ADVERTISEMENT

‘ಮಿತ ಬಳಕೆಯಿಂದ ಸಮಸ್ಯೆ ಪರಿಹಾರ’

ವಿವಿಧ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಜಲದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 8:42 IST
Last Updated 23 ಮಾರ್ಚ್ 2017, 8:42 IST

ಹುಬ್ಬಳ್ಳಿ: ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಾರ್ತಾ ಇಲಾಖೆ, ಜಲಮಂಡಳಿಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ದಿನದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜೆ.ಎಂ.ಎಫ್.ಸಿ, 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ರೆಹನಾ ಸುಲ್ತಾನ ಕಾರ್ಯಕ್ರಮ ಉದ್ಘಾಟಿಸಿದರು. ಹುಬ್ಬಳ್ಳಿ ತಾಲ್ಲೂಕು ವಕೀಲರ ಸಂಘ ಅಧ್ಯಕ್ಷತೆ ಡಿ.ಎಂ. ನರಗುಂದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್. ಕರಿಯಪ್ಪ, ಸಹಾಯಕ ಸರ್ಕಾರಿ ಅಭಿಯೋಜಕ ಪ್ರಕಾಶ ಎಸ್ ಸುಂಕದ ಭಾಗವಹಿಸಿದ್ದರು.

ವಕೀಲ ವಿಶ್ವನಾಥ ಬಿಜಗತ್ತಿ ವಿಶ್ವ ಜಲ ದಿನಾಚರಣೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ‘ನಮ್ಮ ದೇಶದಲ್ಲಿ ಪ್ರತಿ 21 ಸೆಕೆಂಡಿಗೆ ಕಲುಷಿತ ನೀರಿನಿಂದ ಒಬ್ಬ ವ್ಯಕ್ತಿ ಸಾಯುತ್ತಿದ್ದಾನೆ. ನೀರು ಕಲುಷಿತವಾಗದ ರೀತಿಯಲ್ಲಿ ಎಲ್ಲರೂ ಜಾಗ್ರತೆ ವಹಿಸಬೇಕು. ವಿಶ್ವ ಜಲ ದಿನಾಚರಣೆ ಅಂಗವಾಗಿ ಇಡೀ ಜಗತ್ತಿಗೆ ನೀರನ್ನು ಮಿತವಾಗಿ ಬಳಸಿ ಎಂದು ಸಂದೇಶ ನೀಡಲಾಗುತ್ತಿದೆ.

ಅಮೆರಿಕ ದಲ್ಲಿ ಒಬ್ಬ ವ್ಯಕ್ತಿ ಮುಂಜಾನೆಯಿಂದ ಮಧ್ಯಾಹ್ನದವರಿಗೆ ಬಳಸುವಷ್ಟು ನೀರನ್ನು ಆಫ್ರಿಕಾದಲ್ಲಿ ಒಂದು ತಿಂಗಳು ಉಪಯೋಗಿಸುತ್ತಾರೆ. ಆದ್ದರಿಂದ ನೀರನ್ನು ಮಿತವಾಗಿ ಬಳಸಿಕೊಂಡರೆ ನೀರಿನ ಕೊರತೆ ತಪ್ಪಿಸಬಹುದು’ ಎಂದು ಹೇಳಿದರು.

‘ನಮ್ಮ ಜೀವನದಲ್ಲಿ ನಮಗೆ ಬೇಕಾದ ಮೂಲ ಸೌಕರ್ಯಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ನೀರು ಬೇಕೆಂದಾಗ ಎಲ್ಲರಿಗೂ ನೀರೇ ಬೇಕು. ಅದಕ್ಕೆ ಬೇರೆ ಯಾವ ಪರ್ಯಾಯ ವ್ಯವಸ್ಥೆ ಸಾಧ್ಯವಿಲ್ಲ’ ಎಂದರು.

‘ಪ್ರತಿ ನಗರದ ಒಟ್ಟು ಶೇ 45ರಷ್ಟು ಮರ ಗಿಡ ಮತ್ತು ವನಗಳಿಂದ ಕೂಡಿದಾಗ ಮಾತ್ರ ಅಲ್ಲಿಯ ಜನ ಒಳ್ಳೆಯ ಮಳೆ ಗಾಳಿ ಮತ್ತು ನೀರನ್ನು ಪಡೆಯಬಹುದು. ಆದ್ದರಿಂದ ಕಾಡನ್ನು ನಾಶ ಮಾಡದೇ ಗಿಡ ಮರಗಳನ್ನು ನೆಟ್ಟು ನಾಡನ್ನು ರಕ್ಷಿಸುವ ಮೂಲಕ ನೀರನ್ನು ಹೆಚ್ಚಿನ ಮಟ್ಟಿಗೆ ವೃದ್ಧಿಸಿಬೇಕು’ ಎಂದು ಹೇಳಿದರು. ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್. ಕೆ. ಉಮೇಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT