ADVERTISEMENT

ರಜೆ ಹಾಕದೆ ಬರ ನಿರ್ವಹಿಸಿ: ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:56 IST
Last Updated 15 ಮಾರ್ಚ್ 2017, 6:56 IST

ಧಾರವಾಡ: ಜಿಲ್ಲೆಯಲ್ಲಿ ಬರದ ತೀವ್ರತೆ ಹೆಚ್ಚಿದೆ. ಕುಡಿಯುವ ನೀರು ಸೇರಿ  ಹಲವು ರೀತಿಯ ಸಮಸ್ಯೆ  ಇವೆ. ಹೀಗಾಗಿ ಅಧಿಕಾರಿಗಳು ರಜೆ ಹಾಕದೆ ಬರ ನಿರ್ವಹಣೆ ಕಡೆಗೆ ಗಮನ ನೀಡ­ಬೇಕು ಎಂದು ಬರ ಅಧ್ಯಯನ ಕುರಿತ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆದ ಸಚಿವ ಆರ್‌.ವಿ.ದೇಶಪಾಂಡೆ ಸೂಚಿಸಿದರು.

ಧಾರವಾಡ ತಾಲ್ಲೂಕಿನ ಮಾರಡಗಿ, ಹೆಬ್ಬಳ್ಳಿ ಮತ್ತು ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು, ಕುಸುಗಲ್‌ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಅವಲೋಕಿಸಿದರು.

ಪ್ರವಾಸ ಬಳಿಕ ಸಚಿವರು ನಗರದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಬರ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿ­ಸಿ­ದರು. ರಜೆ ಹಾಕದೆ ಕೆಲಸ ಮಾಡಿ ಎಂದು ಅವರು ಸಲಹೆ ನೀಡಿದರು.

ADVERTISEMENT

ಕುಡಿಯುವ ನೀರು ಮತ್ತು ಮೇವಿಗೆ ಮೊದಲ ಆದ್ಯತೆ ನೀಡಬೇಕು.

ಉದ್ಯೋ­ಗ ಖಾತರಿ ಯೋಜನೆಯಡಿ ಕಾಮ­­ಗಾರಿಗಳನ್ನು ಕೈಗೆತ್ತಿಕೊಂಡು, ಸ್ಥಳೀ­ಯ­ರಿಗೆ ಉದ್ಯೋಗ ಸಿಗುವ ಹಾಗೆ ಮಾಡ­ ­ಬೇಕು ಎಂದು   ಅಧಿಕಾರಿಗಳಿಗೆ ಸೂಚಿ­ಸಿದರು. ಸಚಿವರು ಪ್ರವಾಸ ಸಂದ­ರ್ಭದಲ್ಲಿ ಉದ್ಯೋಗ ಖಾತರಿ ಯೋಜನೆ­ಯಡಿ ಕೈಗೆತ್ತಿಕೊಂಡಿರುವ ಕಾಮಗಾರಿ ಪರಿಶೀಲಿಸಿದರು. ಮೇವು ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಕೆರೆ ಹೊಳೆತ್ತುವ ಕಾಮಗಾರಿ  ವೀಕ್ಷಿಸಿದರು.

ಕಳಪೆ ಮೇವು: ಹೆಬ್ಬಳ್ಳಿಯಲ್ಲಿ ಮೇವು ಬ್ಯಾಂಕ್‌ಗೆ ಸಚಿವರ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ರೈತರು ಮೇವಿನ ಗುಣಮಟ್ಟ ಸರಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ದೇಶಪಾಂಡೆ ತ್ವರಿತವಾಗಿ ವಿಜಯಪುರದಿಂದ ಒಳ್ಳೆ ಮೇವು ತರಿಸುವುದಾಗಿ ಭರವಸೆ ನೀಡಿದರು.

ವಿಮೆಗೆ ಬೇಡಿಕೆ
ಮಾರಡಗಿಯಲ್ಲಿ ಉದ್ಯೋಗ ಖಾತರಿಯಡಿ ದುಡಿಯುತ್ತಿದ್ದ ಜನರು ಆರೋಗ್ಯ ವಿಮೆಗೆ ಬೇಡಿಕೆ ಇಟ್ಟರು.  ಬಳಿಕ ಕುಸುಗಲ್‌ನಲ್ಲಿ 14 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯ ಕಾಮ­ಗಾರಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಊರಿನ ಜನರು ಸ್ಮಶಾನ ಜಾಗಕ್ಕಾಗಿ ಮನವಿ ಅರ್ಪಿಸಿದರು.

‘ನೀರಿನ ಸಮಸ್ಯೆಯಿಂದ ಕಾಡು­ಪ್ರಾಣಿಗಳು ಉತ್ತರ ಕನ್ನಡ ಜಿಲ್ಲೆ ಗಡಿಭಾಗದಿಂದ ನಮ್ಮ ಜಿಲ್ಲೆಯ ಗಡಿ­ಭಾಗಕ್ಕೆ ಬರುತ್ತಿವೆ. ಇದರಿಂದ ಜನರಿಗೆ ತೊಂದ­ರೆಯಾಗಿದೆ. ಬೇಟೆಗಾರರಿಗೆ ಪ್ರಾಣಿ ವಧೆ ಸುಲಭವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಸಚಿವರ ಗಮನಸೆಳೆದರು.

ತಕ್ಷಣ ದೇಶಪಾಂಡೆ ಅವರು ದೂರ­ವಾಣಿ ಮೂಲಕ ಅರಣ್ಯ ಇಲಾಖೆ ಅಧಿ­ಕಾರಿ­ಯೊಂದಿಗೆ ಮಾತನಾಡಿ, ಸೂಕ್ತ ಕ್ರಮ ತೆಗೆದುಕೊಳ್ಳುವ ಸೂಚನೆ ನೀಡಿ­ದರು.

ಲಸಂಪನ್ಮೂಲ ಸಚಿವ ಎಂ.ಬಿ.­ಪಾಟೀಲ್‌, ಶಾಸಕರಾದ ಎನ್‌.ಎಚ್‌.­ಕೋನರಡ್ಡಿ, ಶ್ರೀನಿವಾಸ ಮಾನೆ, ಜಿಲ್ಲಾ­­ ಧಿಕಾರಿ ಡಾ.ಎಸ್‌.ಬಿ.­ಬೊಮ್ಮನ­ಹಳ್ಳಿ, ಜಿಲ್ಲಾ ಪಂಚಾಯಿತಿ ಸಿ.ಇ.ಒ ಡಾ.ಆರ್.­ಸ್ನೇಹಲ್‌ ಸಭೆಯಲ್ಲಿ ಹಾಜರಿದ್ದರು.

3.15 ಟಿಎಂಸಿ ನೀರು ಲಭ್ಯ
ಮಲಪಭಾ ಅಣೆಕಟ್ಟೆಯಲ್ಲಿ ಒಟ್ಟು 109 ದಿನಕ್ಕೆ ಸಾಕಾಗುವಷ್ಟು ನೀರು ಲಭ್ಯ ಇದೆ. ಅವಳಿ ನಗರದ ಜತೆಗೆ ಬೈಲಹೊಂಗಲ, ಸವದತ್ತಿ, ರಾಮ­ದುರ್ಗ ಮೊದಲಾದ ತಾಲ್ಲೂಕುಗಳಿಗೆ ಈ ನೀರು ಸಾಕಾಗಲಿದೆ ಎಂದು ಸಚಿವ ಎಂ.ಬಿ.­ಪಾಟೀಲರಿಗೆ ಅಧಿಕಾರಿಗಳು ತಿಳಿಸಿದರು.

ಆರಂಭದಲ್ಲಿ ಅಧಿಕಾರಿಗಳು 2.3 ಟಿಎಂಸಿ ಅಡಿ ನೀರು ಇದೆ ಎಂದು ಹೇಳಿದರು. ಈ ಕುರಿತು ಸ್ಪಷ್ಟನೆ ಕೇಳಿದ ಸಚಿವರು, ‘ದಾಖಲೆಗಳಲ್ಲಿ 3.15 ಟಿಎಂಸಿ ಅಡಿ ನೀರು ಎಂದಿದೆ. ಯಾವುದು ಸತ್ಯ ಎಂದು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿಗಳು ಜೂನ್‌ವರೆಗೆ ಸಮಸ್ಯೆ ಇಲ್ಲ ಎಂದರು. ಕುಡಿಯುವುದಕ್ಕೆ ಬಿಟ್ಟು ಬೇರೆ ಯಾವುದೇ ಉದ್ದೇಶಗಳಿಗೆ ನೀರು ಬಳಸದಂತೆ ಸೂಚಿಸಿದರು.

**

ಕಾರ್ಯಪಡೆಗೆ ₹40 ಲಕ್ಷ ಬಿಡುಗಡೆ

ಧಾರವಾಡ: ಬರ ಪರಿಸ್ಥಿತಿ ನಿರ್ವಹಿಸಲು ಹಣಕಾಸಿನ ಕೊರತೆ ಇಲ್ಲ. ಪ್ರತಿ ತಾಲ್ಲೂಕು ಕಾರ್ಯಪಡೆಗೆ  ಈ ಹಿಂದೆ ನೀಡಿದ್ದ ₹60 ಲಕ್ಷದ ಜೊತೆಗೆ ಹೆಚ್ಚುವರಿಯಾಗಿ ₹40 ಲಕ್ಷ  ಒದಗಿಸಲಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ 1.20 ಲಕ್ಷ  ರೈತರಿಗೆ ₹130 ಕೋಟಿ ಇನ್‌ಪುಟ್ ಸಬ್ಸಿಡಿ ಅಗತ್ಯವಿದೆ. ಈಗ 56,470 ರೈತರಿಗೆ 36.91 ಕೋಟಿ ಸಬ್ಸಿಡಿ ಬಿಡುಗಡೆಯಾಗಿದೆ. ಬಾಕಿ ಹಣ ಶೀಘ್ರ ದೊರೆಯಲಿದೆ ಎಂದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಮಲಪ್ರಭಾ ಬಲದಂಡೆ ಕಾಲುವೆಯ ಶಾಶ್ವತ ದುರಸ್ತಿಗೆ ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ ಹೈನುಗಾರಿಕೆ ವೃತ್ತಿಯಲ್ಲಿರುವ ಗೌಳಿ ಸಮು­ದಾಯಕ್ಕೆ ರಿಯಾಯತಿ ದರದಲ್ಲಿ ಮೇವು ಒದಗಿಸಲು ಕ್ರಮ ಕೈಗೊಳ್ಳ­ಬೇಕು ಎಂದರು.  ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್.ಶಿವಳ್ಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.