ಕಂಪ್ಲೈಂಟ್‌ ಕೊಟ್ವಿ. ಆದ್ರೆ ಯಾರೂ ಈ ಕಡೆ ಬರೋದಿಲ್ಲ. ನಿಮಗೆ ಕಷ್ಟ ಐತಿ ಅಂತಾರೆ, ಅದಕ್ಕೆ ಪರಿಹಾರ ಕೊಡಲ್ರಿ
-ಮಂಜುಳಾ ಅಮರಗೋಡ್‌
ಸ್ಥಳೀಯ ನಿವಾಸಿ
 
***
ಟ್ಯಾಕ್ಸ್‌ ತುಂಬ್ತೀವಿ, ನಳದ ಬಿಲ್‌ ಕಟ್ತೀವಿ. ಆದ್ರೂ ಈಗ ನಮಗೆ ಕುಡಿ ಯೋ ನೀರಿಗೂ ತೊಂದರೆ ಆಗೈತಿ.  ಪೈಪ್‌ಗೆ ಕೊಳಚೆ ನೀರು ಸೇರಿಕೊಂಡೈತಿ
-ವೀಣಾ ಹಿರೇಮಠ
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.